ಪ್ರಕೃತಿ ವಿಸ್ಮಯಗಳ ಅಧ್ಯಯನ, ಬಳಕೆ ವಿಜ್ಞಾನದ ಮೂಲ ಉದ್ದೇಶ

| Published : Sep 02 2025, 01:00 AM IST

ಸಾರಾಂಶ

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳನ್ನು ಅನ್ವೇಷಣೆ ಮಾಡುವ ಮೂಲಕ ಅಧ್ಯಯನ ನಡೆಸಿ ಜನಸಾಮಾನ್ಯರ ಬಳಕೆಗೆ ಅರ್ಪಣೆ ಮಾಡುವುದೇ ವಿಜ್ಞಾನದ ಮೂಲ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದ್ದಾರೆ.

- ಚನ್ನಗಿರಿ ತಾಲೂಕುಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಬಿಇಒ ಜಯಪ್ಪ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳನ್ನು ಅನ್ವೇಷಣೆ ಮಾಡುವ ಮೂಲಕ ಅಧ್ಯಯನ ನಡೆಸಿ ಜನಸಾಮಾನ್ಯರ ಬಳಕೆಗೆ ಅರ್ಪಣೆ ಮಾಡುವುದೇ ವಿಜ್ಞಾನದ ಮೂಲ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದರು.

ಸೋಮವಾರ ಪಟ್ಟಣದ ಹೊರವಲಯದ ಶ್ರೀ ತರಳಬಾಳು ಶಾಲೆಯ ಅನುಭವ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕುಮಟ್ಟದ ವಿಜ್ಞಾನ ವಿಚಾರಗೋಷ್ಠಿ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಫರ್ಧೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಆಧುನಿಕ ಸಮಾಜದಲ್ಲಿರುವ ನಾವುಗಳು ದೂರದರ್ಶನ, ಮೊಬೈಲ್, ರೇಡಿಯೋ, ವಿಮಾನ, ರಾಕೆಟ್, ಜಲಸಾರಿಗೆ, ಗಣಕಯಂತ್ರ, ಗಡಿಯಾರ ಹೀಗೆ ದಿನನಿತ್ಯ ಬಳಕೆ ಮಾಡುವ ಇಂತಹ ಎಲ್ಲ ಉಪಕರಣಗಳನ್ನು ಕಂಡುಹಿಡಿಯಲು ವಿಜ್ಞಾನಿಗಳಾದವರು ಪ್ರಕೃತಿಯನ್ನು ವಿಸ್ಮಯಗಳಿಂದ ಕಂಡು, ಇನ್ನು ಅನೇಕ ಉಪಕರಣಗಳನ್ನು ಕಂಡುಹಿಡಿದಿದ್ದಾರೆ. ಇವುಗಳು ಜನಸಾಮಾನ್ಯರು ಬಳಸುವಂತಹ ವೈಜ್ಞಾನಿಕ ಸಾಧನಗಳು ಎಂದರು.

ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹಲವು ವಿಧಗಳ ಸಮಸ್ಯೆಗಳು ಉಂಟಾಗುತ್ತಿವೆ. ಸಮಸ್ಯೆಗಳ ನಿವಾರಣೆಗಾಗಿ ಪರಿಹಾರವನ್ನು ಕಂಡುಕೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನಗಳ ಅವಶ್ಯಕತೆಗಳು ಇವೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ವಿಜ್ಞಾನ ವಿಚಾರಗೋಷ್ಠಿಗಳು, ನಾಟಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಎಸ್.ಶಂಕರಪ್ಪ ಮಾತನಾಡಿ ವಿದ್ಯಾರ್ಥಿ ದಿಸೆಯಲ್ಲಿಯೇ ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತರಳಬಾಳು ಶಾಲೆ ಕಾರ್ಯದರ್ಶಿ ಎಂ.ಬಿ.ರಾಜಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಎ.ಎಸ್.ಮಲ್ಲಿಕಾರ್ಜುನಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಣೇಶ್, ವಿಜ್ಞಾನ ಶಿಕ್ಷಕರ ವಿಷಯ ವೇದಿಕೆಯ ಅಧ್ಯಕ್ಷ ಡಿ.ಜಿ.ರಾಮಚಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಶಿಕ್ಷಣ ಸಂಯೋಜಕಿ ರಶ್ಮಿ, ಪ್ರಾಚಾರ್ಯ ರುದ್ರೇಶ್ ವಿ. ಮಠದ್, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.

26 ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಾಟಕ ಸ್ಫರ್ಧೆಯಲ್ಲಿ 5 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

-1ಕೆಸಿಎನ್‌ಜಿ1.ಜೆಪಿಜಿ:

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಉದ್ಘಾಟಿಸಿದರು.