ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಿಮ್ಸ್ ಕಾಲೇಜಿಗೆ ದೇಹದಾನ ಮಾಡುವವರ ಶವಗಳನ್ನು ಸಂರಕ್ಷಿಸಿಟ್ಟುಕೊಂಡು ಅಂಗರಚನಾಶಾಸ್ತ್ರವನ್ನು ಅಧ್ಯಯನ ಮಾಡುವುದು ಈಗ ಹಳೆಯ ವಿಧಾನ. ಅದೂ ಈಗ ಹೈಟೆಕ್ ಆಗಿದೆ. ಕಂಪ್ಯೂಟರ್ ಪರದೆಯ ಮೇಲೆ ಅಂಗರಚನೆ ಪ್ರದರ್ಶನಗೊಳ್ಳುವುದರೊಂದಿಗೆ ಸುಲಭವಾಗಿ ಅಧ್ಯಯನ ಮಾಡುವ ವಿಧಾನ ಜಾರಿಯಾಗಿದೆ. ಅದುವೇ ಸಿಮ್ಯುಲೇಷನ್ ವರ್ಚುವಲ್ ಲ್ಯಾಬ್.
ಟೇಬಲ್‌ನಂತಿರುವ ಬೃಹತ್ ಕಂಪ್ಯೂಟರ್ ಪರದೆಯ ಮಾನವನ ಸಂಪೂರ್ಣ ಅಂಗರಚನೆ ಪ್ರದರ್ಶನಗೊಳ್ಳಲಿದ್ದು, ಅದರ ಮೂಲಕ ವೈದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್, ಪಿಜಿ ವಿದ್ಯಾರ್ಥಿಗಳು ವಿವಿಧ ಅಂಗಾಂಗಗಳ ರಚನೆ ಕುರಿತಂತೆ ಅಧ್ಯಯನವನ್ನು ಮಾಡುವ ಅವಕಾಶವನ್ನು ಮಿಮ್ಸ್‌ನಲ್ಲಿ ಹೊಸದಾಗಿ ಕಲ್ಪಿಸಿಕೊಡಲಾಗಿದೆ.ಶವಗಳನ್ನಿರಿಸಿಕೊಂಡು ಅಧ್ಯಯನ:
ಮೊದಲು ಮಾನವನ ಅಂಗರಚನೆಯನ್ನು ಮರಣಾನಂತರ ಆಸ್ಪತ್ರೆಗೆ ದೇಹದಾನ ಮಾಡಿದವರ ಶವಗಳನ್ನು ಸಂರಕ್ಷಿಸಿಟ್ಟುಕೊಂಡು ಅದರ ಮೂಲಕ ವಿವಿಧ ಅಂಗಾಂಗಗಳ ಕುರಿತಂತೆ ಅಧ್ಯಯನ ಕೈಗೊಳ್ಳಬೇಕಿತ್ತು. ಅದೊಂದು ರೀತಿಯಲ್ಲಿ ಕ್ಲಿಷ್ಟಕರವಾಗಿತ್ತು. ಸುಲಭವಾಗಿ ಅಧ್ಯಯನ ಕೈಗೊಳ್ಳುವುದು ಕಷ್ಟವಾಗುತ್ತಿತ್ತು. ಶವವನ್ನು ತಿರುಗಿಸುವುದು, ಅದನ್ನು ಕೊಯ್ಯುವುದನ್ನೆಲ್ಲಾ ಮಾಡಬೇಕಿತ್ತು.ಇದರ ಜೊತೆಗೆ ದೇಹದಾನ ಮಾಡಿದವರ ಪಾರ್ಥೀವ ಶರೀರ ಕೊಳೆಯದಂತೆ ಸಂರಕ್ಷಣೆ ಮಾಡಲು ಫಾರ್ಮಲಿನ್ ಎಂಬ ರಾಸಾಯನಿಕ ಬಳಸುತ್ತಿದ್ದು ಅದು ಕಣ್ಣು, ಮೂಗಿನ ಮೂಲಕ ಶ್ವಾಸಕೋಶ ಸೇರಿದಂತೆ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿತ್ತು. ಹೊಸ ಮಾದರಿಯ ಅಧ್ಯಯನದಿಂದ ಆ ಭಯ ದೂರವಾದಂತಾಗಿದೆ.
ಮೊಬೈಲ್ ಅಪ್ಲಿಕೇಷನ್ ಮಾದರಿ:ಸಿಮ್ಯುಲೇಷನ್ ವರ್ಚುವಲ್ ಟೇಬಲ್ ಮಾದರಿಯಲ್ಲಿದ್ದು, ಮೊಬೈಲ್ ಅಪ್ಲಿಕೇಷನ್ ಮಾದರಿಯಲ್ಲೇ ಇರುತ್ತದೆ. ಇದರಲ್ಲಿ ಪುರುಷ, ಮಹಿಳೆ, ವೃದ್ಧರು, ಮಕ್ಕಳು, ವಿವಿಧ ಪ್ರಾಣಿಗಳ ಅಂಗರಚನೆಯನ್ನು ಅನಿಮೇಟೆ ಚಿತ್ರಗಳ ಮೂಲಕ ಬಹಳ ಸುಲಭವಾಗಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಾ ರೀತಿಯ ಆಯ್ಕೆಗಳನ್ನು ಕೂಡ ಇಲ್ಲಿ ನೀಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಕೈಬೆರಳ ತುದಿಯಲ್ಲಿ ಎಲ್ಲವನ್ನು ವಿವರಿಸಬಹುದಾದ, ತಿಳಿದುಕೊಳ್ಳುವ ಅವಕಾಶಗಳು ಹೆಚ್ಚಾಗಿವೆ.
ಅಂಗರಚನೆ ಅಧ್ಯಯನ ಸುಲಭ:ಅಂಗರಚನಾಶಾಸ್ತ್ರ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೂಲ ವಿಷಯವಾಗಿರುವುದರಿಂದ ಅಧ್ಯಯನಕ್ಕೆ ಸುಲಭವಾಗುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈ ಸಿಮ್ಯುಲೇಷನ್ ವರ್ಚುವಲ್ ಲ್ಯಾಬ್ ಮೂಲಕ ಅಂಗರಚನೆಯನ್ನು ನೋಡಿಕೊಂಡು ವೈದ್ಯರು ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು. ಚುಚ್ಚುಮದ್ದನ್ನು ಕೈಗೆ ಮತ್ತು ಸೊಂಟಕ್ಕೆ ನೀಡುವಾಗ ಯಾವ ಜಾಗದಲ್ಲಿ ಕೊಡಬೇಕು, ನರಗಳು ಎಲ್ಲೆಲ್ಲಿ ಹಾದುಹೋಗಿರುತ್ತವೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಗುರುತಿಸಿ ಹೇಳಬಹುದು. ಇದನ್ನು ಗೋಡೆಗಳ ಮೇಲೆ ಅಳವಡಿಸಿರುವ ಎಲ್‌ಸಿಡಿ ಪರದೆಯ ಮೇಲೂ ಪ್ರದರ್ಶಿಸಬಹುದು ಎಂದು ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ತ್ರಿನೇಶ್ ಹೇಳಿದರು.
2.50 ಕೋಟಿ ರು. ವೆಚ್ಚ:ಕೊರೋನಾದಂತಹ ಸಮಯದಲ್ಲಿ ಸೋಂಕು ಹರಡಬಹುದೆಂಬ ದೇಹದಾನ ಮಾಡಿದವರ ಪಾರ್ಥೀವ ಶರೀರಗಳನ್ನು ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿದ್ಯಾರ್ಥಿಗಳ ಅಂಗರಚನೆ ಅಧ್ಯಯನಕ್ಕೂ ತೊಂದರೆ ಉಂಟಾಗಿತ್ತು. ಅದಕ್ಕಾಗಿ ವಿದೇಶಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಳಸುವ ಸಿಮ್ಯುಲೇಷನ್ ವರ್ಚುವಲ್ ಲ್ಯಾಬ್ ವ್ಯವಸ್ಥೆಯನ್ನು ೨.೫೦ ಕೋಟಿ ರು. ವೆಚ್ಚದಲ್ಲಿ ಇತ್ತೀಚೆಗೆ ಅಳವಡಿಸಲಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.
28 ಶವಗಳ ಸಂರಕ್ಷಣೆ, 135 ಜನ ನೋಂದಣಿ:ಪ್ರಸ್ತುತ ಮಿಮ್ಸ್ ಆಸ್ಪತ್ರೆಯಲ್ಲಿ ದೇಹದಾನ ಮಾಡಿದವರ ೨೮ ಪಾರ್ಥೀವ ಶರೀರಗಳನ್ನು ಸಂರಕ್ಷಿಸಿಡಲಾಗಿದೆ. ೧೯೫ ಜನರು ನೋಂದಣಿಯಾಗಿದ್ದಾರೆ. ದೇಹ ನೋಂದಣಿ ಮಾಡಿದವರು ಮರಣದ ಸಮಯದಲ್ಲಿ ಗಂಭೀರ ಖಾಯಿಲೆಗಳಿಗೆ ತುತ್ತಾಗಿದ್ದರೆ, ಕೊಲೆ, ಆತ್ಮಹತ್ಯೆ, ಕೌಟುಂಬಿಕ ಕಲಹ ಸೇರಿದಂತೆ ಇನ್ನಿತರ ಪ್ರಕರಣ, ವಿವಾದಗಳಿದ್ದರೂ ಅವುಗಳನ್ನು ಸ್ವೀಕರಿಸುವುದಿಲ್ಲ.
ಬೆಂಗಳೂರು, ಮೈಸೂರಿನಂತಹ ವೈದ್ಯಕೀಯ ಕಾಲೇಜುಗಳಲ್ಲಿ ಇಲ್ಲದ ಸಿಮ್ಯುಲೇಷನ್ ವರ್ಚುವಲ್ ಲ್ಯಾಬ್ ವ್ಯವಸ್ಥೆಯನ್ನು ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಲ್ಪಿಸಿಕೊಟ್ಟಿರುವುದು ಒಂದು ಹೆಗ್ಗಳಿಕೆಯಾಗಿದೆ.ಅಂಗರಚನಾ ಶಾಸ್ತ್ರದ ಅಧ್ಯಯನವನ್ನು ಸುಲಭ ಮತ್ತು ಸರಳವಾಗಿ ಅಧ್ಯಯನ ಮಾಡುವುದಕ್ಕೆ ಸಿಮ್ಯುಲೇಷನ್ ವರ್ಚುವಲ್ ಲ್ಯಾಬ್ ತುಂಬಾ ಪ್ರಯೋಜನಕಾರಿ. ಯಾವ ಅಂಗರಚನೆಯನ್ನಾದರೂ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಶಾಲಾ ಮಕ್ಕಳು, ಸಾರ್ವಜನಿಕರಿಗೂ ಅಂಗರಚನೆಯ ಬಗ್ಗೆ ತಿಳಿಸಿಕೊಟ್ಟು ಕುತೂಹಲ ತಣಿಸಲು ಅವಕಾಶವಿದೆ. ನಿಜವಾದ ಶವವನ್ನು ಮುಂದಿಟ್ಟು ಅಧ್ಯಯನ ಕೈಗೊಳ್ಳುವ ವೇಳೆ ಸೋಂಕಿನ ಅಪಾಯವಿರುತ್ತದೆ. ಇದರಲ್ಲಿ ಅಂತಹ ಯಾವುದೇ ನಕಾರಾತ್ಮಕ ಅಂಶಗಳಿರುವುದಿಲ್ಲ.- ಡಾ.ತ್ರಿನೇಶ್, ಮುಖ್ಯಸ್ಥರು, ಅಂಗರಚನಾ ಶಾಸ್ತ್ರ ವಿಭಾಗ