ಇವಿಎಂ ಬಗೆಗಿನ ಸುಪ್ರಿಂ ಕೋರ್ಟ್ ತೀರ್ಪು ಸ್ವಾಗತಾರ್ಹ

| Published : Apr 29 2024, 01:30 AM IST

ಸಾರಾಂಶ

ಇವಿಎಂ ಮತಯಂತ್ರ ಸುರಕ್ಷಿತ ಹಾಗೂ ನಂಬಿಕಾರ್ಹ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದ್ದಾರೆ.

ಚಿತ್ರದುರ್ಗ: ಇವಿಎಂ ಮತಯಂತ್ರ ಸುರಕ್ಷಿತ ಹಾಗೂ ನಂಬಿಕಾರ್ಹ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದ್ದಾರೆ.

ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಇವಿಎಂ ಮತಯಂತ್ರ ಸುರಕ್ಷಿತ ಹಾಗೂ ನಂಬಿಕಾರ್ಹ ಎಂಬ ಸುಪ್ರೀಂ ಕೋರ್ಟ್ ತೀರ್ಪು ಕುರಿತ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಒಂದು ವರ್ಷದಿಂದ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಇವಿಎಂ ಮತಯಂತ್ರ ಅಸುರಕ್ಷಿತವೆಂದು ಹೋರಾಟ ಮಾಡಿತ್ತು. ಆದರೂ ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದರು.

ನ್ಯಾಯಾಂಗ ವ್ಯವಸ್ಥೆ ಗಟ್ಟಿ ಇರುವುದರಿಂದಲೇ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ ಎಂಬುದು ನಮ್ಮಂತಹ ಜನಸಾಮಾನ್ಯರ ನಂಬಿಕೆ. ಮತ ಚೀಟಿ ವ್ಯವಸ್ಥೆ ಇದ್ದಾಗ ಮತಗಟ್ಟೆಗಳನ್ನು ವಶಕ್ಕೆ ಪಡೆದು ನಡೆಸುತ್ತಿದ್ದ ಚುನಾವಣಾ ಅಕ್ರಮಗಳಿಗೆ ಇವಿಎಂ ಮತಯಂತ್ರದ ವ್ಯವಸ್ಥೆ ಪರಿಹಾರವನ್ನು ಕಂಡುಹಿಡಿದಿದೆ ಎಂದು ಘನ ನ್ಯಾಯಾಲಯ ಹೇಳಿರುವುದು ಸತ್ಯವೂ ಹೌದು. ಹಾಗೆಯೇ ಸಾಮಾನ್ಯ ಜನರಿಗೆ ನಾವು ಹಾಕುವ ಮತ ಖಚಿತವಾಗಿ ಇಂತಹವರಿಗೆ ಬೀಳುತ್ತದೆ ಎನ್ನುವ ಬಗ್ಗೆ ಗೊಂದಲ ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ವಿವಿಪ್ಯಾಟ್ ಯಂತ್ರದಲ್ಲಿನ ಎಲ್ಲ ಮತ ಚೀಟಿಗಳನ್ನು ಎಣಿಸಲು, ಅವುಗಳನ್ನು ಅಭ್ಯರ್ಥಿಗಳಿಗನುಗುಣವಾಗಿ ಪ್ರತ್ಯೇಕಿಸಲು ಮತ್ತು ಮತಯಂತ್ರಗಳಲ್ಲಿನ ಮತಗಳೊಂದಿಗೆ ಹೋಲಿಸಿ ನೋಡಲು ಐದು ಗಂಟೆಗಳು ಬೇಕಾಗುತ್ತದೆ. ಶೇ.100ರಷ್ಟು ವಿವಿಪ್ಯಾಟ್ ಯಂತ್ರಗಳಲ್ಲಿನ ಮತಗಳನ್ನು ಹೋಲಿಸಿ ನೋಡಲು ಹೆಚ್ಚಿನ ಸಮಯ ಹಾಗೂ ದುಪ್ಪಟ್ಟು ಸಿಬ್ಬಂದಿ ಬೇಕಾಗುತ್ತದೆ ಎಂಬುದು ಗೌರವಾನ್ವಿತ ನ್ಯಾಯಾಲಯದ ಅಭಿಪ್ರಾಯವಾಗಿದೆ.

ಮತಪತ್ರದ ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಪ್ಪಿಸಿಯೂ ವಿವಿಪ್ಯಾಟ್‌ನ ಮತ ಚೀಟಿಯನ್ನು ಎಣಿಸುವುದರಿಂದ ಸಮಯ ಮತ್ತು ಸಿಬ್ಬಂದಿಯು ಹೆಚ್ಚು ಬೇಕಾಗಬಹುದು. ಆದರೆ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವದ ಸಾಮಾನ್ಯ ಮತದಾರನಿಗೆ ತನ್ನ ಮತ ಚಲಾವಣೆಗೆ ಬಗ್ಗೆ ಖಚಿತತೆ ಹಾಗೂ ವಿರೋಧ ಪಕ್ಷಗಳಿಗೆ ವಿವಾದಕ್ಕೆ ಅವಕಾಶವಿಲ್ಲದಂತೆ ಮಾಡಲು ಹೆಚ್ಚು ಸಮಯ ಹಾಗೂ ಹೆಚ್ಚು ಸಿಬ್ಬಂದಿ ಬೇಕಾಗಬಹುದೆಂಬ ಸಮಸ್ಯೆ ಬಗೆಹರಿಸುವುದು ದೊಡ್ಡದೇನಲ್ಲ ಎಂದರು.

ವಿವಿಪ್ಯಾಟ್ ಯಂತ್ರಗಳಲ್ಲಿನ ಮತ ಚೀಟಿಗಳ ಭೌತಿಕ ಎಣಿಕೆ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರ ಬದಲಿಗೆ ವಿವಿಪ್ಯಾಟ್ ಮತ ಚೀಟಿಯ ಮೇಲೆ ಬಾರ್ ಕೋಡ್ ಮುದ್ರಿಸಿದರೆ, ಯಂತ್ರಗಳ ಮೂಲಕ ಸುಲಭವಾಗಿ ಮತ್ತು ತ್ವರಿತವಾಗಿ ಮತಎಣಿಕೆ ಮಾಡಬಹುದು ಎಂಬ ವಿಷಯಕ್ಕೆ ಸುಪ್ರೀಂ ಕೋರ್ಟ್ ಸಹಮತ ವ್ಯಕ್ತಪಡಿಸಿರುವುದರಿಂದ ಕೇಂದ್ರ ಚುನಾವಣಾ ಆಯೋಗ ಕ್ರಮಕೈಗೊಂಡರೆ ಇವಿಎಂ ಮತ ಯಂತ್ರದ ಬಗ್ಗೆ ಇರುವ ಬಹುತೇಕ ಗೊಂದಲಗಳು ಬಗೆಹರಿದಂತಾಗುತ್ತದೆ. ಇಲ್ಲವಾದರೆ ಈ ಸಂಬಂಧ ಈ ಲೋಕಸಭಾ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬರುವ ಹೊಸ ಕೇಂದ್ರ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ನ್ಯಾಯಯುತ ಚುನಾವಣೆ ಗಾಗಿ ,ಮತ ಚಲಾವಣೆಯ ಬಗ್ಗೆ ಜನರಲ್ಲಿರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂದು ಬಿ.ಪಿ. ತಿಪ್ಪೇಸ್ವಾಮಿ ಆಗ್ರಹಿಸಿದರು.

ಭಿಮ್ ಆರ್ಮಿ ಅಧ್ಯಕ್ಷ ಅವಿನಾಶ್ , ಉಪನ್ಯಾಸಕ ಈ ನಾಗೇಂದ್ರಪ್ಪ, ಚಳ್ಳಕೆರೆಯ ನನ್ನಿವಾಳ ರವಿ ಕುಮಾರ್, ಜಿಲ್ಲಾ ಖಜಾಂಚಿ ಬೆಸ್ಕಾಂ ತಿಪ್ಪೇಸ್ವಾಮಿ,ಶಿಕ್ಷಕಿ ಉಷಾ ರಾಣಿ, ಗಿರಿಜಾ ನಾಗಭೂಷಣ್ ಮುಂತಾದವರು ಉಪಸ್ಥಿತರಿದ್ದರು.