ಜನಪದ ಸಾಹಿತ್ಯದಿಂದ ನಾಗರಿಕತೆ, ಸಂಸ್ಕೃತಿ, ಸಂಸ್ಕಾರದ ಉಳಿವು ಸಾಧ್ಯ

| Published : Nov 13 2024, 12:02 AM IST

ಜನಪದ ಸಾಹಿತ್ಯದಿಂದ ನಾಗರಿಕತೆ, ಸಂಸ್ಕೃತಿ, ಸಂಸ್ಕಾರದ ಉಳಿವು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದ ಕುಟುಂಬ ಧರ್ಮದಿಂದ ಪ್ರಾರಂಭವಾಗಿದೆ. ಆಧುನಿಕ ತಂತ್ರಜ್ಞಾನದ ಮನರಂಜನೆ ಒಳಗಡೆಗೆ ನಮ್ಮ ಮೂಲ ಜನಪದ ಸಂಸ್ಕೃತಿ ಸತ್ತು ಹೋಗುತ್ತಿದೆ

ಮುಂಡರಗಿ: ಭಾರತೀಯ ಜನಪದ ಸಂಸ್ಕೃತಿ ಹಳ್ಳಿಯ ತಾಯಿಯ ಹೃದಯದಲ್ಲಿರುತ್ತದೆ. ಮೌಖಿಕವಾಗಿ ಬೆಳೆದು ಬಂದ ಜನಪದ ಗ್ರಂಥಸ್ಥವಾಗಿ ಉಳಿಯಲಿಲ್ಲ. ಇದು ಉಳಿದಿದ್ದರೆ ನಮ್ಮ ದೇಶದ ಆಗುಹೋಗು ಮತ್ತು ನಿಜ ಸಂಸ್ಕೃತಿಯ ಮಹತ್ವ ಇನ್ನಷ್ಟು ಅರಿಕೆಯಾಗುತ್ತಿತ್ತು ಎಂದು ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಅವರು ಮುಂಡರಗಿ ತೋಂಟದಾರ್ಯ ಮಠದಲ್ಲಿ ಜರುಗಿದ 58ನೇ ತ್ರೈಮಾಸಿಕ ಶಿವಾನುಭವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇಶದ ನಾಗರಿಕತೆ, ಸಂಸ್ಕೃತಿ, ಸಂಸ್ಕಾರ ಉಳಿದಿರುವುದೇ ನಮ್ಮ ಜನಪದ ಸಾಹಿತ್ಯದ ಮೇಲೆ. ಜನಪದ ಕುಟುಂಬ ಧರ್ಮದಿಂದ ಪ್ರಾರಂಭವಾಗಿದೆ. ಆಧುನಿಕ ತಂತ್ರಜ್ಞಾನದ ಮನರಂಜನೆ ಒಳಗಡೆಗೆ ನಮ್ಮ ಮೂಲ ಜನಪದ ಸಂಸ್ಕೃತಿ ಸತ್ತು ಹೋಗುತ್ತಿದೆ. ಭಾರತದ ಸಂಸ್ಕೃತಿಯ ಮೂಲ ಜನಪದ ಸಂಸ್ಕೃತಿಯ ಬೇರು. ಬಸವಣ್ಣನ ಸಂಸ್ಕೃತಿ ಜನಪದ ಸಂಸ್ಕೃತಿಯಾಗಿತ್ತು ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಕನ್ನಡ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತು ಮಾತನಾಡಿ, ಜನಪದ ಎಂದರೆ ಹಳ್ಳಿ, ಜನಪದರು ಎಂದೆರ ಹಳ್ಳಿಗರು. ನಮ್ಮ ನಿತ್ಯದ ಕಾಯಕದ ಜತೆಗೆ ನಾವು ನಮ್ಮ ಜನಪದ ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ. ನಾವು ನಮ್ಮ ತಾಯಿಯ ಒಡಲಿನಲ್ಲಿ ಇರುವಾಗಿನಿಂದ ಹಿಡಿದು ಸತ್ತು ಮಣ್ಣಲ್ಲಿ ಸೇರುವವರೆಗೂ ನಮ್ಮಲ್ಲಿ ಜನಪದ ಹಾಸು ಹೊಕ್ಕಾಗಿದೆ. ಸಂಪದ್ಭರಿತ ಜಾನಪದ ಶ್ರೀಮಂತ ಜೀವನಕ್ಕಿಂತ ಶ್ರೇಷ್ಟವಾದುದು. ಆದರೆ ಅದನ್ನು ಅನುಭವಿಸುವ ಮನಸ್ಸು ಬೇಕು. ಜಾನಪದ ಕಲೆ ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಜಿ.ಬಿ. ಬೀಡನಾಳ, ಶ್ರೇಷ್ಟ ವರ್ತಕ ಪ್ರಶಸ್ತಿ ಪುರಸ್ಕೃತ ಅಮೀನಸಾಬ್‌ ಬಿಸನಳ್ಳಿ, ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಹಳ್ಳಿಕೇರಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಡಾ. ಜಿ.ಬಿ.ಬೀಡನಾಳ ಮಾತನಾಡಿ, ನನಗೆ ಪ್ರಶಸ್ತಿ ಬರಲು ತಮ್ಮ ಸ್ವಗ್ರಾಮ ಮುಷ್ಟಿಕೊಪ್ಪ ಹಾಗು ತಾಲೂಕಿನ ಜನತೆಯ ಸಹಕಾರ ಮತ್ತು ಕೊಪ್ಪಳ ಭಾಗದ ಅನೇಕ ಮಹನೀಯರ ಪ್ರೋತ್ಸಾಹ ಮರೆಯುವದಿಲ್ಲ. ಸಮಾನತೆಯ ಹರಿಕಾರ ಬಸವಣ್ಣನವರು ಜಗತ್ತಿಗೆ ತಮ್ಮ ವಚನಗಳ ಮೂಲಕ ಉತ್ತಮ ಸಂದೇಶ ಸಾರಿದ್ದಾರೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ನಮಗೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಅವರಲ್ಲಿರುವ ಶಿಸ್ತು, ಸಹನೆ ಮತ್ತು ನೇರ ನುಡಿಯ ಪ್ರಖರತೆ ಸಮಾಜದ ಪರಿವರ್ತನೆಗೆ ಕಾರಣವಾಗುತ್ತಿದೆ. ಅಂತಹ ಶ್ರೀಗಳಿಗೆ ಬೆಂಬಲವಾಗಿ ಹಾಗೂ ಶ್ರೀಮಠದ ಅಭಿವೃದ್ಧಿಗಾಗಿ ಭಕ್ತರೆಲ್ಲರೂ ಶ್ರಮಿಸೋಣ ಎಂದರು.

ಲಿಂ. ಕಲಾವತಿ ಸೊಲಗಿ ಸ್ಮರಣಾರ್ಥ ಶಿವಾನುಭವ ಕಾರ್ಯಕ್ರಮದ ಭಕ್ತಿ ಸೇವೆ ವಹಿಸಿಕೊಂಡಿದ್ದ ಡಾ. ನಿಂಗು ಸೊಲಗಿ ಮಾತನಾಡಿ, ಶ್ರೀಮಠದಲ್ಲಿ ನಡೆಯುವ ವೈಚಾರಿಕ ಕಾರ್ಯಕ್ರಮಗಳು ಸಮಾಜಮುಖಿಯಾಗಿರುತ್ತವೆ. ಮುಂಡರಗಿ ತಾಲೂಕಿನ ಡಾ. ಬೀಡನಾಳ ಮತ್ತು ಜಾನಪದ ಕಲಾವಿದ ಶಂಕ್ರಣ್ಣವರನ್ನು ಕರೆಯಿಸಿ ಜಾನಪದ ಸೊಗಡು ಉಣಬಿಸುವುದರ ಜತೆಗೆ ನಮ್ಮ ಜನಪದ ಸಂಸ್ಕೃತಿ ಉಳಿಸುವ ಕಾರ್ಯ ಇಲ್ಲಿನ ಶ್ರೀಮಠದಲ್ಲಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಅಡಿವೆಪ್ಪ ಚಲವಾದಿ, ಶಿವಕುಮಾರ ಬೆಟಗೇರಿ, ವಿರೇಂದ್ರ ಅಂಗಡಿ, ಈಶಣ್ಣ ಬೆಟಗೇರಿ, ಕೆ.ಎಫ್.ಅಂಗಡಿ, ಎಚ್.ವಿರುಪಾಕ್ಷಗೌಡ, ಸದಾಶಿವಯ್ಯ ಕಬ್ಬೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಯಶ್ರೀ ಅಳವಂಡಿ ಹಾಗೂ ಶರಣಪ್ಪ ಕುಬಸದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊಟ್ರೇಶ ಬಾಗಳಿ ಧರ್ಮಗ್ರಂಥ ಪಠಣ ಮಾಡಿದರೆ, ವಿಜಯ ದಂಡಿನ ವಚನ ಚಿಂತನ ಮಾಡಿದರು. ಕೊಟ್ರೇಶ ಅಂಗಡಿ ಸ್ವಾಗತಿಸಿದರು. ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು. ನಂತರ ಡಾ. ನಿಂಗು ಸೊಲಗಿಯವರ ನನ್ನಿನ ನಗಿನೋಡಿ ಕೃತಿ ಆಧಾರಿತ ದಾಂಪತ್ಯ ಗೀತ ನಾಟಕ ಪ್ರದರ್ಶನಗೊಂಡಿತು.