ಸಾರಾಂಶ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತವು ಭಾರತೀಯ ವಾಯುಪಡೆ ವತಿಯಿಂದ ಅ.1ರ ಸಂಜೆ 4ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ. ಇದರ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ರಿಹರ್ಸಲ್ ಗೆ ಸಾವಿರಾರು ಜನ ಸಾಕ್ಷಿಯಾದರು.
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಕೆಂಪು- ಬಿಳಿ ಬಣ್ಣದ ರೆಕ್ಕೆಯ 9 ಲೋಹದ ಹಕ್ಕಿಗಳು ಮೈಸೂರಿನ ನೀಲಿ ಆಕಾಶದಲ್ಲಿ ಶರವೇಗದಲ್ಲಿ ಹಾರಾಡಿ, ವಿವಿಧ ಚಿತ್ತಾರ ಸೃಷ್ಟಿಸುವ ಮೂಲಕ ನೆರೆದಿದ್ದವರ ಮೈಮನ ರೋಮಾಂಚನಗೊಳಿಸಿದವು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತವು ಭಾರತೀಯ ವಾಯುಪಡೆ ವತಿಯಿಂದ ಅ.1ರ ಸಂಜೆ 4ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ. ಇದರ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ರಿಹರ್ಸಲ್ ಗೆ ಸಾವಿರಾರು ಜನ ಸಾಕ್ಷಿಯಾದರು.ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ 9 ವಿಮಾನಗಳು 20 ನಿಮಿಷಗಳ ವೈಮಾನಿಕ ಪ್ರದರ್ಶನವು ಮೋಡಿ ಮಾಡಿತು. 9 ವಿಮಾನಗಳು ಏಕಕಾಲದಲ್ಲಿ ಆಕಾಶದಲ್ಲಿ ಬೊರ್ಗರತ ಸದ್ದು ಮಾಡುತ್ತಾ, ಹೊಗೆ ಸೂಸುತ್ತಾ ಮೈದಾನದತ್ತ ಶರವೇಗದಲ್ಲಿ ಬರುತ್ತಿದ್ದಂತೆ ನೆರೆದಿದ್ದ ಜನ ರೋಮಾಂಚನಗೊಂಡರು.
ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಸಂಜೆ 4ಕ್ಕೆ ಮೈಸೂರಿಗೆ ಆಗಮಿಸಿದ 9 ಜೆಟ್ ವಿಮಾನಗಳು ಸಾಹಸಮಯ ಪ್ರದರ್ಶನ ನೀಡಿದವು. ನಾಲ್ಕು ದಿಕ್ಕುಗಳಿಂದಲೂ ಶರವೇಗದಲ್ಲಿ ನುಗ್ಗಿ ಬರುತ್ತಿದ್ದ ವಿಮಾನಗಳು ಸಮನ್ವಯದಿಂದ ಪ್ರದರ್ಶನ ನೀಡಿದವು. ವಿಮಾನಗಳು ಭೂಮಿಯತ್ತ ಧಾವಿಸುವಾಗ ನೆರೆದಿದ್ದ ಪ್ರೇಕ್ಷಕರಿಂದ ಹರ್ಷೋದ್ಘಾರ ಹೊಮ್ಮಿತು.ಆಕಾಶದಲ್ಲಿ ತ್ರಿವರ್ಣ ಧ್ವಜದ ಬಣ್ಣದೊಂದಿಗೆ ಹಾರಾಟ ನಡೆಸಿದಾಗ ನೆರೆದಿದ್ದವರಲ್ಲಿ ದೇಶಭಕ್ತಿಯ ಗೌರವದ ಮೂಡಿಸಿತು. ವಿಜಯದ ಸಂಕೇತ, ಸಿಗ್ನೇಚರ್ ಸ್ಟಂಟ್, ಮೂವರು ವಿಮಾನಗಳ ಸುತ್ತ 2 ವಿಮಾನಗಳು ಚಕ್ರಕಾರದಲ್ಲಿ ಸುತ್ತಿದ ವಿಮಾನಗಳು, ಪ್ರೀತಿಯ ಸಂಕೇತವಾದ ಹೃದಯದ ಚಿತ್ತಾರ ಬಿಡಿಸುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿತು.
ಈ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್, ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್ ಮೊದಲಾದವರು ಇದ್ದರು.ಕನ್ವಾಲ್ ಸಂಧು ಆಕರ್ಷಣೆ:
ಸೂರ್ಯಕಿರಣ್ ತಂಡದ ಫ್ಲೈಟ್ ಲೆಫ್ಟಿನೆಂಟ್ ಕನ್ವಾಲ್ ಸಂಧು ಅವರು, ಕನ್ನಡದಲ್ಲಿ ನಿರೂಪಿಸುವ ಮೂಲಕ ಗಮನ ಸೆಳೆದರು. ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುತ್ತಲೇ ಅರಮನೆ ನಗರಿಗೆ ಸ್ವಾಗತ ಕೋರಿದರು. ತಮ್ಮ ತಂಡದ ಬಗ್ಗೆ ಇಂಗ್ಲಿಷ್ ನಲ್ಲೂ ಮಾಹಿತಿ ನೀಡಿದರು.