45 ನಿಮಿಷದಲ್ಲಿ 12 ಮುದ್ದೆ ತಿಂದು ಟಗರು ಗೆದ್ದ!

| Published : Nov 17 2025, 03:30 AM IST

ಸಾರಾಂಶ

ಘಮಘಮಿಸುವ ನಾಟಿ ಕೋಳಿ ಸಾರು, ಹಬೆಯಾಡುವ ಬಿಸಿ ರಾಗಿ ಮುದ್ದೆಯನ್ನು ತಾಮುಂದು ನಾಮುಂದು ಎಂದು ನುಂಗಿದ ಸ್ಪರ್ಧಿಗಳು... ಶಿಳ್ಳೆ, ಚಪ್ಪಾಳೆ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದ ಸಾರ್ವಜನಿಕರು!

ಕನ್ನಡಪ್ರಭ ವಾರ್ತೆ ಬೆಂಗಳೂರು

ಘಮಘಮಿಸುವ ನಾಟಿ ಕೋಳಿ ಸಾರು, ಹಬೆಯಾಡುವ ಬಿಸಿ ರಾಗಿ ಮುದ್ದೆಯನ್ನು ತಾಮುಂದು ನಾಮುಂದು ಎಂದು ನುಂಗಿದ ಸ್ಪರ್ಧಿಗಳು... ಶಿಳ್ಳೆ, ಚಪ್ಪಾಳೆ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದ ಸಾರ್ವಜನಿಕರು!ಈ ದೃಶ್ಯ ‌ಕಂಡು ಬಂದದ್ದು ಬೆಂಗಳೂರು ನಗರದ ಎಚ್ಎಸ್ಆರ್ ‌ಲೇಔಟ್‌ನಲ್ಲಿ. ಬಡಾವಣೆಯ ವಕೀಲರ ಒಕ್ಕೂಟ ನಾಡಗೀತೆಗೆ ಶತಮಾನೋತ್ಸವ ತುಂಬಿದ ಸಂಭ್ರಮದ ಅಂಗವಾಗಿ ಗ್ರಾಮೀಣ ಸೊಗಡಿನ ‘ನಾಟಿ ಕೋಳಿ ಸಾರು ಮುದ್ದೆ ಸವಿಯುವ ಸ್ಪರ್ಧೆ’ ಆಯೋಜಿಸಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಲು, ವಾರಾಂತ್ಯವನ್ನು ಸಂಭ್ರಮಿಸಲು ಮಂಡ್ಯ, ಹಾಸನ, ಕನಕಪುರ, ಚಿತ್ರದುರ್ಗ, ಮೈಸೂರು, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಆನೇಕಲ್ ಸೇರಿ ನಾನಾ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷ ವಿಭಾಗದಲ್ಲಿ 68, ಮಹಿಳಾ ವಿಭಾಗದಲ್ಲಿ 25 ಮಂದಿ ಭಾಗವಹಿಸಿದ್ದರು. 45 ನಿಮಿಷದಲ್ಲಿ ಅತಿ ಹೆಚ್ಚು ರಾಗಿ ಮುದ್ದೆ ಸೇವಿಸಿದವರಿಗೆ ಬಹುಮಾನ ಘೋಷಣೆ ಮಾಡಲಾಗಿತ್ತು. ಎರಡು ವಿಭಾಗದಲ್ಲಿ ವೈಟ್‌ಫೀಲ್ಡ್ ನಲ್ಲೂರಹಳ್ಳಿ ನಿವಾಸಿಗಳಾದ ಅಕ್ಕ-ತಮ್ಮ ಸೌಮ್ಯ ಮತ್ತು ಅಜಯ್‌ ಕುಮಾರ್‌ ವಿಜೇತರಾದರು.ಪುರುಷ ವಿಭಾಗದಲ್ಲಿ 12 ರಾಗಿ ಮುದ್ದೆ ತಿಂದು ಅಜಯ್ ಕುಮಾರ್ ಟಗರು ಪಡೆದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ 10 ಮುಂದೆ ತಿಂದು ಸೌಮ್ಯಾ ಅವರು 32ಇಂಚಿನ ಟಿವಿ, 5 ಸಾವಿರ ನಗದು ಆಕರ್ಷಕ ಸೀರೆ ಪಡೆದರು.

ಮನೆಯಲ್ಲಿ ಅರ್ಧ ಮುದ್ದೆ ತಿನ್ನುವುದು ಕಷ್ಟ. ಆದರೆ ಇಲ್ಲಿ ಪವಾಡದ ರೀತಿ ನಾನು ಮತ್ತು ನನ್ನ ತಮ್ಮ ಪ್ರಥಮ ಬಹುಮಾನ ಪಡೆದಿದ್ದೇವೆ. ರಾಗಿ ಮುದ್ದೆ ತಿನ್ನುವ ಬಗ್ಗೆ ಕೆಲವರು ತಾತ್ಸಾರ ಮಾಡುತ್ತಾರೆ. ಆದ್ರೆ ಮದ್ದೆ ತಿನ್ನುವುದು ಸುಲಭವಲ್ಲ. ಆಯೋಜಕರು ಚೆನ್ನಾಗಿ ಸ್ಪರ್ಧೆ ಆಯೋಜನೆ ಮಾಡಿದ್ದರು ಎಂದು ವಿಜೇತ ಮಹಿಳೆ ಸೌಮ್ಯಾ ಹೇಳಿದರು.