ಸಾರಾಂಶ
ಜಾತಿ, ಧರ್ಮ, ಪಕ್ಷ, ಪಂಗಡಗಳನ್ನು ಮೀರಿ ಸಾಂಸ್ಕೃತಿಕ ಸಂಘಟನೆಗಳು ಬೆಳೆಯಬೇಕು. ಜಾತ್ಯತೀತ ಧೋರಣೆಯಿಂದ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು.
ಗದಗ: ಸಾಹಿತ್ಯ, ಸಾಂಸ್ಕೃತಿ ಪರ ಒಲವು ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಮನಸ್ಸು ತಿದ್ದುವ ಕಾರ್ಯವನ್ನು ಒಳ್ಳೆಯ ಸಾಹಿತ್ಯ ಮಾತ್ರ ಮಾಡಬಲ್ಲದು ಎಂದು ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕ ಶರಣಬಸವ ಚೋಳಿನ ತಿಳಿಸಿದರು.
ನಗರದಲ್ಲಿ ಅಖಿಲ ಕರ್ನಾಟಕ ಕಬ್ಬಿಗರ ಕೂಟದಿಂದ ನಡೆದ 50ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿಯ ಪ್ರೀತಿಯಂತೆ ಸಾಹಿತ್ಯ ಪ್ರಕ್ಷುಬ್ದಗೊಂಡ ಭಾವಗಳನ್ನು ಸಂತೈಸಿ ಒಳಿತಿನ ದಾರಿ ತೋರುತ್ತದೆ. ಇಂಥ ಕಾರ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಹಿತ್ಯ ಸಂಘಟನೆಯಲ್ಲಿ ತೊಡಗಿದ ಕಬ್ಬಿಗರ ಕೂಟ ನಾಡಿನ ಹೆಮ್ಮೆಯ ಸಾಹಿತ್ಯ ಸಂಸ್ಥೆಗಳಲ್ಲಿ ಒಂದಾಗಿದೆ ಎಂದರು. ಜಾತಿ, ಧರ್ಮ, ಪಕ್ಷ, ಪಂಗಡಗಳನ್ನು ಮೀರಿ ಸಾಂಸ್ಕೃತಿಕ ಸಂಘಟನೆಗಳು ಬೆಳೆಯಬೇಕು. ಜಾತ್ಯತೀತ ಧೋರಣೆಯಿಂದ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು. ಕುವೆಂಪು ಪ್ರತಿಪಾದಿಸಿದ ಸರ್ವ ಜನಾಂಗದ ಶಾಂತಿಯ ತೋಟ ಅಸ್ತಿತ್ವದಲ್ಲಿ ಬರಲು ಸಾಹಿತಿ ಕಲಾವಿದರು, ಪ್ರಯತ್ನಿಸುವ ಅಗತ್ಯತೆ ಇದೆ ಎಂದರು.ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಮಾತನಾಡಿ, ಉದಯೋನ್ಮುಖರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಬ್ಬಿಗರ ಕೂಟ ನಿರಂತರ ಪ್ರಯತ್ನ ನಡೆಸಿದ್ದು, 72 ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ಸ್ವತಂತ್ರ ಸಾಹಿತ್ಯ ಭವನವನ್ನು ಹೊಂದಿದ ಕಬ್ಬಿಗರ ಕೂಟ ನಾಡಿನಲ್ಲಿ ವಿಶೇಷ ಮನ್ನಣೆಗೆ ಪಾತ್ರವಾಗಿದೆ ಎಂದರು.
ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಕಬ್ಬಿಗರ ಕೂಟಕ್ಕೆ ಧನಸಹಾಯಕ್ಕಿಂತ ಸಾಹಿತ್ಯಾಸಕ್ತರು ತನು ಮನದಿಂದ ಪ್ರೋತ್ಸಾಹ ನೀಡಿ ಕಬ್ಬಿಗರ ಕೂಟ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಆಗಮಿಸಿ ಬೆಂಬಲಿಸಲು ಕೋರಿದರು. ಸಾಹಿತಿ, ಕಲಾವಿದರಿಗೆ ಹಣ ಮುಖ್ಯವಲ್ಲ, ಕಲೆಯನ್ನು ಮೆಚ್ಚಿ ಬೆನ್ನು ತಟ್ಟುವ ಸಹೃದಯತೆ ಬೇಕೆಂದರು.ಈ ವೇಳೆ ಧಾರವಾಡ ಜಾನಪದ ಸಂಶೋಧನ ಕೇಂದ್ರದ ಅಧ್ಯಕ್ಷ ಗು.ರು. ಕಲ್ಮಠ ಮಾತನಾಡಿದರು. ಕವಿಗೋಷ್ಠಿಯಲ್ಲಿ ಬಸವರಾಜ ವಾರಿ, ಮಂಜುಳಾ ವೆಂಕಟೇಶಯ್ಯ, ಅನಸೂಯಾ ಮಿಟ್ಟಿ, ಸುಭದ್ರಾ ಬಡಿಗೇರ, ಜಯಶ್ರೀ ಮೇರವಾಡೆ, ಸಿ.ಎಂ. ಪಾಟೀಲ, ಶೋಭಾ ಪಿಡ್ಡಿ, ಶಕುಂತಲಾ ಸಿಂಧೂರ, ಜಗನ್ನಾಥ ಟಿಕಣದಾರ, ನಜೀರ ಸಂಶಿ, ಮಲ್ಲಿಕಾರ್ಜುನ ಪೂಜಾರ ಮುಂತಾದವರು ಕವನ ವಾಚಿಸಿದರು.ಜಾನಪದ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿಶ್ವೇಶ್ವರಿ ಹಿರೇಮಠ, ಕಲಾವಿದ ನಾಗಭೂಷಣ ಹಿರೇಮಠ, ಪ್ರೊ. ಕೆ.ಎಚ್. ಬೇಲೂರ, ಎಸ್.ಎಸ್. ಮಲ್ಲಾಪೂರ, ಪ್ರೊ. ಡಾ. ಸುಬ್ಬಣ್ಣವರ, ಡಾ. ಬಸವರಾಜ ತಳವಾರ, ರವಿ ದೇಸಾಯಿ, ಎಂ.ವಿ. ಕೆಂಬಾವಿಮಠ, ಎಂ.ಎನ್. ಡೋಣಿ, ಡಿ.ಎಚ್. ಸೀತಿಮನಿ, ರತ್ನಕ್ಕ ಪಾಟೀಲ, ಭಾರತಿ ಕಲ್ಮಠ, ಜಿ.ಎಂ. ಯಾನಮಶೆಟ್ಟರ, ಆರ್.ಎಫ್. ಹಾಳಕೇರಿ ಮುಂತಾದವರು ಇದ್ದರು. ಸಾಹಿತಿ ಬಸವರಾಜ ಗಣಪ್ಪನವರ ಸ್ವಾಗತಿಸಿದರು. ಪ್ರೊ. ಜಯಶ್ರೀ ಅಂಗಡಿ ನಿರೂಪಿಸಿದರು. ಕವಿ ಬಿ.ಎಸ್. ಹಿಂಡಿ ವಂದಿಸಿದರು.