ಸಾರಾಂಶ
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಬಿರು ಬೇಸಿಗೆಯಿಂದ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ. ಜಿಲ್ಲೆಯ ಜೀವನದಿ ಎನಿಸಿರುವ ತುಂಗಭದ್ರೆ ಬತ್ತಿ ಬರಡಾಗುತ್ತಿದ್ದು, ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮೀಣದ ಕೆಲವು ಗ್ರಾಮಗಳಲ್ಲಿ ಹಾಹಾಕಾರ ಎದುರಾಗಿದೆ.
ಬೇಸಿಗೆಯ ಕಾಲ ಪ್ರಾರಂಭಗೊಂಡು ೨ ತಿಂಗಳು ಗತಿಸಿದ್ದು, ಜಲಮೂಲಗಳಾದ ತುಂಗಭದ್ರಾ ನದಿ, ಕುಮದ್ವತಿ ನದಿ, ಕೆರೆ-ಕಟ್ಟೆಗಳು, ಬಾವಿಗಳು ಬರಿದಾಗಿದ್ದು, ಕೊಳವೆಬಾವಿಗಳಲ್ಲಿಯೂ ಸಹ ಅಂತರ್ಜಲಮಟ್ಟ ಕುಸಿದಿದ್ದು, ಬೇಸಿಗೆಯ ಆರ್ಭಟವು ಹೀಗೆ ಮುಂದುವರೆದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ದಿನಗಳು ದೂರವಿಲ್ಲ ಎಂಬುದು ಗೋಚರಿಸುತ್ತಿದೆ.ವರ್ಷದ ಎಲ್ಲಾ ದಿನಗಳಲ್ಲಿಯೂ ಹರಿಯುತ್ತಿದ್ದ ತುಂಗಭದ್ರೆಯು ತನ್ನ ಕರ್ತವ್ಯವನ್ನು ನಿಲ್ಲಿಸಿರುವ ಕಾರಣ, ಇಂದು ತುಂಗಭದ್ರೆಯ ಒಡಲು ಬತ್ತಿ ಬರಿದಾಗಿದ್ದು, ಜಲಚರ ಜೀವಿಗಳು ಸಾವು ಬದುಕಿನ ಮಧ್ಯ ಒದ್ದಾಡುತ್ತಿವೆ. ನದಿಯ ಅಕ್ಕ-ಪಕ್ಕದ ಗ್ರಾಮಗಳ ಚರಂಡಿಯ ನೀರು ಹಾಗೂ ಕೆಲವು ಕೈಗಾರಿಕೆಗಳ ತ್ಯಾಜ್ಯ ನೀರು ನದಿಯಲ್ಲಿನ ಗುಂಡಿಗಳಲ್ಲಿ ಸಂಗ್ರಹಗೊಂಡಿದ್ದು, ಪವಿತ್ರ ನದಿಯು ಗಬ್ಬೆದ್ದು ನಾರುತ್ತಿದೆ. ನದಿಯಲ್ಲಿನ ಗುಂಡಿಗಳಲ್ಲಿ ಕೊಳಕು ನೀರಿನಲ್ಲಿ ಬದುಕುಳಿದಿರುವ ಮೀನುಗಳನ್ನು ಹಿಡಿಯುವವರ ಸಂಖ್ಯೆಯೂ ಹೆಚ್ಚಾಗಿದೆ.
ಕೈಗೆ ಬಂದ ತುತ್ತು: ಕಳೆದ ೩ ವರ್ಷಗಳಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯು ಸಮಯಕ್ಕೆ ಸರಿಯಾಗಿ ಬಾರದಿರುವ ಕಾರಣ, ರೈತರು ಬಿತ್ತಿದ ಬೆಳೆಗಳು ಇಳುವರಿ ಬಾರದೆ ಇರುವುದರಿಂದ ಅನ್ನದಾತನಿಂದು ಸಾಲದ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾನೆ. ಸಾಲಗಾರರ ಕಾಟಕ್ಕೆ ಸೋತಿರುವ ಕೆಲವರು ವಿಷ ಸೇವಿಸಿ ಹಾಗೂ ನೇಣು ಹಾಕಿಕೊಂಡು ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದಾರೆ.ನೀರಾವರಿ ಕೃಷಿ ಹೊಂದಿರುವ ನದಿ ಪಾತ್ರದಲ್ಲಿನ ಅನೇಕ ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೇಸಿಗೆ ಬೆಳೆಗಳಾದ ಭತ್ತ, ಕಬ್ಬು, ಅಡಕಿ, ತೆಂಗು, ಮೆಕ್ಕೆಜೋಳ, ಬಾಳೆ, ವೀಳ್ಯದೆಲೆ ಸೇರಿದಂತೆ ಸೊಪ್ಪು ತರಕಾರಿ ಬೆಳೆಗಳಿಗೆ ನೀರಿಲ್ಲದಿರುವ ಕಾರಣ, ಅನೇಕ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಬಹುಗ್ರಾಮ ನದಿ ನೀರು ಸರಬರಾಜು ಯೋಜನೆ ಅಡಿಯಲ್ಲಿ ತಾಲೂಕಿನ ಗ್ರಾಮಗಳ ಜನ-ಜಾನುವಾರುಗಳಿಗೆ ಕುಡಿಯಲು ನದಿ ನೀರು ಪೂರೈಸಲು, ಗಡಿ ಅಂಚಿನಲ್ಲಿ ಹರಿದಿರುವ ತುಂಗಭದ್ರಾ ನದಿಯ ಹತ್ತಿರದ ಬೈರನಪಾದ, ಮುದೇನೂರು, ಕವಲೆತ್ತು, ಕುದರಿಹಾಳ ಗ್ರಾಮಗಳ ಸಮೀಪ ೪ ಸ್ಥಳಗಳಲ್ಲಿ ನದಿಯಲ್ಲಿ ನಿರ್ಮಿಸಿರುವ ಜಾಕ್‌ವೆಲ್‌ಗಳ ಸ್ಥಳಗಳಲ್ಲಿಯೂ ಸಹ ಸಂಗ್ರಹಗೊಂಡಿರುವ ನೀರು ಗಬ್ಬೆದ್ದು ನಾರುತ್ತಿದೆ.ಕಳೆದ ೩ ವರ್ಷಗಳಿಂದ ಸಮರ್ಪಕವಾಗಿ ಮುಂಗಾರು ಮತ್ತು ಹಿಂಗಾರು ಮಳೆಯಾಗದೆ ಇರುವ ಕಾರಣ, ದೇಶದ ಅನ್ನದಾತನೆಂಬ ಖ್ಯಾತಿಗೆ ಪಾತ್ರವಾಗಿರುವ ರೈತರು ಬಿತ್ತಿದ ಬೆಳೆಯು ಇಳುವರಿ ಬಾರದಿರುವುದರಿಂದ ಗೊಬ್ಬರ, ಬೀಜಕ್ಕಾಗಿ, ಹೊಲ ಹದ ಮಾಡಲು, ಇತರೆ ಕಾರ್ಯಕ್ಕಾಗಿ ಮಾಡಿರುವ ಸಾಲದ ಸುಳಿಯಲ್ಲಿ ಸಿಕ್ಕು ರೈತರು ನರಳುತ್ತಿದ್ದಾರೆ. ರೈತರು ರೊಚ್ಚಿಗೇಳುವುದಕ್ಕಿಂತ ಪೂರ್ವದಲ್ಲಿಯೇ ತುಂಗಭದ್ರಾ ನದಿಗೆ ಹಾಗೂ ತುಂಗಾ ಮೇಲ್ದಂಡೆ ಕಾಲುವೆಗೆ ಡ್ಯಾಮನಿಂದ ನೀರನ್ನು ಹರಿಸಬೇಕೆಂದು ರೈತರಾದ ಲೋಕೇಶ್ ಸುತಾರ ಸೇರಿದಂತೆ ಅನೇಕರು ಆಗ್ರಹಿಸಿರುತ್ತಾರೆ.
;Resize=(128,128))
;Resize=(128,128))
;Resize=(128,128))