ಅಜ್ಞಾನದ ನಡುವೆ ಧರ್ಮ ಇಂದು ಸಂಕಷ್ಟದಲ್ಲಿದೆ : ಮಹಾಂತ ಸ್ವಾಮೀಜಿ

| Published : Mar 20 2024, 01:18 AM IST

ಅಜ್ಞಾನದ ನಡುವೆ ಧರ್ಮ ಇಂದು ಸಂಕಷ್ಟದಲ್ಲಿದೆ : ಮಹಾಂತ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಜಗತ್ತಿಗೆ ಎಲ್ಲಾ ಧರ್ಮಗಳ ಸಂದೇಶಗಳು ಒಂದೇ ಆಗಿವೆ. ಸಮಾಜದಲ್ಲಿ ಎಲ್ಲರೂ ಅರಿವು, ಪ್ರೀತಿ, ವಿಶ್ವಾಸ, ಸಾಮರಸ್ಯ ಸಹಬಾಳ್ವೆಯಿಂದ ಬಾಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಸಕ್ತ ದಿನಗಳಲ್ಲಿ ನಾವು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ ಸದಾ ಒತ್ತಡ, ಅಸಂತುಷ್ಟ ವಾತಾವರಣದಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಇದಕ್ಕೆಲ್ಲ ಪ್ರಮುಖ ಕಾರಣ ಶರಣರ ಚಿಂತನೆಗಳನ್ನು ಅರಿಯದಿರುವುದು. ಪರಿಣಾಮ ಅಜ್ಞಾನದ ನಡುವೆ ಧರ್ಮ ಸಂಕಷ್ಟ ಎದುರಿಸುತ್ತಿದೆ ಎಂದು ಮುದುಗಲ್ ಕಲ್ಯಾಣಾಶ್ರಮ ಮಹಾಂತೇಶ್ವರದ ಮಠದ ತಿಮ್ಮಾಪೂರದ ಪ್ರವಚನಯೋಗಿ ಮಹಾಂತ ಮಹಾಸ್ವಾಮೀಜಿ ಹೇಳಿದರು.

ಸಮೀಪದ ಸೂಗೂರ ಎನ್. ಮಠದಲ್ಲಿ ಭೋಜಲಿಂಗೇಶ್ವರ 29ನೇ ವರ್ಷದ ಜಾತ್ರೆಯ ರಥೋತ್ಸವದ ನಂತರ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಈ ಜಗತ್ತಿಗೆ ಎಲ್ಲಾ ಧರ್ಮಗಳ ಸಂದೇಶಗಳು ಒಂದೇ ಆಗಿವೆ. ಸಮಾಜದಲ್ಲಿ ಎಲ್ಲರೂ ಅರಿವು, ಪ್ರೀತಿ, ವಿಶ್ವಾಸ, ಸಾಮರಸ್ಯ ಸಹಬಾಳ್ವೆಯಿಂದ ಬಾಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ಉದ್ದೇಶವಾಗಿದೆ ಎಂದರು.

ಈ ಭರತ ಭೂಮಿ ಪವಿತ್ರ ಸಾಧು, ಸೂಫಿ, ಸಂತರ ನಾಡಾಗಿದೆ. ಅನಾದಿ ಕಾಲದಿಂದ ಮಹಾತ್ಮರು ತಮ್ಮ ಆಧ್ಯಾತ್ಮಿಕ ಸಾಧನೆ ಶಕ್ತಿಯಿಂದ ಕಾಲ ಕಾಲಕ್ಕೆ ಆಯಾ ಭಾಗಗಳಲ್ಲಿ ಭಕ್ತರ ಸಂಕಷ್ಟಗಳನ್ನು ದೂರ ಮಾಡುವ ಮೂಲಕ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರಲ್ಲಿ ಒಬ್ಬರು ಭೋಜಲಿಂಗೇಶ್ವರರು. ಲೋಕ ಕಲ್ಯಾಣಕ್ಕಾಗಿ ಹಲವಾರು ಪವಾಡಗಳ ಮೂಲಕ ಸಮಾಜಕ್ಕೆ ಮಾನವಿಯ ಸಂದೇಶಗಳನ್ನು ನೀಡಿದ್ದಾರೆ. ನಾವೆಲ್ಲರೂ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಧೃಢ ಸಮಾಜ ಕಟ್ಟುವ ಮೂಲಕ ನಾಡಿನ ಪ್ರಗತಿಗೆ ಎಲ್ಲರೂ ತಮ್ಮದೇ ಆದ ಕೊಡುಗೆ ನೀಡುವುದು ಅವಶ್ಯಕ ಎಂದು ಸಲಹೆ ನೀಡಿದರು.

ಇಂದು ನಾವು ಹಲವಾರು ಆಸೆ-ಆಕಾಂಕ್ಷೆಗಳ ಬೆನ್ನತ್ತಿ ನಮ್ಮಲ್ಲಿರುವ ಮಾನವ ಸಂಪನ್ಮೂಲ ಶಕ್ತಿ ಕಳೆದುಕೊಳ್ಳುತ್ತಿದ್ದೇವೆ. ಕಾರಣ ನಿಮಗೆ ಭಗವಂತ ದೈವದತ್ತವಾಗಿ ನೀಡಿರುವ ಕ್ಷೇತ್ರದಲ್ಲಿ ಆಸಕ್ತಿ, ಪರಿಶ್ರಮದಿಂದ ಕೆಲಸ ಮಾಡಬೇಕು. ಅದರಿಂದ ಮಾತ್ರ ನಿಮಗೆ ಆತ್ಮತೃಪ್ತಿ, ಶಾಂತಿ, ಗೌರವ ಸಿಗುತ್ತದೆ ಎಂದರು.

ಇಂದು ನಮಗೆ ಧರ್ಮ ಮತ್ತು ಹಣ ಎರಡು ಮಾತ್ರೆಗಳಾಗಿವೆ. ನಾವು ಅದರ ಮೌಲ್ಯ ಅರಿತು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಅಂದಾಗ ಮಾತ್ರ ನಮ್ಮ ಬದುಕು ಸಂತಸವಾಗಿರುತ್ತದೆ ಎಂದರು.

ನಮ್ಮ ದೇಶ ಕೃಷಿ ಆಧಾರಿತವಾಗಿದೆ. ಇಂದಿನ ಯುವಕರು ಅಭ್ಯಾಸದ ಜೊತೆಗೆ ಕೃಷಿ ಚಟುವಟಿಕಗಳತ್ತ ಗಮನ ಹರಿಸಿ ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಒಳ್ಳೆಯ ಆಹಾರ ಪದಾರ್ಥಗಳನ್ನು ಉತ್ಪಾದಿಸಿ, ಸಮಾಜಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ನಿವೃತ್ತ ಎಸ್.ಪಿ ಎ.ಎಚ್ ಚಿಪ್ಪರ್ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಡಾ. ಆನಂದ ಡಿ. ಹೇರೂರ ಅವರಿಗೆ ವೈದ್ಯ ಸೂಗೂರ ಶ್ರೀಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈದ್ಯ ಪರಿಷತ್ ಅಧ್ಯಕ್ಷ ಡಾ. ಆನಂದ ಡಿ. ಹೇರೂರ, ಪ್ರಾಚೀನ ಕಾಲದಲ್ಲಿ ಶರಣರು ಮಠ-ಮಾನ್ಯಗಳ ಕಾರ್ಯದ ಜೊತೆಗೆ ನಾಟಿ, ಆಯುರ್ವೇದ ಚಿಕಿತ್ಸೆ ಮೂಲಕ ಅಂದು ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಚಿಕಿತ್ಸೆ ನೀಡಿ, ಪರಿಹಾರ ದೊರಕಿಸಿಕೊಟ್ಟರು. ಇಂದು ಹಲವಾರು ರೋಗಿಗಳು ದೀರ್ಘ ಕಾಲ ಅಲೋಪತಿ ಮಾತ್ರೆಗಳನ್ನು ಸೇವಿಸಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ದುರಂತ. ದಿನಾಲೂ ಶೇ.80ರಷ್ಟು ಬಿಸಿ ನೀರು ಸೇವನೆಯಿಂದ ಜನರು ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಕರೆ ನೀಡಿದರು.

ಈ ಹಿಂದೆ ನಮ್ಮ ಹಿರಿಯರು ನಿಸರ್ಗದಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಹಬ್ಬಗಳನ್ನು ವೈಜ್ಞಾನಿಕವಾಗಿ ಆಚರಿಸಿಕೊಂಡು ಬರುವ ಮೂಲಕ ಸಧೃಢ ಆಹಾರ ಸೇವನೆ ಮಾಡುತ್ತಿದ್ದರು. ಆದರೆ ಇಂದು ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸತ್ವ ಕಡಿಮೆ ಬರುವ ದಿನಗಳಲ್ಲಿ ಶ್ರೀಮಠದಲ್ಲಿ ಭಕ್ತರಿಗಾಗಿ ಉಚಿತ ಆಯುರ್ವೇದ ಶಿಬಿರ ಹಮ್ಮಿಕೊಂಡರೇ ನಾನು 1 ಸಾವಿರಕ್ಕೂ ಹೆಚ್ಚು ಮನೆ ಮದ್ದುಗಳ ಬಳಕೆ, ಅದರ ಮಹತ್ವ ಕುರಿತು ವಿವರಿಸುತ್ತೇನೆ ಎಂದು ತಿಳಿಸಿದರು.

ಸಮಾರಂಭದ ನೇತೃತ್ವ ವಹಿಸಿದ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಮಾತನಾಡಿ, ಮಠಕ್ಕೆ ಭಕ್ತರೇ ನಿಜವಾದ ಆಸ್ತಿಯಾಗಿದ್ದಾರೆ, ಅವರ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

ಸಾನ್ನಿಧ್ಯವನ್ನು ಗಜೇಂದ್ರಗಡದ ಶಿವಯೋಗಿ ಡಾ. ಶರಣಬಸವ ಸ್ವಾಮೀಜಿ ವಹಿಸಿದ್ದರು. ಮಠದ ಸೇವಾರ್ಥಿಗಳಾದ ಎಲ್‌ಐಸಿ ಈರಣ್ಣ ಬಲಕಲ್, ಬಸವರಾಜ ಹವಾಲ್ದಾರ್, ಸುರೇಶ ಕೋಟಿಮನಿ, ಎಸ್.ಎಸ್. ಜುಗೇರಿ, ನಾಗರತ್ನ ಕುಪ್ಪಿ, ಗುತ್ತಿಗೆದಾರ ಮೋಹನ ರಾಠೋಡ್, ರಾಜು ಹತ್ತಿಕುಣಿ, ಮಹೇಶರಡ್ಡಿ ಪಾಟೀಲ್ ಸೂಗೂರ, ಸಿದ್ರಾಮರಡ್ಡಿ ಚಿನ್ನಾಕಾರ, ಮಲ್ಲಿಕಾರ್ಜುನ ತಡಿಬಿಡಿ, ಮಹಾಂತೇಶ ಗೌಡರ್ ಲಿಂಗಸೂಗುರ, ವಿಶ್ವನಾಥರಡ್ಡಿ ಪಾಟೀಲ್ ಸೂಗೂರ, ಮಲ್ಲಯ್ಯ ಕಸಬಿ, ಸಾಬಣ್ಣ ಕೆಂಗೂರಿ, ಮಹೇಂದ್ರಗೌಡ ಅಳ್ಳೋಳ್ಳಿ. ಮಲ್ಲಿಕಾರ್ಜುನ ಕಿವಿಡೇರ್ ಬಂದಳ್ಳಿ, ಪ್ರಭು ಹೂಗಾರ ಸೇರಿದಂತೆ ಇತರರಿದ್ದರು. ಭೀಮರಡ್ಡಿ ಕುರಿಹಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರಗೌಡ ಪಾಟೀಲ್ ನಿರೂಪಿಸಿ, ವಂದಿಸಿದರು. ನಂತರ ನಡೆದ ಹಾಸ್ಯ ಕಲಾವಿದರಾದ ಸಂಜು ಬಸಯ್ಯ ದಂಪತಿಗಳು ಹಾಗೂ ಅರ್ಜುನ್ ಇಟಗಿ ಅವರಿಂದ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು.