ಮಳೆಗೆ ಮರ ಬಿದ್ದು ತುಮರಿ - ಮಾರಲಗೋಡು ಸಂಚಾರ ಅಸ್ತವ್ಯಸ್ತ

| Published : May 25 2024, 01:31 AM IST

ಸಾರಾಂಶ

ಶರಾವತಿ ಹಿನ್ನೀರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಯಿಂದ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಹಲವು ಪ್ರದೇಶಗಳಲ್ಲಿ ಮರದ ಕೊಂಬೆಗಳು ಉರುಳಿ ಬಿದ್ದು ಸಂಪರ್ಕ ಹದಗೆಟ್ಟು ಸಾರ್ವಜನಿಕರು ಪರದಾಡುವಂತಾಗಿದೆ. ಸಮೀಪದ ತುಮರಿಯಿಂದ ಮಾರಲಗೋಡು ಸಂಪರ್ಕ ಕಲ್ಪಿಸುವ ಕಂದ್ರೋಳ್ಳಿ ಬಳಿ ಬೃಹತ್ ಮರವೂಂದು ಗುರುವಾರ ಸಂಜೆ ಉರುಳಿ ಬಿದ್ದ ಪರಿಣಾಮ ಹಲವು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿ ಗ್ರಾಮಸ್ಥರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಶರಾವತಿ ಹಿನ್ನೀರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಯಿಂದ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಹಲವು ಪ್ರದೇಶಗಳಲ್ಲಿ ಮರದ ಕೊಂಬೆಗಳು ಉರುಳಿ ಬಿದ್ದು ಸಂಪರ್ಕ ಹದಗೆಟ್ಟು ಸಾರ್ವಜನಿಕರು ಪರದಾಡುವಂತಾಗಿದೆ.

ಸಮೀಪದ ತುಮರಿಯಿಂದ ಮಾರಲಗೋಡು ಸಂಪರ್ಕ ಕಲ್ಪಿಸುವ ಕಂದ್ರೋಳ್ಳಿ ಬಳಿ ಬೃಹತ್ ಮರವೂಂದು ಗುರುವಾರ ಸಂಜೆ ಉರುಳಿ ಬಿದ್ದ ಪರಿಣಾಮ ಹಲವು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿ ಗ್ರಾಮಸ್ಥರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.

ಬೃಹತ್ ಮರದ ಕೊಂಬೆ ಮುರಿದು ಬಿದ್ದಿದ್ದು, ಅರಣ್ಯ ಇಲಾಖೆ ಇದನ್ನು ತೆರವು ಮಾಡಬೇಕಿದೆ. ಇಲ್ಲಿಯವರೆಗೂ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕಿದೆ. ಆದರೆ ಮರ ಬಿದ್ದು ಎರಡು ದಿನ ಕಳೆದರೂ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ತೆರವು ನಡೆಸದೇ ಇರುವುದರಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಈ ಭಾಗದ ಕಳೂರು, ಮಾರಲಗೋಡು, ಹಲ್ಕೆ, ಭಾನುಕುಳಿ, ಮಣಕಂದೂರು ಗ್ರಾಮಗಳ ಜನರು ಈ ಮಾರ್ಗದಲ್ಲಿಯೇ ದಿನನಿತ್ಯದ ಅಗತ್ಯ ಸೇವೆಗೆ, ಸರ್ಕಾರಿ ಕೆಲಸಕ್ಕೆ ಸಂಚರಿಸಬೇಕಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮದ ನಾರಾಯಣಪ್ಪ ಮಾರಲಗೋಡು ಆಗ್ರಹಿಸಿದ್ದಾರೆ.