ಹರಿಹರ ಪಂಚಮಸಾಲಿ ಪೀಠದ 15 ಟ್ರಸ್ಟಿಗಳ ಪೈಕಿ ಸಭೆಯಲ್ಲಿದ್ದ 13 ಟ್ರಸ್ಟಿಗಳು ಶ್ರೀ ವಚನಾನಂದ ಸ್ವಾಮೀಜಿಯವರನ್ನು ಪೀಠದಿಂದ ಉಚ್ಛಾಟಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಶ್ರೀ ಪೀಠದಲ್ಲಿ ತಾರಕಕ್ಕೇರಿದ್ದ ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವಿನ ಬಿಕ್ಕಟ್ಟು ಸೋಮವಾರ ಸೋಮವಾರ ಸ್ವಾಮೀಜಿ ಅವರನ್ನು ಶ್ರೀ ಪೀಠದಿಂದ ಉಚ್ಛಾಟನೆಗೊಳಿಸುವ ಮೂಲಕ ಸ್ಫೋಟಗೊಂಡಿದೆ.

- ಹರಿಹರ ಪಂಚಮಸಾಲಿ ಪೀಠದ 15 ಟ್ರಸ್ಟಿ ಪೈಕಿ 13 ಜನರ ಒಮ್ಮತದ ನಿರ್ಣಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಹರಿಹರ ಪಂಚಮಸಾಲಿ ಪೀಠದ 15 ಟ್ರಸ್ಟಿಗಳ ಪೈಕಿ ಸಭೆಯಲ್ಲಿದ್ದ 13 ಟ್ರಸ್ಟಿಗಳು ಶ್ರೀ ವಚನಾನಂದ ಸ್ವಾಮೀಜಿಯವರನ್ನು ಪೀಠದಿಂದ ಉಚ್ಛಾಟಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಶ್ರೀ ಪೀಠದಲ್ಲಿ ತಾರಕಕ್ಕೇರಿದ್ದ ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವಿನ ಬಿಕ್ಕಟ್ಟು ಸೋಮವಾರ ಸೋಮವಾರ ಸ್ವಾಮೀಜಿ ಅವರನ್ನು ಶ್ರೀ ಪೀಠದಿಂದ ಉಚ್ಛಾಟನೆಗೊಳಿಸುವ ಮೂಲಕ ಸ್ಫೋಟಗೊಂಡಿದೆ.

ಶ್ರೀ ಮಠದ ಸಭಾಂಗಣದಲ್ಲಿ ಸುಮಾರು 3 ಗಂಟೆ ಕಾಲ ಸುಧೀರ್ಘ ಚರ್ಚೆ ನಡೆಸಿದ ಟ್ರಸ್ಟಿಗಳು, ಸ್ವಾಮೀಜಿ ನಡವಳಿಕೆಯು ಪೀಠದ ಹಿತಾಸಕ್ತಿಗೆ ಕಾಪಾಡುವುದರ ವಿರುದ್ಧವಾಗಿದೆ ಎಂಬುದಾಗಿ ನಿರ್ಧರಿಸಿ, 15 ಟ್ರಸ್ಟಿಗಳ ಪೈಕಿ ಸಭೆಯಲ್ಲಿದ್ದ 13 ಟ್ರಸ್ಟಿಗಳು ಸ್ವಾಮೀಜಿ ಉಚ್ಛಾಟಿಸಲು ನಿರ್ಧಾರ ಕೈಗೊಂಡರು. ಉಳಿದ ಟ್ರಸ್ಟಿಗಳ ಪೈಕಿ ಓರ್ವರು ತಮ್ಮ ಸಭೆಯ ನಿರ್ಣಯಕ್ಕೆ ತಮ್ಮ ಸಮ್ಮತಿ ಇದೆಯೆಂಬುದಾಗಿ ದೂರವಾಣಿ ಕರೆ ಮಾಡಿ, ಸಮ್ಮತಿಸಿದ್ದಾರೆ. ಸಭೆ ಬಗ್ಗೆ ಸ್ವಾಮೀಜಿಗೆ ಮುಂಚಿತವಾಗಿಯೇ ತಿಳಿಸಿದರೂ ಸಭೆಗೆ ಬರಲಿಲ್ಲ ಎಂದು ಟ್ರಸ್ಟಿಗಳು ಹೇಳಿದರು.

** ಪದಚ್ಯುತಿಗೆ ಟ್ರಸ್ಟ್ ನೀಡಿರುವ ಕಾರಣಗಳು ಸ್ವಾಮೀಜಿ ನಡೆ, ನುಡಿ ಮತ್ತು ಸಮಾಜದ ಗೌರವಕ್ಕೆ ಧಕ್ಕೆ ತರುವಂತಿದೆ. ಆಚಾರ-ವಿಚಾರ, ನಡೆ-ನುಡಿಗಳು ಪೀಠದ ಪಾವಿತ್ರ್ಯತೆಗೆ ಹೊಂದಿಕೆಯಾಗುತ್ತಿಲ್ಲ. ಶ್ರೀಗಳು ಸಮಾಜದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಸಮಾಜದ ಐಕ್ಯತೆಗೆ ಧಕ್ಕೆ ತಂದಿದ್ದಾರೆ. ಭಕ್ತರಲ್ಲಿ ಭಿನ್ನತೆ ಮೂಡಿಸಿ, ಬೇಧಗಳನ್ನು ಸೃಷ್ಟಿಸಿ, ಸಮಾಜವನ್ನು ಒಡೆದು ಆಳುವ ದ್ವೇಷಪೂರಿತ ನೀತಿ ಅನುಸರಿಸುತ್ತಿದ್ದಾರೆ ಎಂಬುದು ಟ್ರಸ್ಟ್ ಹೇಳಿಕೆ.

ನಡವಳಿಕೆಯಲ್ಲಿ ದೋಷಗಳ ಬಗ್ಗೆ ಹಿಂದಿನ ಅನೇಕ ಸಭೆಗಳಲ್ಲಿ ತಿಳಿಸಿ, ತಿದ್ದಿಕೊಳ್ಳಲು ಸಲಹೆ ನೀಡಿದರೂ ಅಸಹಕಾರ ತೋರಿದ್ದಾರೆ. ಸ್ವಾಮೀಜಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ, ನಿರ್ಲಕ್ಷ್ಯಿಸುತ್ತಾ ಬಂದಿದ್ದಾರೆ. ತಾವು ಕುಳಿತ ಧರ್ಮ ಪೀಠದ ಜವಾಬ್ದಾರಿಯನ್ನೇ ಮರೆತಿದ್ದಾರೆ. ಸಮಾಜದ ಹಿತಾಸಕ್ತಿ ಗಾಳಿಗೆ ತೂರಿ, ವೈಯಕ್ತಿಕ ಐಷಾರಾಮಿ ಜೀವನಕ್ಕೆ ಆದ್ಯತೆ ನೀಡಿದ್ದಾರೆ.

ಸಮಾಜದ ಹಣವನ್ನು ಸಮಾಜದ ಅಭಿವೃದ್ಧಿಗೆ ಬಳಸದೇ, ಈ ಬಗ್ಗೆ ಸರಿಯಾದ ಮಾಹಿತಿ ಸಹ ನೀಡದೇ, ಗೌಪ್ಯತೆ ಕಾಪಾಡುತ್ತಿದ್ದಾರೆ. ಸಮಾಜದ ಅಸ್ತಿತ್ವಕ್ಕೆ ಧಕ್ಕೆಯಾಗುವಂತೆ ಶ್ರೀಗಳ ದುರಾಲೋಚನೆ, ಸಮಾಜದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಬುಡಮೇಲು ಮಾಡುವಂತೆ ಸ್ವಾಮೀಜಿ ವರ್ತನೆ ಇತ್ತು ಎಂದು ಟ್ರಸ್ಟ್ ನಡಾವಳಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಪೀಠದ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ವರ್ತನೆ ಶ್ರೀಗಳಲ್ಲಿತ್ತು. ಸಮಾಜದ ಗಮನ ಬೇರೆಡೆ ಸೆಳೆಯಲು ತಮ್ಮದೇ ಗುಂಪಿನ ಸದಸ್ಯರ ಮೂಲಕ ಲೆಕ್ಕ ಕೊಡಿ ಎಂಬ ಚಳವಳಿಗೆ ಪ್ರಚೋದಿಸಿದ್ದು ಖಂಡನೀಯ ಎಂಬುದಾಗಿ ಟ್ರಸ್ಟ್ ಈ ಎಲ್ಲಾ ಅಂಶಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ಇಂತಹ ಸ್ವಾಮೀಜಿಯನ್ನು ಶ್ರೀಪೀಠದಲ್ಲಿ ಮುಂದುವರಿಸಲು ಯಾವುದೇ ಕಾರಣಗಳಿಲ್ಲವೆಂದು ಬಹುಮತದೊಂದಿಗೆ ಪದಚ್ಯತಗೊಳಿಸಲು ತೀರ್ಮಾನ ಕೈಗೊಂಡಿರುವುದಾಗಿ ಸಭೆಯ ನಡಾವಳಿಗಳಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗಿದೆ.

- - -