ಬಡ್ಡಿ ಮಾಫಿಯಾದಲ್ಲಿ ಮಕ್ಕಳ ಬಳಕೆ ಅವ್ಯಾಹತ!

| Published : Aug 25 2024, 01:48 AM IST

ಸಾರಾಂಶ

ದುಡ್ಡಿನ ರುಚಿ ಹಚ್ಚಿಸಿಕೊಳ್ಳುವ ಮಕ್ಕಳು, ತಾವು ಮನೆಗಳಲ್ಲಿ ಸುಳ್ಳು ಹೇಳಿ ದುಡ್ಡು ಪಡೆದು ಸಾಲಕ್ಕೆ ಬಿಡುತ್ತಾರೆ. ಇದು ಪ್ರಾರಂಭಿಕ ಹಂತ. ಹೀಗೆ ತಾವೂ ಬಡ್ಡಿಗೆ ದುಡ್ಡು ಕೊಡಲು ಆರಂಭಿಸಿ ಮುಂದೆ ಒಂದೆರಡ್ಮೂರು ವರ್ಷವಾಗುತ್ತಲೇ ಅವರೇ ಫೈನಾನ್ಸ್‌ ಮಾಡಲು ಶುರು ಮಾಡುತ್ತಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿನ ಬಡ್ಡಿ ಮಾಫಿಯಾ ತಮ್ಮ ದಂಧೆಗೆ ಮಕ್ಕಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿರುವುದು ದೊಡ್ಡ ಆಘಾತಕಾರಿ ಸಂಗತಿ. ಮಕ್ಕಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಬಡ್ಡಿ ಕುಳಗಳು. ಇವರ ಕುಮ್ಮಕ್ಕಿನಿಂದ ಮಕ್ಕಳ ನಡುವೆಯೇ ಹೊಡೆದಾಟ, ಚಾಕು ಇರಿತದಂತಹ ಘಟನೆಗಳು ನಡೆಯುತ್ತಿರುವುದು ದೊಡ್ಡ ದುರಂತ. ಇದು ಪ್ರಜ್ಞಾವಂತರು ಹೌಹಾರುವಂತೆ ಮಾಡಿದೆ.

"ಬೆಳೆಯುವ ಸಿರಿ ಮೊಳಕೆಯಲ್ಲಿ " ಎಂಬ ಮಾತಿದೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಸರಿಯಾದ ದಾರಿ ತೋರಿದರೆ ಅವರು ಮುಂದೆ ಸಮಾಜಕ್ಕೆ ದೊಡ್ಡ ಶಕ್ತಿಯಾಗಬಲ್ಲರು. ಆದರೆ, ದೊಡ್ಡವರಾಗಿ ನಾವು ದಾರಿ ತಪ್ಪಿಸಿದರೆ ದಾರಿ ತಪ್ಪಿದ ಮಗ, ಸಮಾಜ ಘಾತುಕ ಶಕ್ತಿಯಾಗಬಲ್ಲ. ಹೀಗೆ ಮಕ್ಕಳ ದಾರಿ ತಪ್ಪಿಸುವ ಕೆಲಸ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಹೀಗೆ ಮಕ್ಕಳ ದಾರಿ ತಪ್ಪಿಸುವ ಕೆಲಸವನ್ನು ಬಡ್ಡಿ ಮಾಫಿಯಾ ವ್ಯವಸ್ಥಿತವಾಗಿ ಮಾಡುತ್ತಿದೆ. ಈ ಬಗ್ಗೆ ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ.

ಮಕ್ಕಳ ಬಳಕೆ ಹೇಗೆ?

ಬಡ್ಡಿ ಕುಳಗಳು ಅದೇ ತಾನೇ ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳನ್ನೇ ಟಾರ್ಗೇಟ್‌ ಮಾಡಿಕೊಳ್ಳುತ್ತಿದ್ದಾರೆ. ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಲ್ಲಿ ದೈಹಿಕ ವಾಗಿ ಸಾಕಷ್ಟು ಬದಲಾವಣೆಗಳು ಆಗುತ್ತಿರುತ್ತವೆ. ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಬಯಕೆ ಅವರಲ್ಲಿ ಮೂಡುತ್ತಿರುತ್ತದೆ. ಸರಿ-ತಪ್ಪುಗಳ ಮಾಹಿತಿ ಇರಲ್ಲ. ಇಂಥ ಮಕ್ಕಳಿಗೆ ದುಡ್ಡಿನ ರುಚಿ ಹಚ್ಚಿ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ.

ಸಾಲ ಪಡೆದುಕೊಳ್ಳುವಂಥವರನ್ನು ಏನಾದರೂ ಈ ಮಕ್ಕಳು ಕರೆದುಕೊಂಡು ಬಂದರೆ ಮಕ್ಕಳಿಗೆ ಕಮಿಷನ್‌ ಆಧಾರದ ಮೇಲೆ ದುಡ್ಡು ಕೊಡಲಾಗುತ್ತದೆಯಂತೆ. ಜತೆಗೆ ವಸೂಲಿಗೂ ಮಕ್ಕಳನ್ನು ಬಳಸಿಕೊಳ್ಳುತ್ತದೆ. ಇದಕ್ಕೂ ಕಮಿಷನ್‌ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸುತ್ತವೆ.

ಇನ್ನು ದುಡ್ಡಿನ ರುಚಿ ಹಚ್ಚಿಸಿಕೊಳ್ಳುವ ಮಕ್ಕಳು, ತಾವು ಮನೆಗಳಲ್ಲಿ ಸುಳ್ಳು ಹೇಳಿ ದುಡ್ಡು ಪಡೆದು ಸಾಲಕ್ಕೆ ಬಿಡುತ್ತಾರೆ. ಇದು ಪ್ರಾರಂಭಿಕ ಹಂತ. ಹೀಗೆ ತಾವೂ ಬಡ್ಡಿಗೆ ದುಡ್ಡು ಕೊಡಲು ಆರಂಭಿಸಿ ಮುಂದೆ ಒಂದೆರಡ್ಮೂರು ವರ್ಷವಾಗುತ್ತಲೇ ಅವರೇ ಫೈನಾನ್ಸ್‌ ಮಾಡಲು ಶುರು ಮಾಡುತ್ತಾರೆ. ಹೆಚ್ಚಾಗಿ ಇದಕ್ಕೆ ಹೈಸ್ಕೂಲ್‌ನಿಂದ ಹಿಡಿದು ಪಿಯುಸಿ ಓದುವ ಹುಡುಗರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕೆಲವೊಮ್ಮೆಯಂತೂ ಪಾಲಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದು ಕೂಡ ಗೊತ್ತೆ ಇರಲ್ಲ. ಅವರು ಯಾವುದಾದರೂ ಹೊಡೆದಾಟ, ಹಲ್ಲೆಗಳಲ್ಲಿ ಅವರ ಹೆಸರು ಕೇಳಿ ಬಂದಾಗಲೇ ತಮ್ಮ ಮಕ್ಕಳು ಈ ಬಡ್ಡಿ ಕುಳಗಳ ಬಲೆಗೆ ಸಿಲುಕಿರುವುದು ಪಾಲಕರಿಗೆ ಗೊತ್ತಾಗುವುದು. ಹೀಗೆ ಮಕ್ಕಳನ್ನು ದಾರಿ ತಪ್ಪಿಸುವ ಕೆಲಸ ಬಡ್ಡಿ ಕುಳಗಳು ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯವೂ ಇದರಿಂದ ಕತ್ತಲಕ್ಕೆ ಸರಿಯುತ್ತಿದೆ.

ಕಳೆದ ವಾರ ಮಕ್ಕಳ ನಡುವೆ ಹೊಡೆದಾಟ ನಡೆದು 9ನೇ ತರಗತಿಯ ವಿದ್ಯಾರ್ಥಿಗೆ 10ನೇ ತರಗತಿ ವಿದ್ಯಾರ್ಥಿ ಚೂರಿ ಇರಿದಿದ್ದು ಇದೇ ರೀತಿಯ ಬಡ್ಡಿ ಕುಳಗಳ ಕುಮ್ಮಕ್ಕೇ ಕಾರಣ. ಅದರಲ್ಲೂ ಸೆಟ್ಲಮೆಂಟ್‌, ಕರ್ಕಿಬಸವೇಶ್ವರ ನಗರ, ಹೊಸೂರ, ಗಿರಣಿಚಾಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಪಾಲಕರು ಕೊಂಚ ಜಾಗ್ರತರಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಪಾಲಕರು ತಮ್ಮ ಮಕ್ಕಳು ಶಾಲೆ- ಕಾಲೇಜುಗಳಿಗೆ ಸರಿಯಾಗಿ ಹೋಗುತ್ತಿದ್ದಾರೆಯೋ ಇಲ್ವೋ, ಯಾರ್‍ಯಾರು ಇಂತಹ ಕೆಲಸಗಳಲ್ಲಿ ಸಿಲುಕಿದ್ದಾರೆ ಎಂಬುದನ್ನು ಆಗಾಗ ಪರಿಶೀಲಿಸುತ್ತಿರಬೇಕು. ಒಂದು ವೇಳೆ ದಾರಿ ತಪ್ಪುತ್ತಿದ್ದರೆ ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕು ಎಂಬುದು ಮನಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ಬಡ್ಡಿ ಮಾಫಿಯಾದವರು ತಾವು ಕೆಡುವುದರೊಂದಿಗೆ ಮಕ್ಕಳನ್ನು ಬಳಸಿಕೊಂಡು ಸಮಾಜವನ್ನೇ ಕೆಡಿಸುತ್ತಿದ್ದಾರೆ ಎಂದರೆ ತಪ್ಪಾಗಲಕ್ಕಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಅಂಬೋಣ.