ಸಾರಾಂಶ
ಸಂದೀಪ್ ವಾಗ್ಲೆಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರಗೋಡಿನ ನೀಲೇಶ್ವರದ ದೈವಸ್ಥಾನದಲ್ಲಿ ನಡೆದ ಪಟಾಕಿ ಅನಾಹುತದಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಎಚ್ಚರಿಕೆಯನ್ನು ಮೀರಿ ದಕ್ಷಿಣ ಕನ್ನಡದಲ್ಲೂ ನಿಷೇಧಿತ ಸುಡುಮದ್ದು ಬಳಕೆ ಅವ್ಯಾಹತವಾಗಿರುವ ಆರೋಪ ಇದೆ. ಇವುಗಳ ತಯಾರಿಕೆ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕೆಂಬ ಕೂಗು ಎದ್ದಿದೆ.ಅನಾಹುತಕಾರಿ ರಾಸಾಯನಿಕಗಳನ್ನು ಬಳಸಿ ಮಾನವ, ಪ್ರಾಣಿ, ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ನಿಷೇಧಿಸಿದೆ. ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಮಾಡಬೇಕು, ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಸರ್ಕಾರವೂ ನೀಡಿದೆ. ಇದನ್ನೆಲ್ಲ ಮೀರಿ ನಿಷೇಧಿತ ಸುಡುಮದ್ದು ಮಾರುಕಟ್ಟೆಗೆ ಬರುವುದು ಮಾತ್ರ ನಿಂತಿಲ್ಲ.ಕದೊನಿ, ಗರ್ನಲ್ ನಿಷೇಧ ಯಾಕಿಲ್ಲ?:ಕರಾವಳಿಯಲ್ಲಿ ಜಾತ್ರೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕದೊನಿ, ಗರ್ನಲ್, ರಾಕೆಟ್, ಮಾಲೆ ಪಟಾಕಿ ಇತ್ಯಾದಿ ಭಾರೀ ಶಬ್ದ ಮಾಲಿನ್ಯ ಮಾಡುವ ಸುಡುಮದ್ದುಗಳನ್ನು ಅವ್ಯಾಹತವಾಗಿ ಬಳಕೆ ಮಾಡಲಾಗುತ್ತಿದೆ. ಇವು ಹಸಿರು ಪಟಾಕಿಗಳಲ್ಲ, ನಿಷೇಧಿತ ರಾಸಾಯನಿಕಗಳಿಂದ ತಯಾರು ಮಾಡಿರುವಂಥದ್ದೇ ಹೆಚ್ಚು ಎಂದು ಪಟಾಕಿ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.ಕರಾವಳಿಯಲ್ಲೇ ನಿಷೇಧಿತ ಪಟಾಕಿ ತಯಾರಿ:ಕದೊನಿ, ಗರ್ನಲ್ ಇತ್ಯಾದಿ ಸುಡುಮದ್ದುಗಳಲ್ಲಿ ನಿಷೇಧಿತ ನೈಟ್ರೋಕ್ಲೋರೈಡ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ದೊಡ್ಡ ಮಟ್ಟದ ಶಬ್ದ ಉಂಟಾಗಲು ಇದೇ ಕಾರಣ. ಕಾಸರಗೋಡಿನ ನೀಲೇಶ್ವರದಲ್ಲಿ ನಡೆದ ಅವಘಡದಲ್ಲಿ ಒಂದು ವೇಳೆ ಹಸಿರು ಪಟಾಕಿ ಇದ್ದಿದ್ದರೆ ಇಷ್ಟು ದೊಡ್ಡ ಅನಾಹುತ ಸಂಭವಿಸುತ್ತಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ನಿಷೇಧಿತ ಸುಡುಮದ್ದು ತಯಾರಿಸುವ ಕೆಲಸ ನಡೆಯುತ್ತಿದೆ. ಅವುಗಳನ್ನು ಮಟ್ಟ ಹಾಕುವ ಕೆಲಸ ಮಾಡದಿದ್ದರೆ ಇಲ್ಲೂ ಅಂತಹ ಅವಘಡ ಸಂಭವಿಸುವ ದಿನ ದೂರವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ.ಹಸಿರು ಪಟಾಕಿಗಳನ್ನೇ ಖರೀದಿಸಿ: ‘‘ಅಪಾಯಕಾರಿ ರಾಸಾಯನಿಕಗಳಿಂದ ತಯಾರಿಸಿದ ಪಟಾಕಿಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹಸಿರು ಪಟಾಕಿಗಳಲ್ಲಿ ಶಬ್ದ ಹಾಗೂ ಅನಾಹುತದ ತೀವ್ರತೆಯನ್ನು ಕಡಿಮೆ ಮಾಡಲಾಗಿದೆ. ಕರಾವಳಿಗೆ ಬರುವ ಬಹುತೇಕ ಹಸಿರು ಪಟಾಕಿಗಳು ಸರಬರಾಜು ಆಗುವುದು ತಮಿಳುನಾಡಿನ ಶಿವಕಾಶಿಯಿಂದ. ಅಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಕಾನೂನು ಪ್ರಕಾರ ತಯಾರಾಗಿ ಬರುತ್ತವೆ. ಗ್ರಾಹಕರು ನಿಷೇಧಿತ ಪಟಾಕಿಗಳನ್ನು ಖರೀದಿ ಮಾಡಬಾರದು” ಎನ್ನುತ್ತಾರೆ ಹೋಲ್‌ಸೇಲ್ ಮತ್ತು ರಿಟೇಲ್ ಪಟಾಕಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆಲ್ವಿನ್ ಪಿಂಟೋ.
ಜನನಿಬಿಡ ಸ್ಥಳಗಳಲ್ಲೇ ಪಟಾಕಿ ಅಂಗಡಿ!:ಪಟಾಕಿ ಅಂಗಡಿಗಳು ಜನವಸತಿ ಪ್ರದೇಶವಲ್ಲದ ಬಯಲು ಪ್ರದೇಶದಲ್ಲಿರಬೇಕು, ಮುನ್ನೆಚ್ಚರಿಕಾ ವ್ಯವಸ್ಥೆಗಳಿರಬೇಕು ಎಂಬಿತ್ಯಾದಿ ಹಲವು ನಿಬಂಧನೆಗಳಿವೆ. ಆದರೆ ಮಂಗಳೂರು ನಗರದಲ್ಲಿ ಹೆಚ್ಚಿನ ಪಟಾಕಿ ಅಂಗಡಿಗಳು ಇರೋದು ಜನವಸತಿ ಪ್ರದೇಶದಲ್ಲಿ. ಆಡಳಿತದ ಒಪ್ಪಿಗೆಯಿಂದಲೇ ಇವು ನಡೆಯುತ್ತಿವೆ ಎಂಬ ಆರೋಪವಿದೆ.-----------ರಾಜಕೀಯ ಪಕ್ಷಗಳ ಪಟಾಕಿಗಳು ನಿಷೇಧಿತ!
ಚುನಾವಣೆ ಗೆಲುವಿನ ಸಂದರ್ಭ, ಪಕ್ಷಗಳ ಹಿರಿಯ ನಾಯಕರು, ಜನಪ್ರತಿನಿಧಿಗಳು ಬರುವಾಗ ಮಾರುದ್ದದ ಪಟಾಕಿ ಸಿಡಿಸೋದನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಮಾಲೆ ಪಟಾಕಿಗೆ ಬೆಂಕಿ ಹಚ್ಚಿದರೆ ಹತ್ತು ನಿಮಿಷವಾದರೂ ಸಿಡಿಯುತ್ತಲೇ ಇರುತ್ತದೆ. ಪಟಾಕಿ ವ್ಯಾಪಾರಸ್ಥರ ಪ್ರಕಾರ ಇದು ನಿಷೇಧಿತ ಸುಡುಮದ್ದು. ಹಸಿರು ಪಟಾಕಿ ಬಳಕೆ ಮಾಡಿದರೆ ಅಷ್ಟು ಶಬ್ದ ಕೂಡ ಬರಲ್ಲ. ಅಷ್ಟು ಸುದೀರ್ಘ ಕಾಲ ಸಿಡಿಯೋದೂ ಇಲ್ಲ. ವಿಧಾನಸಭೆ, ವಿಧಾನ ಪರಿಷತ್, ಸಂಸತ್ ಜನಪ್ರತಿನಿಧಿಗಳ ಕಣ್ಣೆದುರಲ್ಲೇ ಇಂಥ ಕಾನೂನು ಬಾಹಿರ ಚಟುವಟಿಕೆ ನಡೆಯುವುದನ್ನು ಮೊದಲು ನಿಷೇಧಿಸುವ ಅಗತ್ಯವಿದೆ.----------ಹಸಿರು ಪಟಾಕಿ ವಿಚಾರದ ಕುರಿತು ಸರ್ಕಾರದ ನಿರ್ದಿಷ್ಟ ನಿರ್ದೇಶನಗಳಿದ್ದು, ಅದರ ಪ್ರಕಾರವೇ ಪರವಾನಗಿ ನೀಡುವುದು, ನಿರ್ಬಂಧ ವಿಧಿಸುವ ಕ್ರಮಗಳು ನಡೆಯುತ್ತಿವೆ. ತಾತ್ಕಾಲಿಕ ಸುಡುಮದ್ದು ಮಾರಾಟದ ಸಂದರ್ಭದಲ್ಲೂ ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡಿ, ಅಗ್ನಿ ಶಾಮಕದಳ ಎನ್‌ಒಸಿ ನೀಡಿದ ಬಳಿಕವೇ ಅವಕಾಶ ನೀಡಲಾಗುತ್ತಿದೆ. ಮೊನ್ನೆ ನೀಲೇಶ್ವರದಲ್ಲಿ ನಡೆದಂಥ ಅನಾಹುತದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ ಯಾವ ಕ್ರಮ ವಹಿಸಬೇಕು ಅಂತ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಮುಲ್ಲೈ ಮುಗಿಲನ್ ಎಂ.ಪಿ., ದ.ಕ. ಜಿಲ್ಲಾಧಿಕಾರಿ.