ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಚೆನ್ನಾಗಿರಬೇಕು: ಡಾ. ಹುಲಿಕಲ್ ನಟರಾಜ್‌

| Published : Sep 05 2025, 01:00 AM IST

ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಚೆನ್ನಾಗಿರಬೇಕು: ಡಾ. ಹುಲಿಕಲ್ ನಟರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಚೆನ್ನಾಗಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ, ವರ್ತಮಾನ ವ್ಯವಸ್ಥೆಯಲ್ಲಿ ಯುವಶಕ್ತಿಯು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಬದಲಾವಣೆ ಸಾಧ್ಯ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮನೆಯ ವಾಸ್ತುಗಿಂತ ಮನಸ್ಸಿನ ವಾಸ್ತು ಚೆನ್ನಾಗಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ, ವರ್ತಮಾನ ವ್ಯವಸ್ಥೆಯಲ್ಲಿ ಯುವಶಕ್ತಿಯು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಬದಲಾವಣೆ ಸಾಧ್ಯ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ ಕರೆ ನೀಡಿದರು.

ಜಿಲ್ಲಾ ಸಹಮತ ವೇದಿಕೆ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿಯಿಂದ, ಗುರುವಾರ ನಗರದ ಪಾಟೀಲ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ "ವಚನಗಳಲ್ಲಿ ವೈಜ್ಞಾನಿಕತೆ " ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಇಂದು ಧರ್ಮ ಎಂಬುದು ಕೆಲವರ ಸ್ವತ್ತಾಗಿ ಮಾರುಕಟ್ಟೆಯಲ್ಲಿ ಸರಕಾಗಿದೆ. ವೈಚಾರಿಕತೆ ಎಂಬುದು ಸದಾ ಹರಿಯುವ ನೀರಿನಂತೆ, ಸರ್ವ ಜನಾಂಗಕ್ಕೆ ವಿಜ್ಞಾನ ಮತ್ತು ವೈಚಾರಿಕತೆ ಅಗತ್ಯವಾಗಿದೆ. ಮನೆಯ ವಾಸ್ತುಗಿಂತ ಹೆಚ್ಚಾಗಿ ನಾವು ಮನಸ್ಸಿನ ವಾಸ್ತು ಚೆನ್ನಾಗಿದೆಯಾ ಎಂದು ನೋಡಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ದೇಶ ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದರೂ, ಸಮಾಜದಲ್ಲಿ ಮೂಢನಂಬಿಕೆ, ಅಂಧಶ್ರದ್ಧೆ ಇತ್ಯಾದಿಗಳನ್ನು ಕಾಣುತ್ತಿದ್ದೇವೆ. ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ದೇಶದ ಶಕ್ತಿಯಾಗಿರುವ ವಿದ್ಯಾರ್ಥಿಗಳು ಬದುಕಿನಲ್ಲಿ ಬಸವಣ್ಣನವರ ಸಂದೇಶಗಳನ್ನು ಅಳವಡಿಸಿಕೊಂಡು ಸಕಾರಾತ್ಮಕ ಚಿಂತನೆಗಳೊಂದಿಗೆ ಗುರಿ ತಲುಪಿ ಸಮಾಜ ಬದಲಾವಣೆಗೆ ಪ್ರೇರಣೆಯಾಗಿರಿ ಎಂದು ಸಲಹೆ ನೀಡಿದರು.

ರಾಜ್ಯ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಭಾಲ್ಕಿಯ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಸಮಾಜದಲ್ಲಿ ಜಾತಿ ಎಂಬುದು ಕತ್ತರಿಯಂತೆ, ಧರ್ಮವೆಂಬುದು ಸೂಜಿಯಂತೆ. ಅದು ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ, ದೇಶದ ಐಕ್ಯತೆಗೆ ಶಕ್ತಿ ತುಂಬುತ್ತದೆ ಎಂದು ನುಡಿದರು.

ಬೈಲೂರಿನ ನಿಜಗುಣಾನಂದ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣನವರು ಮನುಕುಲದ ಉದ್ಧಾರಕ. ಸಮಾಜದಲ್ಲಿ ಸಮಾನತೆ, ಶಾಂತಿ, ಸಾಮರಸ್ಯ, ಐಕ್ಯತೆ ಮೂಡಿಸಿ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಡಾ. ಹುಲಿಕಲ್ ನಟರಾಜ್, ವಿಶ್ವರಾಧ್ಯ ಸತ್ಯಂಪೇಠ್ ಹಾಗೂ ಸ್ವಾಮೀಜಿಗಳು ಉತ್ತರಿಸಿದರು.

ಹೊಸ ಚಿಂತನಾಶಕ್ತಿ ಮೂಡಿಸಲಿ: ಎಸ್ಪಿ ಪೃಥ್ವಿಕ್‌

ಯಾದಗಿರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನಲ್ಲಿ ಬಸವಾದಿ ಶರಣರ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾಗಿದೆ. ಬಸವಣ್ಣನವರು ತಮ್ಮ ಪ್ರಗತಿಪರ ವಿಚಾರಗಳ ಮೂಲಕ ಎಲ್ಲ ಅನಿಷ್ಠಗಳನ್ನು ದೂರ ಮಾಡಿ, ತೊಲಗಿಸಲು ಪ್ರಯತ್ನಿಸಿ ಸಮಭಾವ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು ಎಂದು ಹೇಳಿದರು. ವೇದಿಕೆಯಲ್ಲಿ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ, ಗುರುಮಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ ಹುಣಸಗಿ, ನಗನೂರಿನ ಅಲ್ಲಮಪ್ರಭು ಮಹಾಸ್ವಾಮೀಜಿ, ಅಥಣಿಯ ಪ್ರಭು ಚನ್ನಬಸವ ಮಹಾಸ್ವಾಮೀಜಿ, ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕೊಡೆಕಲ್‌ನ ಶಿವುಕುಮಾರ ಸ್ವಾಮೀಜಿ, ಚಿಗರಳ್ಳಿಯ ಕಬೀರಾನಂದ ಸ್ವಾಮೀಜಿ, ಸಹಮತ ವೇದಿಕೆ ಜಿಲ್ಲಾಧ್ಯಕ್ಷ ಡಾ. ಭೀಮಣ್ಣ ಮೇಟಿ, ಗುಂಡಪ್ಪ ಕಲಬುರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವರಾಜ ಕಲಕೇರಿ ಸುರಪುರ ಸ್ವಾಗತಿಸಿ, ಡಾ. ಎಸ್.ಎಸ್ ನಾಯಕ ನಿರೂಪಿಸಿ, ವಂದಿಸಿದರು.