ಪಿಎಂ, ಸಿಎಂಗಳಿಗೆ ಇಲ್ಲದ ಚೆಕ್‌ ಸಹಿ ಅಧಿಕಾರ ಗ್ರಾಪಂ ಅಧ್ಯಕ್ಷರಿಗಿದೆ

| Published : Oct 01 2024, 01:17 AM IST

ಪಿಎಂ, ಸಿಎಂಗಳಿಗೆ ಇಲ್ಲದ ಚೆಕ್‌ ಸಹಿ ಅಧಿಕಾರ ಗ್ರಾಪಂ ಅಧ್ಯಕ್ಷರಿಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪೈಕಿ ಪಿ.ಎಂ. ಮತ್ತು ಸಿ.ಎಂ.ಗಳಿಗೆ ಇರದೇ ಇರುವ ಮಹತ್ತರವಾದ ಅಧಿಕಾರವೆಂದರೆ, ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ. ಇದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾತ್ರ ಇದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನ ಅಷ್ಟು ಮಹತ್ವದ್ದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹನುಮಸಾಗರ ಗ್ರಾಪಂ ಕಟ್ಟಡ ಉದ್ಘಾಟಿಸಿ ಶಾಸಕ ಶಾಂತನಗೌಡ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪೈಕಿ ಪಿ.ಎಂ. ಮತ್ತು ಸಿ.ಎಂ.ಗಳಿಗೆ ಇರದೇ ಇರುವ ಮಹತ್ತರವಾದ ಅಧಿಕಾರವೆಂದರೆ, ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ. ಇದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾತ್ರ ಇದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನ ಅಷ್ಟು ಮಹತ್ವದ್ದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಸೋಮವಾರ ತಾಲೂಕಿನ ಹನುಮಸಾಗರ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಪಂಚಾಯಿತಿಗಳಲ್ಲಿ ಯಾವಾಗಲೂ ಸಭೆಗಳನ್ನು ನಡೆಸುತ್ತಿದ್ದರೆ, ಇದೀಗ ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಗ್ರಾಪಂ ಆಡಳಿತದಲ್ಲಿ ಸರ್ಕಾರದ ಅನುದಾನ, ಯೋಜನೆಗಳನ್ನು ಬಳಸಿ, ಗ್ರಾಮೀಣಾಭಿವೃದ್ಧಿ ಕೆಲಸಗಳು ತೃಪ್ತಿಕರವಾಗಿ ನಡೆಯುತ್ತಿವೆ ಎಂದರು.

ಇದೀಗ ಬಹುಪಾಲು ಗ್ರಾಮ ಪಂಚಾಯಿತಿ ಕಟ್ಟಡಗಳು ಉತ್ತಮ ವ್ಯವಸ್ಥೆಗಳನ್ನು ಹೊಂದಿವೆ. ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಆದಷ್ಟು ಪ್ರಾಮಾಣಿಕವಾಗಿ ತಮ್ಮ ಸುತ್ತಮುತ್ತಲ ಗ್ರಾಮ, ಜನರ ಹಿತರಕ್ಷಣೆಗೆ ಕೆಲಸ ಮಾಡಬೇಕು. ಆಗ ಮಾತ್ರ ಗ್ರಾಮ ಸ್ವರಾಜ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ವಿಧಾನ ಪರಿಷತ್ತು ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ದೇಶದಲ್ಲಿ ಕ್ರಾಂತಿವೀರ ಬಸವಣ್ಣ ಮತ್ತು ಡಾ. ಅಂಬೇಡ್ಕರ್ ಅವರು ಮಹಿಳಾ ಸಬಲೀಕರಣಕ್ಕಾಗಿ ಹೋರಾಡಿದ ಮಹನೀಯರಾಗಿದ್ದಾರೆ. ಇದರ ಪರಿಣಾಮ ಇಂದು ಗ್ರಾಮ ಪಂಚಾಯಿತಿಗಳಲ್ಲಿ ಶೇ.50ರಷ್ಟು, ಇತರೆ ಚುನಾವಣೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ದೊರೆತಿದೆ. ಈ ಅವಕಾಶ ಸದುಪಯೋಗ ಪಡೆದು ಮಹಿಳೆಯವರು ಇನ್ನೂ ಹೆಚ್ಚು ಅಬಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಕೆಲಸಗಳನ್ನು ತನ್ನದು ಎಂಬ ಭಾವನೆಯಿಂದ ಮಾಡಿದಾಗಿ ಆ ಕೆಲಸ ಖಂಡಿತ ಉತ್ತಮವಾಗಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹನುಮಸಾಗರದ ಗ್ರಾಮ ಪಂಚಾಯಿತಿ ಕಟ್ಟಡವಾಗಿದೆ. ದೇಶದಲ್ಲಿ 7 ಲಕ್ಷ ಹಳ್ಳಿಗಳಿದ್ದು, 2.5 ಲಕ್ಷ ಗ್ರಾಮ ಪಂಚಾಯಿತಿಗಳು, ಕರ್ನಾಟಕದಲ್ಲಿ 6 ಸಾವಿರ ಗ್ರಾ.ಪಂ.ಗಳಿದ್ದು ಹೊನ್ನಾಳಿಯಲ್ಲಿ 29 ಗ್ರಾಮ ಪಂಚಾಯಿತಿಗಳಿವೆ ಎಂದರು.

ಗ್ರಾಪಂ ಅಧ್ಯಕ್ಷೆ ಶೃತಿ ಮಂಜುನಾಥ್ ಮಾತನಾಡಿ, ಕಟ್ಟಡ ಮಳೆಗಾಲದಲ್ಲಿ ಸೋರುತ್ತಿತ್ತು. ಇದನ್ನು ಕಂಡು ತಮ್ಮ ಗ್ರಾಮ ಪಂಚಾಯಿತಿಗೆ ಒಂದು ಉತ್ತಮವಾದ ಕಟ್ಟಡ ನಿರ್ಮಿಸಬೇಕು ಎಂಬ ಕನಸಿತ್ತು, ಇದೀಗ ಎಲ್ಲರ ಸಹಕಾರದಿಂದ ಅದು ನನಸಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಇಒ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಬಾಬುಗಳಿಂದ ಒಟ್ಟು ₹69 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗಿದೆ. ರೈತರು, ಬಡವರು ಸರ್ಕಾರದ ಅನೇಕ ಯೋಜನೆಗಳನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಪಂ ಪಿಡಿಒ ಶಿವಕುಮಾರ್ ಡಿ. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ, ಶೃತಿ ಮಂಜುನಾಥ್, ಉಪಾಧ್ಯಕ್ಷ ನಾಗರಾಜ್ ನಾಯ್ಕ ಸೇರಿದಂತೆ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಎಂಜಿನಿಯರಿಂಗ್‌ ಉಪವಿಭಾಗದ ಎ.ಇ.ಇ. ಮೋತಿಲಾಲ್, ತಾಪಂ ವ್ಯವಸ್ಥಾಪಕ ಮಹಮ್ಮದ್ ರಫಿ, ಮುಖಂಡ ಕೋನಾಯ್ಕನಹಳ್ಳಿ ಮಂಜುನಾಥ್, ಗ್ರಾಪಂ ಕಾರ್ಯದರ್ಶಿ ಎಸ್.ಮಂಜುನಾಥ್, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ನಾಗರಾಜ್, ಗ್ರಾಪಂ ವ್ಯಾಪ್ತಿ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

- - - -30ಎಚ್.ಎಲ್.ಐ1:

ಹೊನ್ನಾಳಿ ತಾಲೂಕಿನ ಹನುಮಸಾಗರದಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿ ಮಾತನಾಡಿದರು.