ನೊಣಗಳ ಕಾಟಕ್ಕೆ ಹೆಬ್ಬಾಳ್‌ ಗ್ರಾಮಸ್ಥರು ಹೈರಾಣ

| Published : Jun 21 2024, 01:08 AM IST

ಸಾರಾಂಶ

ದಾವಣಗೆರೆ ತಾಲೂಕಿನ ಹೆಬ್ಬಾಳ್‌ನಲ್ಲಿ ಕೋಳಿ ಫಾರಂ ತ್ಯಾಜ್ಯಗಳಿಂದಾಗಿ ನೊಣಗಳ ಸಂತತಿ ಮಿತಿಮೀರಿ ಹೆಚ್ಚಾಗಿದೆ. ಎಷ್ಟೆಂದರೆ, ಹಸುಗೂಸಿಗೆ ಎದೆಹಾಲು ಉಣಿಸುವುದಕ್ಕೂ ತಾಯಂದಿರು ಹಿಂದೇಟು ಹಾಕುವಂಥ ದುಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು, ತಿನ್ನುವ ಆಹಾರ, ಹಣ್ಣು ಹಂಪಲು ಎಲ್ಲವನ್ನೂ ದುಬಾರಿ ಚಿನ್ನಕ್ಕಿಂತ ಸುರಕ್ಷಿತವಾಗಿ ಇಡಬೇಕಾದ ಪೀಕಲಾಟ, ದುಸ್ಥಿತಿಗೆ ಹೆಬ್ಬಾಳ್‌ ಹಾಗೂ ಸುತ್ತಲಿನ ಗ್ರಾಮಗಳ ಜನತೆ ಸಿಲುಕಿದ್ದಾರೆ.

- ಕೋಳಿ ಫಾರಂ ತ್ಯಾಜ್ಯದಿಂದ ಹೆಚ್ಚುತ್ತಿರುವ ನೊಣಗಳ ಸಂಗತಿ । ಜನ-ಜಾನುವಾರು, ವಸ್ತುಗಳನ್ನೂ ಬಿಡದೇ ನಿರಂತರ ದಾಳಿ

- ಕೂಸಿಗೆ ಎದೆಹಾಲುಣಿಸಲು ತಾಯಂದಿರು ಹಿಂದೇಟು ಹಾಕುವಷ್ಟು ದುಸ್ಥಿತಿ । ನೊಣಗಳ ಸದ್ದಿನಲ್ಲಿ ಜನಹಿತ ಮರೆತ ಅಧಿಕಾರಿಗಳು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ತಾಲೂಕಿನ ಹೆಬ್ಬಾಳ್‌ನಲ್ಲಿ ಕೋಳಿ ಫಾರಂ ತ್ಯಾಜ್ಯಗಳಿಂದಾಗಿ ನೊಣಗಳ ಸಂತತಿ ಮಿತಿಮೀರಿ ಹೆಚ್ಚಾಗಿದೆ. ಎಷ್ಟೆಂದರೆ, ಹಸುಗೂಸಿಗೆ ಎದೆಹಾಲು ಉಣಿಸುವುದಕ್ಕೂ ತಾಯಂದಿರು ಹಿಂದೇಟು ಹಾಕುವಂಥ ದುಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು, ತಿನ್ನುವ ಆಹಾರ, ಹಣ್ಣು ಹಂಪಲು ಎಲ್ಲವನ್ನೂ ದುಬಾರಿ ಚಿನ್ನಕ್ಕಿಂತ ಸುರಕ್ಷಿತವಾಗಿ ಇಡಬೇಕಾದ ಪೀಕಲಾಟ, ದುಸ್ಥಿತಿಗೆ ಹೆಬ್ಬಾಳ್‌ ಹಾಗೂ ಸುತ್ತಲಿನ ಗ್ರಾಮಗಳ ಜನತೆ ಸಿಲುಕಿದ್ದಾರೆ.

ದಶಕಗಳ ಸಮಸ್ಯೆಗೆ ಮುಕ್ತಿಯಿಲ್ಲ:

ಇದು ನಿನ್ನೆ, ಮೊನ್ನೆಯ ಸಮಸ್ಯೆಯಲ್ಲ. ಹತ್ತಾರು ವರ್ಷಗಳಿಂದಲೂ ಪ್ರತಿ ಮಳೆಗಾಲ, ಚಳಿಗಾಲದಲ್ಲಿ ಹೆಬ್ಬಾಳ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೊಣಗಳ ಹಾವಳಿಗೆ ರೋಸಿಹೋಗಿದ್ದಾರೆ. ಈ ಬಗ್ಗೆ ವರ್ಷಕ್ಕೊಮ್ಮೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಲೆ ಇವೆ. ಆದರೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಆರೋಗ್ಯ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ಜನರ ಅಮಾಧಾನ ಕಂಡಾಗ ಕೋಳಿ ಫಾರಂ ಮಾಲೀಕರಿಗೆ ತೋರಿಕೆಗೊಂದು ನೋಟಿಸ್ ನೀಡಿ, ಕೈ ತೊಳೆದುಕೊತ್ತಿವೆ. ಹೆಬ್ಬಾಳ್ ವ್ಯಾಪ್ತಿಯಲ್ಲಿ ಆರೇಳು ಕೋಳಿ ಫಾರಂಗಳು ಇವೆ. ಇಲ್ಲಿನ ಗ್ರಾಮಸ್ಥರು, ಊರ ಮುಖಂಡರು, ಧಾರ್ಮಿಕ ನೇತಾರರಿಗಿಂತಲೂ ಅಲ್ಲಿನ ಕೋಳಿ ಫಾರಂಗಳ ಮಾಲೀಕರು ಮತ್ತು ಅವರ ಹಣದ ಪ್ರಭಾವವೇ ಹೆಚ್ಚಾಗಿದೆ. ಇಂಥ ಪ್ರಭಾವದ ಮುಂದೆ ಗ್ರಾಮಗಳ ಜನ- ಜಾನುವಾರಗಳ ದುರಂತ ಬದುಕು ಯಾರಿಗೂ ಕಾಣದಂತಾಗಿದೆ. ಹಸುಗೂಸಿಗೆ ತಾಯಿ ಎದೆ ಹಾಲುಣಿಸಲು ಚಿಂತೆ ಮಾಡುವಷ್ಟು ಕಾಟ ನೊಣಗಳು ನೀಡುತ್ತಿವೆ.

ಏನು ಮಾಡೋಕೂ ಬಿಡದ ನೊಣಗಳು:

ದಿನದ ಇಪ್ಪತ್ನಾಲ್ಕು ತಾಸೂ ಎಲ್ಲೆಂದರಲ್ಲಿ ಗುಯ್‌ಗುಟ್ಟುವ ನೊಣಗಳಿಂದಾಗಿ ಇಲ್ಲಿಯ ಜನರ ಸಹಜ ಬದುಕು ಅಕ್ಷರಶಃ ನರಕವಾಗಿದೆ. ಜನ ಬಾಯಿ ತೆರೆದು ನೆಮ್ಮದಿಯಾಗಿ ಆಕಳಿಸುವಂತೆಯೂ ಇಲ್ಲ, ನಗುವಂತೆಯೂ ಇಲ್ಲ. ಕಣ್ಣು ಮುಚ್ಚಿ ನಿದ್ರಿಸುವಂತಿಲ್ಲ, ಕಣ್ಣುಬಿಟ್ಟುಕೊಂಡು ಸುಮ್ಮನೆ ಇರಲೂ ಆಗುತ್ತಿಲ್ಲ. ನೀರು ಕುಡಿಯುವ ತಂದೆ, ತಿನ್ನುವ ಆಹಾರ, ತಿನಿಸುಗಳ ಮೇಲೆಲ್ಲಾ ನೊಣಗಳ ಕಾರುಬಾರು. ಈಗಾಗಿಯೇ ಇಲ್ಲಿನ ಜನತೆಯಲ್ಲೀಗ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.

ಕೋಳಿ ಮಾಲೀಕರಿಂದ ದೌರ್ಜನ್ಯ:

ನೊಣಗಳ ಬಗ್ಗೆ ಯಾರಾದರೂ ಧ್ವನಿ ಎತ್ತಿದರೆ ಅಂತಹವರಿಗೆ ಬೆದರಿಕೆ ಹಾಕುವ, ಸ್ಥಳೀಯರಿಂದಲೇ ಜಗಳ ಮಾಡಿಸುವ, ಅಧಿಕಾರ ಶಾಹಿಗಳಿಂದಲೇ ಆವಾಜ್‌ ಹಾಕಿಸುವಷ್ಟರ ಮಟ್ಟಿಗೆ ಇಲ್ಲಿಯ ಕೋಳಿ ಫಾರಂಗಳ ಮಾಲೀಕರು ಕೊಬ್ಬಿದ್ದಾರೆ. ಅವರೆಲ್ಲ ದೂರದ ದೊಡ್ಡ ಊರಿನಲ್ಲಿ ನೆಮ್ಮದಿಯಾಗಿರುವುದು ವಿಶೇಷ. ಹಲವಾರು ಎಕರೆ ಪ್ರದೇಶದಲ್ಲಿ ಕೋಳಿ ಫಾರಂ ಮಾಡಿ, ಲಕ್ಷಾಂತರ ಕೋಳಿ ಸಾಕಿದ್ದಾರೆ. ಕೋಳಿ ಫಾರಂಗಳಲ್ಲಿ ಸೂಕ್ತ ಸ್ವಚ್ಛತೆ ಕಾಪಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ನೊಣಗಳ ಸಾಮ್ರಾಜ್ಯ ಸೃಷ್ಟಿಯಾಗಲು ಪ್ರಧಾನ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಅಡಕೆ ತೋಟಗಳಿಗೆ ಕೋಳಿ ತ್ಯಾಜ್ಯ ಉತ್ತಮ ಗೊಬ್ಬರವೆಂದು ನಿರಂತರ ನಿರ್ವಹಣೆ ಮಾಡದೇ ಬಿಡಲಾಗುತ್ತಿದೆ. ಇದರಿಂದ ತ್ಯಾಜ್ಯದಲ್ಲಿ ಮಳೆ ನೀರು ಸೇರಿ, ನೊಣಗಳ ಉತ್ಪತ್ತಿಗೆ ತಾಣವಾಗುತ್ತಿದೆ. ಕೋಳಿ ಫಾರಂ ಮಾಲೀಕರ ಧನದಾಹದಿಂದ ಹೆಬ್ಬಾಳ್ ಸುತ್ತಲಿನ ಗ್ರಾಮಸ್ಥರ ನೆಮ್ಮದಿಗೆ ಕೊಳ್ಳಿಯಿಟ್ಟಂತಾಗಿದೆ. ಒಂದುವೇಳೆ ಕೋಳಿ ಫಾರಂ ಮಾಲೀಕರು, ಅಧಿಕಾರಿಗಳು, ಜನ ಪ್ರತಿನಿಧಿಗಳು ನಾಲ್ಕೈದು ದಿನ ಹಳ್ಳಿಯಲ್ಲೇ ಬಂದು, ನಮ್ಮಂತೆಯೇ ಜೀವನ ಮಾಡಿದರೆ ನಮ್ಮ ಸಂಕಷ್ಟ ಏನೆಂಬುದು ಗೊತ್ತಾಗುತ್ತದೆ ಎಂದು ಹೆಬ್ಬಾಳ್‌ ವ್ಯಾಪ್ತಿ ಜನ ಕಿಡಿಕಾರುತ್ತಿದ್ದಾರೆ.

ನೆಮ್ಮದಿ ನೆಲೆಸಿದ್ದ ಹೆಬ್ಬಾಳ್ ಸುತ್ತಮುತ್ತಲಿನ ಗ್ರಾಮಗಳ ಜನರ, ಜಾನುವಾರುಗಳ ಬದುಕು ಈಗ ನೊಣಗಳಿಂದಾಗಿ ಅತಂತ್ರವಾಗಿದೆ. ಹೆಬ್ಬಾಳ್‌, ಹೆಬ್ಬಾಳ್ ಹೊಸ ಬಡಾವಣೆ, ಹಾಲುವರ್ತಿ ಗ್ರಾಮದ ಸ್ವಲ್ಪ ಭಾಗ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಗಡಿ, ಹೋಟೆಲ್‌, ಮನೆ, ಫಾರಂ ಹೌಸ್‌ ಹೀಗೆ ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲ ಹಿಂಡು ಹಿಂದು, ಗೊಂಚಲು ಗೊಂಚಲು ನೊಣಗಳು ಕಣ್ಣಿಗೆ ರಾಚುತ್ತ, ಮನಸಿಗೆ ಅಸಹ್ಯ ತರುತ್ತಿವೆ.

- - -

ಕೋಟ್‌ ಸುಮಾರು 650-700 ಮನೆಗಳು, 2,700ಕ್ಕೂ ಹೆಚ್ಚು ಜನಸಂಖ್ಯೆಯ ಹೆಬ್ಬಾಳ್ ಗ್ರಾಮಕ್ಕೆ ನಿತ್ಯವೂ ಸುತ್ತಮುತ್ತಲಿನ ಗ್ರಾಮಗಳಿಂದ 600ಕ್ಕೂ ಹೆಚ್ಚು ಮಕ್ಕಳು ಶಾಲಾ-ಕಾಲೇಜಿಗೆ ಬರುತ್ತಾರೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಖಾಸಗಿ ಶಾಲೆಗಳು ಇಲ್ಲಿವೆ. ಮನೆ, ಅಂಗಡಿ, ಚಹಾದ ಅಂಗಡಿ, ಬೇಕರಿ, ದೇವಸ್ಥಾನ, ಮಠ, ಗುಡಿಸಲು, ಹೆಂಚಿನ ಮನೆ, ಆರ್‌ಸಿಸಿ ಮನೆ, ಮಹಡಿ ಯಾವುದನ್ನೂ ಬಿಡದೇ ನೊಣಗಳು ಆಪೋಷನ ತೆಗೆದುಕೊಂಡಿವೆ

- ಹೆಬ್ಬಾಳ ಗ್ರಾಮಸ್ಥರು

- - - -(ಫೋಟೋ ಬರಲಿವೆ):