ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ ವಿರುದ್ಧ ಮೊಳಗಿದ ರಣಕಹಳೆ

| N/A | Published : May 18 2025, 02:05 AM IST / Updated: May 18 2025, 01:21 PM IST

ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ ವಿರುದ್ಧ ಮೊಳಗಿದ ರಣಕಹಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ ವಿರುದ್ಧ ಶನಿವಾರ ನಗರದಲ್ಲಿ ಸಾಹಿತಿಗಳು ಮತ್ತು ಹೋರಾಟಗಾರರು ರಣಕಹಳೆ ಮೊಳಗಿಸಿದರು. ಸರ್ವಾಧಿಕಾರಿ ಆಡಳಿತವನ್ನು ಕೊನೆಗಾಣಿಸ ಆಡಳಿತಾಧಿಕಾರಿಯನ್ನು ನೇಮಿಸುವಂತೆ ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದರು.

  ಮಂಡ್ಯ : ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ ವಿರುದ್ಧ ಶನಿವಾರ ನಗರದಲ್ಲಿ ಸಾಹಿತಿಗಳು ಮತ್ತು ಹೋರಾಟಗಾರರು ರಣಕಹಳೆ ಮೊಳಗಿಸಿದರು. ಸರ್ವಾಧಿಕಾರಿ ಆಡಳಿತವನ್ನು ಕೊನೆಗಾಣಿಸ ಆಡಳಿತಾಧಿಕಾರಿಯನ್ನು ನೇಮಿಸುವಂತೆ ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದರು.

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭದಿಂದಲೂ ಅಧ್ಯಕ್ಷರು, ಸಮ್ಮೇಳನ ಸಂಚಾಲಕಿ ಹಾಗೂ ಕಸಾಪ ಸದಸ್ಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಸಮ್ಮೇಳನ ಮುಗಿದ ನಂತರ ಡಾ.ಮಹೇಶ್ ಜೋಶಿ ವಿರುದ್ಧದ ಭಿನ್ನಮತ ಸ್ಫೋಟಗೊಂಡಿತ್ತು. ಇದೀಗ ಬಹಿರಂಗ ಹೋರಾಟದ ಸ್ವರೂಪ ಪಡೆದುಕೊಂಡಿದೆ.

ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಕಸಾಪದಲ್ಲಿ ಎಲ್ಲಾ ಅಧಿಕಾರವನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಜಿಲ್ಲಾ ಸಮಿತಿಗಳಿಗಿದ್ದ ಅಧಿಕಾರವನ್ನೆಲ್ಲಾ ಕಸಿದುಕೊಳ್ಳುತ್ತಿದ್ದಾರೆ. ಸಮ್ಮೇಳನದ ಲೆಕ್ಕ-ಪತ್ರವನ್ನೆಲ್ಲಾ ತಮಗೇ ಸಲ್ಲಿಸಬೇಕೆಂಬ ದುರಹಂಕಾರದ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಜೋಶಿ ಆಡಳಿತದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಸ್ತಿತ್ವಕ್ಕೆ ಅಪಾಯ ಎದುರಾಗಿರುವುದರಿಂದ ಕೂಡಲೇ ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬೇಕು. ಅವರ ಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಬೇಕೆಂಬ ಒಕ್ಕೊರಲ ತೀರ್ಮಾನವನ್ನು ಹಿರಿಯ ಸಾಹಿತಿಗಳು ಹಾಗೂ ಹೋರಾಟಗಾರರು ತೆಗೆದುಕೊಂಡರು.

ಪರಿಷತ್ತಿನ ಉಳಿವಿಗೆ ಜಾಗೃತಿ ಸಮಾವೇಶ:

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಶನಿವಾರ ನಡೆದ ಜಾಗೃತಿ ಸಮಾವೇಶದಲ್ಲಿ ಮಹೇಶ್ ಜೋಶಿ ವಿರುದ್ಧ ಹರಿಹಾಯ್ದ ಹಿರಿಯ ಸಾಹಿತಿಗಳು ಕನ್ನಡ ನೆಲ-ಭಾಷೆ ಉಳಿವಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸುವ ಉದ್ದೇಶದಿಂದ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆಯೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಮಹೇಶ್ ಜೋಶಿ ಅವರ ಸರ್ವಾಧಿಕಾರಿ ಧೋರಣೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ದುರ್ಗತಿ ಬಂದಿದೆ. ಅಧಿಕಾರಿಯಾಗಿದ್ದ ಇವರು ಅಧಿಕಾರಶಾಹಿ ಧೋರಣೆ ಅನುಸರಿಸುತ್ತಿದ್ದಾರೆಯೇ ಹೊರತು, ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲದ ಬಗ್ಗೆ ಇವರಿಗೆ ಯಾವುದೇ ಜ್ಞಾನವಿಲ್ಲ. ದೂರದರ್ಶನದಲ್ಲಿ ಅಧಿಕಾರಿಯಾಗಿದ್ದ ಸಂದರ್ಭ ನಡೆಸಿದ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದೂವರೆ ಲಕ್ಷ ದಂಡ ವಿಧಿಸಿದೆ. ಇಂತಹವರಿಂದ ಕನ್ನಡ ಸಾಹಿತ್ಯ ಪರಿಷತ್ ಉಳಿಯಲಿದೆಯೇ ಎಂಬಿತ್ಯಾದಿ ಆರೋಪಗಳ ಸುರಿಮಳೇಗಳೇ ಕೇಳಿಬಂದವು.

ಮಂಡ್ಯ ಚಳವಳಿ ಇಂಡಿಯಾಕ್ಕೆ ಮುಟ್ಟಬೇಕು:

ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಜಾತ್ಯತೀತ ಪರಿಕಲ್ಪನೆಯಲ್ಲಿ ಬೆಳೆದು ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದವರಿಗೆ ಸಹನೆ ಮತ್ತು ಮರೆಯುವಂತಹ ಪ್ರವೃತ್ತಿ ಹೊಂದಿರಬೇಕು. ಎಲ್ಲರನ್ನೂ ವಿಶ್ವಾಸದಿಂದ ಕೊಂಡೊಯ್ಯುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು. ಆದರೆ, ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನಗಳನ್ನು ಅದ್ಧೂರಿಯಾಗಿ ಮಾಡುವ ಅಗತ್ಯವಿಲ್ಲ. ಇದರಿಂದ ಬೇರೆ ಕಾರ್ಯಕ್ರಮಗಳನ್ನು ಹತ್ತಿಕ್ಕುವಂತಾಗುತ್ತದೆ. ಮೂಲವಾಗಿ ಘಟಕಾಂಶಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸದಾ ಒಂದಿಲ್ಲೊಂದು ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದ ರಾಷ್ಟ್ರಕವಿ ಕುವೆಂಪು ಅವರ ಜಿಲ್ಲೆ ಶಿವಮೊಗ್ಗದ ಅಧ್ಯಕ್ಷರನ್ನು ಅಮಾನತ್ತು ಮಾಡಿರುವುದು ಬೇಸರ ಮೂಡಿಸಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಆಯ್ಕೆಯಾಗಿ ಬಂದವರು. ಎಲ್ಲರನ್ನೂ ಸಂಘಟಿಸಿ ಚಳವಳಿಯೊಳಗೆ ತರುವ ಪ್ರಯತ್ನ ಮಾಡಬೇಕು. ಮಂಡ್ಯದಲ್ಲಿ ಆರಂಭವಾದ ಚಳವಳಿ ಇಂಡಿಯಾಕ್ಕೆ ಮುಟ್ಟುವಂತಾಗಬೇಕು ಎಂದರು.

ಕೂಡು ಸಂಸ್ಕೃತಿಯಿಂದ ಏಕಸಂಸ್ಕೃತಿ ಕಡೆ:

ಹೋರಾಟಗಾರರಾದ ವಿಮಲಾ ಮಾತನಾಡಿ, ಕೂಡು ಸಂಸ್ಕೃತಿಯುಳ್ಳ ಸಾಹಿತ್ಯ ಪರಿಷತ್ತನ್ನು ಏಕ ಸಂಸ್ಕೃತಿಯನ್ನಾಗಿ ಮಾಡಲು ಹೊರಟಿರುವ ಮಹೇಶ್ ಜೋಶಿಯವರನ್ನು ಅನುಸರಿಸದೆ ಅವರ ಗುಲಾಮಗಿರಿಯಿಂದ ಹೊರ ಬಂದು ತಮ್ಮದೇ ಆದ ಚಟುವಟಿಕೆಗಳನ್ನು ಕೊಡುವ ಮೂಲಕ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಜಿಲ್ಲಾಧ್ಯಕ್ಷರಿಗೆ ಕರೆ ನೀಡಿದರು.

ಪಂಪ, ಕುವೆಂಪುರವರ ಪರಂಪರೆಯನ್ನು ಮುಂದುವರಿಸಬೇಕಾದರೆ ಏಕಸಂಸ್ಕೃತಿಯನ್ನು ಬಿಟ್ಟು ಆರ್‌ಎಸ್‌ಎಸ್‌ಗೆ ಹೋಗಿಬಂದು ಸಲಾಂ ಹೊಡೆದು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವತಂತ್ರ ಚಟುವಟಿಕೆಗೆ ಕುತ್ತು ಬರುವ ನಿಟ್ಟಿನಲ್ಲಿ ಏಕಸಂಸ್ಕೃತಿಯನ್ನಾಗಿ ಮಾಡಲು ಹೊರಟಿದ್ದನ್ನೂ ಖಂಡಿಸಿ, ಸಂಸ್ಕೃತಿಯ ಸಾಕ್ಷಿಪ್ರಜ್ಞೆಯನ್ನು ಉಳಿಸುವಂತಹ ಕೆಲಸ ಮಾಡಬೇಕು. ಶ್ರಮ ಸಂಸ್ಕೃತಿಯನ್ನು ಮೆಚ್ಚಿ ಬೆಳೆಸುವುದರ ಕಡೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕನ್ನಡ ಮನಸ್ಸುಗಳಿಗೆ ಜಾಗೃತಿ:

ನಿವೃತ್ತ ಜಿಲ್ಲಾಧಿಕಾರಿ ರುದ್ರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಜಾಗೃತಿ ಮೂಡಿಸಬೇಕು. ಎಲ್ಲರನ್ನೂ ಒಗ್ಗೂಡಿಸಿ ಹಿಂದೆ ಅವರು ಕೆಲಸ ಮಾಡಿದ್ದ ಹುದ್ದೆಗಳಲ್ಲಿ ದುರ್ವತನೆಯಿಂದ ಕೆಲಸ ಮಾಡಿದ್ದರೋ ಅದನ್ನೂ ತೆಗೆದು ಸಾರ್ವಜನಿಕರಿಗೆ ತೋರಿಸುವ ಕೆಲಸ ಮಾಡಬೇಕು ಎಂದರು.

ಇದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ತೊರೆಯುವಂತೆ ಮಾಡಬೇಕು. ಅಂತಹ ಕಾರ್ಯಕ್ಕೆ ಮಂಡ್ಯದಲ್ಲಿ ಚಾಲನೆ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ ಎಂದರು.

ತಾತ್ಸಾರ ಮನೋಭಾವ ಏಕೆ?:

ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಪುಷ್ಪ ಮಾತನಾಡಿ, ಸಂಘ ಸಂಸ್ಥೆಗಳು ಎಂದಾಗ ಅದಕ್ಕೊಂದು ಬೈಲಾ ಇರುತ್ತೆ, ಲೆಕ್ಕಪತ್ರ ಕೊಡಬೇಕಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮಹೇಶ್ ಜೋಶಿ ಅವರಿಗೆ ಈ ಬಗ್ಗೆ ತಾತ್ಸಾರ ಮನೋಭಾವ ಏಕೆ?, ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ಹೊತ್ತುಕೊಂಡಿದ್ದ ಮಹಿಳೆಯನ್ನು ಕಾರ್ಯಕಾರಿ ಸಮಿತಿ ಸಭೆಯಿಂದ ಹೊರಗೆ ಕಳುಹಿಸುವಂತಹ ಪ್ರಮೇಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಕಸಾಪ ಅಧ್ಯಕ್ಷರಾದವರು ರಾಜಕಾರಣಿಯಾಗಬೇಕಾ, ಸಾಹಿತಿಯಾಗಿರಬೇಕಾ ಎಂಬ ಪ್ರಶ್ನೆಗಳ ನಡುವೆ ಸಾಹಿತ್ಯೇತರರು ಸಹ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾಹಿತಿಗಳು, ಲೇಖಕರು ಅಧ್ಯಕ್ಷರನ್ನು ಕಾಣಲು ಹೋದರೆ ಅನುಮತಿ ಪಡೆದು ಬರಬೇಕೆಂದು ಹೇಳುವ ಅಧ್ಯಕ್ಷರಿಂದ ಸಾಹಿತ್ಯಿಕ ಚಟುವಟಿಕೆಗಳು ನಡೆಸಲು ಸಾಧ್ಯವೇ, ಹೋಗಲಿ ಇವರ ಅವಧಿಯಲ್ಲಿ ಬರಪೂರ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿವೆಯೇ?, ಎಲ್ಲವನ್ನೂ ಪರಾಮರ್ಶಿಸಿ ಇಂತಹ ಅಧ್ಯಕ್ಷರು ನಮಗೆ ಬೇಕೇ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಹಿರಿಯ ಸಾಹಿತಿ ಡಾ.ರಾಗೌ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಮೀರಾ ಶಿವಲಿಂಗಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, ಎಲ್.ಸಂದೇಶ್, ಕಾರಸವಾಡಿ ಮಹದೇವು, ಟಿ.ಯಶ್ವಂತ್, ಸಿ.ಕುಮಾರಿ ಸೇರಿದಂತೆ ಇತರರಿದ್ದರು.

ಮಾನ-ಮರ್ಯಾದೆ ಇದ್ದರೆ ಅಧಿಕಾರ ತ್ಯಜಿಸಲಿ

ಸರ್ಕಾರ ಮಹೇಶ್ ಜೋಶಿಗೆ ನೀಡಿರುವ ಸಚಿವ ಸ್ಥಾನಮಾನವನ್ನು ವಾಪಸ್ ಪಡೆದರೆ ಆತನಿಗಿರುವ ಅರ್ಧ ದುರಹಂಕಾರ ಕಡಿಮೆಯಾಗುತ್ತದೆ. ದುರಹಂಕಾರದಿಂದಾಗಿ ತಾನು ಏನು ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವೂ ಜೋಶಿಗೆ ಇಲ್ಲವಾಗಿದೆ. ಎಲ್ಲ ಜಿಲ್ಲೆಯ ಕಸಾಪ ಅಧ್ಯಕ್ಷರು ತನ್ನ ಪರ ಇರಬೇಕು. ಇಲ್ಲದಿದ್ದರೆ ವಜಾ ಮಾಡುತ್ತೇನೆ ಎಂದು ಹೆದರಿಸಿಟ್ಟುಕೊಂಡಿದ್ದಾನೆ. ಸಮ್ಮೇಳನ ಮುಗಿದು 5 ತಿಂಗಳಾದರೂ ಲೆಕ್ಕ ಕೊಟ್ಟಿಲ್ಲ, ಲೆಕ್ಕ ಕೊಡದ ಈತ ಒಂದು ಕ್ಷಣವು ಅಧ್ಯಕ್ಷ ಸ್ಥಾನದಲ್ಲಿರಲು ಅರ್ಹತೆ ಹಾಗೂ ಯಾವುದೇ ಘನತೆ ಇಲ್ಲ. ಈತನನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಗೆಲ್ಲಿಸಿದ್ದು ದುರಂತ. ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ ಈತ ಮಾನ-ಮರ್ಯಾದೆ ಇದ್ದಿದ್ದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು.

- ಜಾಣಗೆರೆ ವೆಂಕಟರಾಮಯ್ಯ, ಹಿರಿಯ ಸಾಹಿತಿ

ಆಮರಣಾಂತ ಉಪವಾಸದಿಂದ ನ್ಯಾಯ

ಮಹೇಶ್ ಜೋಶಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ, ಅವರನ್ನು ತೆಗೆದುಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದರೂ ಏನೂ ಕ್ರಮಕೈಗೊಂಡಿಲ್ಲ. ಇನ್ನೊಂದು ವಾರದಲ್ಲಿ ಜೋಶಿ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಕೂರುತ್ತೇವೆ ಎಂದು ಎಚ್ಚರಿಕೆ ಕೊಡಿ. ಇದಕ್ಕೂ ಬಗ್ಗದೇ ಹೋದರೆ ಆಮರಣಾಂತ ಉಪವಾಸ ಕೂರಿ. ಆಗ ಸರ್ಕಾರದ ಕಣ್ಣು ತೆರೆಯುತ್ತದೆ. ಜನರ ಪರವಾಗಿ ನಾನೂ ಸಹ ಆಮರಣಾಂತ ಉಪವಾಸ ಕೂರುತ್ತೇನೆ. ಇದು ಕಸಾಪ ಉಳಿಸಲು ಒಂದು ಛಾಲೆಂಜ್ ಆಗಿದೆ.

- ನಂಜರಾಜೇ ಅರಸ್, ಇತಿಹಾಸ ತಜ್ಞ

ದುಷ್ಟತನ, ಸ್ವಾರ್ಥಕ್ಕೆ ತಿದ್ದುಪಡಿ

ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ನಾಲ್ವಡಿ ಅವರು ಅರಮನೆ ತಮಟೆಯಾಗಿ, ವೇದಿಕೆಯಾಗಿ, ಭಟ್ಟಂಗಿತನವಾಗಿ ಪರಿಷತ್ತನ್ನು ಎಂದಿಗೂ ಬಳಸಿಕೊಳ್ಳಲಿಲ್ಲ. ಕನ್ನಡ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಳಸಿದರು. ನಾಲ್ವಡಿಯವರಿಗೆ ಅಪಮಾನ ಉಂಟುಮಾಡುವ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಪರಿಷತ್ತನ್ನು ನಡೆಸಿಕೊಳ್ಳಲಾಗುತ್ತಿದೆ. ಸಂವಿಧಾನ ತಿದ್ದುಪಡಿಗೂ ಕಸಾಪ ಬೈಲಾ ತಿದ್ದುಪಡಿಗೂ ಸಂಬಂಧವಿಲ್ಲ. ಸಂವಿಧಾನ ಜನಹಿತಕ್ಕಾಗಿ ತಿದ್ದುಪಡಿಗಳಾಗಿವೆ. ಕಸಾಪ ತಿದ್ದುಪಡಿ ಜೋಶಿ ತಮ್ಮ ದುಷ್ಟತನ, ಸ್ವಾರ್ಥಕ್ಕೆ ತಿದ್ದುಪಡಿ ಮಾಡುತ್ತಿದ್ದಾರೆ. ವಿಕೇಂದ್ರೀಕರಣದಿಂದ ಕೇಂದ್ರೀಕರಣದತ್ತ ತರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ.

- ಪ್ರೊ.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ನಿರ್ಣಯಗಳು ಯಾವುವು?

೧. ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರನ್ನು ತತ್ ಕ್ಷಣ ಆಧ್ಯಕ್ಷಗಾದಿಯಿಂದ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ, ಆಗಿರುವ ಅಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

೨. ಮಹೇಶ್ ಸೋತಿ ಅವರ ಅಧಿಕಾರಾವಧಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಗಳನ್ನು ತತ್‌ಕ್ಷಣ ರದ್ದುಗೊಳಿಸುವುದು.

೩. ಮಂಡ್ಯ ಜಿಲ್ಲೆಯಲ್ಲಿ ಏನುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ನೇಮಕಗೊಂಡಿದ್ದ ಡಾ.ಮೀರಾಶಿವಲಿಂಗಯ್ಯ ಅವರಿಗೆ ವೇದಿಕೆಯಲ್ಲಿ ಮಾಡಿದ್ದ ಅವಮಾನಕ್ಕಾಗಿ ಮಹೇಶ್ ಜೋಶಿ ಅವರು ರಾಜ್ಯದ ಹೆಣ್ಣು ಮಕ್ಕಳ ಕ್ಷಮೆಯಾಚಿಸಬೇಕು.

೪. ಮಂಡ್ಯದಲ್ಲಿ ಜರುಗಿದ 37 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಹಗಲಿರುಳಿನ್ನದೆ ಕ್ರಮಿಸಿದ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಿಗೆ, ಅಕಾರಿಗಳಿಗೆ, ಮಂಡ್ಯ ಜನತೆಗೆ ಕನಿಷ್ಠಪಕ್ಷ ಧನ್ಯವಾದಗಳನ್ನು ತಿಳಿಸಿದ ಆಗೌರವ ತೋರಿರುವ ಮಹೇಶ್ ಜೋಶಿ ಅವರ ನಡೆಯನ್ನು ಖಂಡಿಸಲು ಸಭೆಯು ನಿರ್ಣಯಿಸಿತು.

Read more Articles on