ಆನಿಕೆರೆಗೆ ಬಂತು ಧರ್ಮಾ ಜಲಾಶಯದ ನೀರು

| Published : Mar 23 2024, 01:03 AM IST

ಸಾರಾಂಶ

ಹಾನಗಲ್ಲ ಕುಡಿಯುವ ನೀರಿನ ಬವಣೆ ನೀಗಿಸಲು ಬಂತು ಧರ್ಮಾ ಜಲಾಶಯದ ನೀರು. ಇನ್ನೆರಡು ತಿಂಗಳು ಪಟ್ಟಣಕ್ಕೆ ನೀರಿನ ಕೊರತೆ ಇಲ್ಲ. ಹಿತ ಮಿತ ನೀರು ಬಳಕೆ ಮೂಲಕ ಜೀವ ಜಲ ರಕ್ಷಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹಾನಗಲ್ಲ ಕುಡಿಯುವ ನೀರಿನ ಬವಣೆ ನೀಗಿಸಲು ಬಂತು ಧರ್ಮಾ ಜಲಾಶಯದ ನೀರು. ಇನ್ನೆರಡು ತಿಂಗಳು ಪಟ್ಟಣಕ್ಕೆ ನೀರಿನ ಕೊರತೆ ಇಲ್ಲ. ಹಿತ ಮಿತ ನೀರು ಬಳಕೆ ಮೂಲಕ ಜೀವ ಜಲ ರಕ್ಷಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ.

ಶುಕ್ರವಾರ ಹಾನಗಲ್ಲ ಕುಡಿಯುವ ನೀರಿನ ಸಂಗ್ರಹಾಗಾರವೇ ಆಗಿರುವ ಆನಿಕೆರೆಗೆ ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯದ ನೀರನ್ನು ತರಲಾಗಿದೆ. ೨೩ ಕಿಮೀ ದೂರದಿಂದ ಧರ್ಮಾ ಜಲಾಶಯದ ನೀರು ಧರ್ಮಾ ನದಿಯ ಮೂಲಕ ಹರಿದು ಬಂದು, ಹಾನಗಲ್ಲ ಪಕ್ಕದಲ್ಲಿ ನಿರ್ಮಿಸಿರುವ ಧರ್ಮಾ ನದಿಯ ಬಾಂದಾರದಿಂದ ಹಾನಗಲ್ಲ ಪಕ್ಕದ ಆನಿಕೆರೆಗೆ ಪಂಪ್ ಮೂಲಕ ಎತ್ತಲಾಗುತ್ತಿದೆ. ಆನಿಕೆರೆ ತುಂಬಲು ೧೯೦೦ ಮಿಲಿಯನ್ ಲೀಟರ್ಸ್ ನೀರು ಬೇಕು. ಆದರೆ ಅಷ್ಟು ನೀರು ತುಂಬಲು ಸಾಧ್ಯವಿಲ್ಲ. ಆನಿಕೆರೆಯ ಅರ್ಧ ಭಾಗದಷ್ಟು ನೀರನ್ನು ಮಾತ್ರ ಈಗ ತುಂಬಲಾಗುತ್ತಿದೆ. ಇದಕ್ಕೆ ೨೦ ದಿನ ಬೇಕಾಗಬಹುದು. ಈಗ ಧರ್ಮಾ ನದಿಯಲ್ಲಿ ೧೭ ಅಡಿ ನೀರಿದೆ. ಇದರಲ್ಲಿ ಹಾನಗಲ್ಲಿನ ಕುಡಿಯುವ ನೀರಿಗಾಗಿ ೭ ಅಡಿಯಷ್ಟು ನೀರನ್ನು ಬಿಡಲಾಗುತ್ತದೆ. ಹೀಗೇ ಮಳೆ ಬೀಳದಿದ್ದರೆ ಏಪ್ರಿಲ್ ಅಂತ್ಯಕ್ಕೆ ಇನ್ನೊಮ್ಮೆ ನೀರು ಬಿಡಬಹುದು ಎನ್ನಲಾಗಿದೆ. ಧರ್ಮಾ ಜಲಾಶಯದ ನೀರು ಕೇವಲ ಹಾನಗಲ್ಲ ಪಟ್ಟಣದ ಕುಡಿಯುವ ನೀರಿಗೆ ಮಾತ್ರವಲ್ಲ, ಮುಂಡಗೋಡದ ಕೆಲವು ಗ್ರಾಮಗಳ ಕುಡಿಯುವ ನೀರಿಗೂ ಸಹ ಬಳಸಲಾಗುತ್ತಿದೆ. ಆದರೆ ಬಹುಪಾಲು ಹಾನಗಲ್ಲ ಪಟ್ಟಣದ ಕುಡಿಯುವ ನೀರಿಗಾಗಿಯೇ ಕಾಯ್ದಿರಿಸಿದ ನೀರಾಗಿದೆ.

ಧರ್ಮಾ ಜಲಾಶಯದಿಂದ ಧರ್ಮಾ ನದಿಯ ಮೂಲಕ ೨೩ ಕಿಮೀಯಷ್ಟು ದೂರದಿಂದ ನೀರು ಹರಿದು ಬರುತ್ತಿರುವ ಸಂದರ್ಭದಲ್ಲಿ ಈ ನೀರನ್ನು ಯಾರೂ ಕೂಡ ಜಮೀನಿಗೆ ಯಾವುದೇ ರೀತಿ ಪಡೆಯುವಂತಿಲ್ಲ. ಇದಕ್ಕಾಗಿ ಪೊಲೀಸ್, ನೀರಾವರಿ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಯ ಕಾವಲಿದೆ. ಜಿಲ್ಲಾಧಿಕಾರಿಗಳ ಹಾಗೂ ಸವಣೂರು ಉಪವಿಭಾಗಾಧಿಕಾರಿಗಳ ಅದೇಶದಂತೆ ಇಂದು ನೀರು ಹರಿಸಲಾಗಿದೆ.

ಡಂಗುರ: ಹಾನಗಲ್ಲ ಪಟ್ಟಣದಲ್ಲಿ ಪುರಸಭೆ ಮೂಲಕ ಡಂಗುರವನ್ನೂ ಸಾರಿಸಲಾಗುತ್ತಿದ್ದು, ಹಿತ ಮಿತ ನೀರು ಬಳಸಿರಿ. ನಾಳೆಗಾಗಿ ನೀರಿನ್ನು ಉಳಿಸಿಕೊಳ್ಳೋಣ ಎಂಬ ಸಂದೇಶವನ್ನೂ ನೀಡಿಲಾಗುತ್ತಿದೆ. ಈಗ ಹಾನಗಲ್ಲ ಪಟ್ಟಣದಲ್ಲಿ ೪ ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದ್ದರಿಂದ ಮಳೆ ಆಗುವವರೆಗೆ ಸಾರ್ವಜನಿಕರು ಸ್ವಯಂ ಆಸಕ್ತಿ ಜವಾಬ್ದಾರಿಯಿಂದ ನೀರಿನ ಹಿತ ಮಿತ ಬಳಕೆ ಮಾಡುವುದು ಅನಿವಾರ್ಯ.

ಇಂತಹ ಬೇಸಿಗೆಯಲ್ಲಿ ಹಾನಗಲ್ಲಿಗೆ ಕುಡಿಯುವ ನೀರು ಒದಗಿಸುವ ಏಕೈಕ ಜಲ ಮೂಲ ಧರ್ಮಾ ಜಲಾಶಯ. ಅಲ್ಲಿರುವ ನೀರು ಹಾನಗಲ್ಲಗಾಗಿ ಕಾಯ್ದಿರಿಸಿದೆಯಾದರೂ ನೀರನ್ನು ಮಿತವಾಗಿ ಪೋಲಾಗದಂತೆ ಬಳಸುವ ಅಗತ್ಯವಿದೆ. ಇದಕ್ಕಾಗಿ ಡಂಗುರವನ್ನೂ ಸಾರಿಸಲಾಗುತ್ತಿದೆ. ಏಪ್ರಿಲ್ ಅಂತ್ಯದವರೆಗೆ ಈ ನೀರು ಪೂರೈಸಬಹುದು. ಮತ್ತೆ ಧರ್ಮಾ ಜಲಾಶಯದ ನೀರನ್ನೆ ಅವಲಂಬಿಸಬೇಕು. ಆ ನಂತರ ನಮಗೆ ನೀರೇ ಇಲ್ಲ. ಕೊಳವೆಬಾವಿಗಳ ನೀರು ತೀರ ಕಡಿಮೆ ಆಗಿದೆ. ನೀರು ಉಳಿಸಿ ಬಳಸೋಣ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.