ಪ್ರಿಯಕರರೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ!

| Published : Oct 27 2024, 02:24 AM IST

ಸಾರಾಂಶ

ಹೈದರಾಬಾದ್‌ನ ವ್ಯಕ್ತಿಯೋರ್ವರನ್ನು ಕೊಂದು ಕೊಡಗಿನಲ್ಲಿ ದೇಹ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹೈದರಾಬಾದ್‌ನ ವ್ಯಕ್ತಿಯೋರ್ವರನ್ನು ಕೊಂದು ಕೊಡಗಿನಲ್ಲಿ ದೇಹ ಸುಟ್ಟ ಘಟನೆಗೆ ಸಂಬಂಧಪಟ್ಟಂತೆ ಕೊಡಗು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತವ್ಯಕ್ತಿಯ ಎರಡನೇ ಪತ್ನಿ ಹಾಗೂ ಆಕೆಯ ಇಬ್ಬರು ಪ್ರಿಯಕರರೇ ಕೊಲೆ ಆರೋಪದಡಿ ಬಂಧಿತರಾದವರು.

ಪೊಲೀಸರ ತನಿಖೆಯಲ್ಲಿ ಹೈದರಾಬಾದ್ ನ ರಮೇಶ್ ಕುಮಾ‌ರ್ (54) ಮೃತ ದುರ್ದೈವಿ. ಕೊಲೆ ಆರೋಪಿಗಳಾದ ಮೃತ ರಮೇಶ್ ಕುಮಾರ್ ನ ಎರಡನೇ ಹೆಂಡತಿ, ತೆಲಂಗಾಣ ರಾಜ್ಯದ ಯಾದ್ರಾದಿ ಜಿಲ್ಲೆಯ, ಬೆಂಗಳೂರಿನಲ್ಲಿ ವಾಸವಿದ್ದ ನಿಹಾರಿಕಾ ಪಿ (29), ಹರಿಯಾಣ ರಾಜ್ಯದ ಕಾರ್ನಲ್ ಗರುಂದದ ಅಂಕೂ‌ರ್ ರಾಣ (28) ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಿಖಿಲ್ ಮೈರೆಡ್ಡಿ (28) ಎಂಬುವವರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾದ ಮರ್ಸಿಡಿಸ್ ಬೆನ್ಝ್‌ ಕಾರು ಹಾಗೂ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ, ಅ.8 ರಂದು ಸುಂಟಿಕೊಪ್ಪ ಪೊಲೀಸ್‌ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್‌ ಎಂಬವರ ಕಾಫಿ ತೋಟದಲ್ಲಿ ಅರ್ದಂಬರ್ಧ ಬೆಂದಿರುವ ಗಂಡಸಿನ ಶವವನ್ನು ಕಾಫಿ ತೋಟದ ಕೆಲಸಗಾರರು ನೋಡಿದ್ದು, ತೋಟದ ಮಾಲಿಕರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಅರ್ಧ ಸುಟ್ಟು ಕರಕಲಾಗಿರುವ ಮೃತದೇಹ ಯಾರೆಂಬುದು ಗೊತ್ತಿಲ್ಲದ ಕಾರಣ, ಪ್ರಕರಣದ ಪತ್ತೆ ಪೊಲೀಸರಿಗೆ ಸವಾಲಾಗಿತ್ತು ಎಂದು ಮಾಹಿತಿ ನೀಡಿದರು.

ತಂಡವು ತಾಂತ್ರಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿ ಸುಮಾರು 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಪರಿಶೀಲನೆ ಮುಖಾಂತರ ಸಂಚರಿಸಿದಂತ ವಾಹನಗಳ ಪರಿಶೀಲನೆ, ಮೊಬೈಲ್‌ ಕರೆಗಳ ಜಾಡನ್ನು ಹಿಡಿದು ಸತತ 10 ದಿನಗಳವರೆಗೆ ಮಾಹಿತಿ ಸಂಗ್ರಹಣೆ ಕಾರ್ಯಾಚರಣೆ ನಡೆಸಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಕೊನೆಯದಾಗಿ ಕೃತ್ಯಕ್ಕೆ ಬಳಸಿರಬಹುದಾದ ಸಂಶಯಾಸ್ಪದ ಕಾರಿನ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.

ಆರೋಪಿ ನಿಹಾರಿಕ ಮೃತ ರಮೇಶ್ ಕುಮಾರ್‌ನನ್ನು ವಿವಾಹವಾಗಿದ್ದರು. ನಿಹಾರಿಕಾಳು ಆಸ್ತಿ ಮಾರಾಟದಲ್ಲಿ 8 ಕೋಟಿ ರು. ಹಣ ಪಡೆಯುವ ಉದ್ದೇಶದಿಂದ, ನಿಹಾರಿಕಾಳ ಮತ್ತೊಬ್ಬ ಬಾಯ್ ಫ್ರೆಂಡ್ ಹರಿಯಾಣ ಮೂಲದ ಅಂಕು‌ರ್ ರಾಣ ಎಂಬಾತನನ್ನು ಅ. 1 ರಂದು ಹೈದರಾಬಾದ್ ಗೆ ಬರಲು ತಿಳಿಸಿದ್ದಳು. ಅ.3ರಂದು ನಿಹಾರಿಕಳು ರಮೇಶ್ ಕುಮಾರ್‌ನನ್ನು ಬರಲು ತಿಳಿಸಿ, ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ರಮೇಶ್ ಕುಮಾರ್‌ನ ಕಾರಿನಲ್ಲಿ ಹೊರಟು ಉಪ್ಪಲ್‌-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ.

ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ತನ್ನ ಬಾಯ್ ಫ್ರೆಂಡ್ ನಿಖಿಲ್ ಬಳಿ ಬಂದು ವಿಚಾರ ತಿಳಿಸಿ ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿ ಪನ್ನ ಎಸ್ಟೇಟ್ ಬಳಿ ತಂದು ಯಾರಿಗೂ ಗೊತ್ತಾಗದಂತೆ ಬೆಂಕಿ ಹಚ್ಚಿ ಕಾರಿನೊಂದಿಗೆ ತೆರಳಿದ್ದಾರೆಂದು ಘಟನೆಯ ಹಿನ್ನೆಲೆಯ ಬಗ್ಗೆ ಎಸ್ಪಿ ಮಾಹಿತಿ ನೀಡಿದರು. ಪ್ರಕರಣದಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಂಕು‌ರ್ ರಾಣ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಪೊಲೀಸರು ಹರಿದ್ವಾರಕ್ಕೆ ತೆರಳಿ ಮಿಂಚಿನ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.