ಸಾರಾಂಶ
ಎಕಂಬಾ ಕ್ರಾಸ್‌ನಿಂದ ತೋಳಾ ತಾಂಡಾದವರೆಗೆ ಸುಮಾರು 3 ಕಿಲೋಮೀಟರ್ ಕಾಲ್ನಡಿಗೆ ರಸ್ತೆ ಇದ್ದು, ಕರಕ್ಯಾಳ ಹಾಗೂ ಎಕಂಬಾ ಮಾರ್ಗವಾಗಿ ಎರಡು ರಸ್ತೆಗಳಿದ್ದರೂ ಸಹ ಪಕ್ಕಾ ರಸ್ತೆಗಳಿಲ್ಲದೇ ತಾಂಡಾ ನಿವಾಸಿಗರು ಪ್ರತಿದಿನವೂ ನರಕಯಾತನೆ ಅನುಭವಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಔರಾದ್
ಎಕಂಬಾ ಗ್ರಾಪಂ ವ್ಯಾಪ್ತಿಯ ಕರಕ್ಯಾಳ ಸಮೀಪದ ತೋಳಾ ತಾಂಡಾಕ್ಕೆ ಇನ್ನೂ ರಸ್ತೆ ಭಾಗ್ಯ ಒದಗಿ ಬಂದಿಲ್ಲ. ಪರಿಣಾಮ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.ಎಕಂಬಾ ಕ್ರಾಸ್‌ನಿಂದ ತೋಳಾ ತಾಂಡಾದವರೆಗೆ ಸುಮಾರು 3 ಕಿಲೋಮೀಟರ್ ಕಾಲ್ನಡಿಗೆ ರಸ್ತೆ ಇದ್ದು, ಕರಕ್ಯಾಳ ಹಾಗೂ ಎಕಂಬಾ ಮಾರ್ಗವಾಗಿ ಎರಡು ರಸ್ತೆಗಳಿದ್ದರೂ ಸಹ ಪಕ್ಕಾ ರಸ್ತೆಗಳಿಲ್ಲದೇ ತಾಂಡಾ ನಿವಾಸಿಗರು ಪ್ರತಿದಿನವೂ ನರಕಯಾತನೆ ಅನುಭವಿಸುವಂತಾಗಿದೆ.ಮಳೆಗಾಲದಲ್ಲಂತೂ ಈ ರಸ್ತೆಗಳಿಂದ ಹೋಗಲು ಸಾಧ್ಯವಿಲ್ಲ. ತಾಂಡಾದಿಂದ ನಿತ್ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸ್ತೆ ಮೂಲಕವೇ ಶಾಲಾ ಕಾಲೇಜಿಗೆ ಹೋಗುತ್ತಾರೆ. ತಾಂಡಾದ 6ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಹೆಜ್ಜೆ ಹೆಜ್ಜೆಗೂ ಆತಂಕ ಎದುರಿಸುತ್ತಿರುವುದು ಸರ್ವೆಸಾಮಾನ್ಯವಾಗಿದೆ.ದಾರಿಯುದ್ಧಕ್ಕೂ ಮುಳ್ಳುಕಂಟಿಗಳು ಬೆಳೆದು ನಿಂತಿದ್ದು, ಹಾವು ಚೇಳುಗಳು ಆವಾಸ ಸ್ಥಾನವಾಗಿರುವುದಲ್ಲದೆ, ಅವು ರಸ್ತೆ ಮೇಲೆಯೇ ಓಡಾಡುತ್ತವೆ. ಹಗಲು ಹೊತ್ತಿನಲ್ಲೂ ಇಲ್ಲಿ ಜನರು ಒಂಟಿಯಾಗಿ ತೆರಳಲು ಹೆದರುತ್ತಾರೆ. ಕಾಲ್ನಡಿಗೆ ರಸ್ತೆಯ ಎರಡು ಕಡೆಗಳಲ್ಲೂ ಜಾಲಿಮರಗಳು ಬೆಳೆದು ನಿಂತಿದ್ದು, ಕವಲುಗಳು ರಸ್ತೆಕಡೆ ವಾಲಿ ನಡೆದಾಡಲು ಸಹ ಮತ್ತಷ್ಟು ಇಕ್ಕಟ್ಟು ಉಂಟಾಗಿದೆ. ಇನ್ನು, ಎಕಂಬಾ ಗ್ರಾಮದ ಹೊರವಲಯದಲ್ಲಿನ ಕೆರೆಯ ದಡದಿಂದ ತಾಂಡಾಗೆ ಹೋಗಲು ಕಾಲ್ನಡಿಗೆ ರಸ್ತೆ ಇದ್ದು, ಮಳೆಗಾಲದಲ್ಲಿ ಅದು ಕೂಡ ಸಂಪೂರ್ಣ ಬಂದ್ ಆಗಿ ಬಿಡುತ್ತದೆ. ಆಸ್ಪತ್ರೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ತಾಲೂಕು ಕೇಂದ್ರ ಔರಾದ್ ತೆರಳಲು ಇಲ್ಲಿಯ ಜನರ ಸಮಸ್ಯೆ ಹೇಳತೀರದು. ಹಾಗೆಯೇ ರೈತರು ಹೊಲದಲ್ಲಿ ಬೆಳೆದ ದವಸ ಧಾನ್ಯಗಳನ್ನು ಮಾರುಕಟ್ಟೆಗೆ ಕಳುಹಿಸಲು ಇಲ್ಲಿನ್ನೂ ಕತ್ತೆಗಳನ್ನೇ ಅವಲಂಬಿಸಿದ್ದಾರೆ. ವಯಸ್ಸಾದ ಹಿರಿಯರು, ಗರ್ಭಿಣಿಯರು ಈ ರಸ್ತೆಯಿಂದ ನಡೆಯುವುದೇ ಕಷ್ಟಸಾಧ್ಯ ಎಂಬಂತಾಗಿ ಕೆಲವರು ಎಕಂಬಾ ಗ್ರಾಮದಲ್ಲಿ ಬಾಡಿಗೆ ಇರುವುದು ಸಹ ಕಂಡು ಬಂದಿದೆ.ದೇಶಕ್ಕೆ ಸ್ವಾತಂತ್ರ್ಯ ದೊರೆತು 7 ದಶಕಗಳೇ ಕಳೆದರೂ ತಾಂಡಾ ನಿವಾಸಿಗರಿಗೆ ಮಾತ್ರ ಇನ್ನೂ ಈ ಮೂಲಭೂತ ಸವಲತ್ತು ದೊರೆಯದೇ ಇರುವುದು ವಿಪರ್ಯಾಸ. ಆಧುನಿಕ ಯುಗದಲ್ಲಿಯೂ ಸಹ ಮೂಲ ಸೌಲಭ್ಯಗಳಿಂದ ವಂಚಿತರಾಗಿಯೇ ಜೀವನ ಸಾಗಿಸುತ್ತಿರುವ ಇವರ ಬದುಕು ಶೋಚನೀಯವಾಗಿದೆ. ನಮ್ಮ ತಾಂಡಾಗೆ ಶಾಶ್ವತ ರಸ್ತೆ ಸಂಪರ್ಕ ಕಲ್ಪಿಸಿ ನಮಗೂ ಬದುಕುವ ಹಕ್ಕು ನೀಡುವಂತೆ ತಾಂಡಾ ನಿವಾಸಿಗರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.ತೋಳಾ ತಾಂಡಾ ನಿವಾಸಿ ನಾಮದೇವ ಮಾತನಾಡಿ, ರೋಗಿಗಳು ಸೇರಿದಂತೆ ಮಕ್ಕಳು ಮಹಿಳೆಯರು ತಾಂಡಾದಿಂದ ಒಬ್ಬರೇ ಹೋಗಲು, ಬರಲು ಸಾಧ್ಯವಿಲ್ಲ. ಅವರಿಗಾಗಿ ಕುಟುಂಬದ ಒಬ್ಬ ವ್ಯಕ್ತಿ ಅವರೊಟ್ಟಿಗೆ ಇರಬೇಕು. ರಸ್ತೆಯೇ ಇಲ್ಲದೇ ಸುದೀರ್ಘ 70-80 ವರ್ಷಗಳಿಂದ ಬದುಕುತ್ತಿದ್ದೇವೆ. ತಾಂಡಾಗೆ ರಸ್ತೆ ಸಂಪರ್ಕ ಕಲ್ಪಿಸಲು ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ ಎಂದರು.ಎಕಂಬಾ ಪಿಡಿಒ ಗ್ರಾಪಂ ನಂದಕಿಶೋರ ಶಾಸ್ತ್ರಿ ಮಾತನಾಡಿ,ರಸ್ತೆ ನಿರ್ಮಾಣಣಕ್ಕೆ ಕೆಲ ರೈತರು ತಮ್ಮ ಭೂಮಿ ನೀಡುವುದಾಗಿ ಒಪ್ಪಿದ್ದಾರೆ. ಸದರಿ ರೈತರು ನೀಡುವ ಭೂಮಿ ಗ್ರಾಪಂ ಸುಪರ್ದಿಗೆ ಪಡೆದು ಮೇಲಾಧಿಕಾರಿಗಳ ನಿರ್ದೇಶನದಂತೆ ಶಾಶ್ವತ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.