ಜಾತ್ರೆಗಳಿಂದ ಮನಸ್ಸು ಕಟ್ಟುವ ಕೆಲಸ

| Published : Feb 06 2025, 11:47 PM IST

ಸಾರಾಂಶ

ದಾರ್ಶನಿಕರು, ಋಷಿಗಳು ಸಂಶೋಧನೆಯಲ್ಲಿ ಜಾಣನಾರು, ದಡ್ಡನಾರು ಎಂಬ ಚಿಂತನೆ ಮಾಡುತ್ತ ಬಂದಿರುವರು. ಜಾಣ ಮತ್ತು ದಡ್ಡನಾಗುವುದು ಹೊರಗಿನಿಂದ ಬರುವುದಲ್ಲ

ಗದಗ: ಮುರಿದ ಮೂಳೆಗಳನ್ನು ಕೂಡಿಸುವವರು ಬಹಳ ಜನರು ಇರುವರು. ಮುರಿದ ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಜಾತ್ರೆಗಳು, ಧರ್ಮಚಿಂತನ ಗೋಷ್ಠಿಗಳು ಮಾಡುವುದು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚನ್ನವೀರಶರಣರ ಮಠದಲ್ಲಿ ಶರಣರ 30ನೇ ಜಾತ್ರಾ ಮಹೋತ್ಸವ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಾರ್ಶನಿಕರು, ಋಷಿಗಳು ಸಂಶೋಧನೆಯಲ್ಲಿ ಜಾಣನಾರು, ದಡ್ಡನಾರು ಎಂಬ ಚಿಂತನೆ ಮಾಡುತ್ತ ಬಂದಿರುವರು. ಜಾಣ ಮತ್ತು ದಡ್ಡನಾಗುವುದು ಹೊರಗಿನಿಂದ ಬರುವುದಲ್ಲ, ಮನುಷ್ಯ ಯಾರು ತಮ್ಮ ಜೀವನದಲ್ಲಿ ಹಿಂದೆ ನಡೆದ ಕಹಿ ಘಟನೆಗಳನ್ನು ಮರೆತು ಮುಂದೆ ಆಗುವುದರ ಬಗ್ಗೆ ಭಯ ಪಡುವುದಿಲ್ಲವೋ ಅವರು ಜಾಣರು, ಮುತ್ಸದ್ದಿಗಳು ಎನ್ನಬಹುದು ದಾರ್ಶನಿಕರ ಅಭಿಪ್ರಾಯವಾಗಿದೆ ಎಂದರು.

ದೇಹ ಮಾತ್ರ ವರ್ತಮಾನದಲ್ಲಿರುತ್ತದೆ. ಮನಸ್ಸು ಭೂತ ಮತ್ತು ಭವಿಷ್ಯತ್ತಿನಲ್ಲಿ ವಿನಾಕಾರಣ ಚಿಂತಿಸುತ್ತ ಬದುಕುತ್ತದೆ. ಮನಸ್ಸಿನಲ್ಲಿ ವಿಷ ತುಂಬಿಕೊಂಡು ಜೀವನದಲ್ಲಿ ಘಟಿಸಿದ ಕಹಿ ಘಟನೆಯನ್ನು ತಲೆಯಲ್ಲಿಟ್ಟುಕೊಳ್ಳಬಾರದು. ಒಮ್ಮೆ ನಿಂದನೆ, ಅಪಮಾನ, ಸಾವು, ನೋವು, ಬರುವುದು ಸಹಜ, ಕಳೆದು ಹೋದುದರ ಬಗ್ಗೆ ಚಿಂತಿಸಬಾರದು. ಸತ್ತ ನಿನ್ನೆಗಾಗಿ ಬರಲಿರುವ ನಾಳೆಗಾಗಿ ಭಯಪಡುವುದಕ್ಕಿಂತ ಇಂದಿನ ಸುಂದರ ಕ್ಷಣವನ್ನು ಅನುಭವಿಸುವುದೇ ಜೀವನದ ಯಶಸ್ಸಿನ ಕೌಶಲ್ಯವಾಗಿದೆ ಎಂದರು.

ಕಾಯಕ ಮಾಡುವುದನ್ನು ರೂಢಿಸಿಕೊಂಡು ಪುಣ್ಯಕಾರ್ಯಗಳನ್ನು ಮಾಡಿದಾಗ ಪುನಃ ಫಲಶ್ರುತಿ ಪುಣ್ಯದ ಬುತ್ತಿಯಾಗಿಯೇ ಮರಳಿ ನಿಸರ್ಗ ನೀಡುವುದು. ಮನುಷ್ಯ ನೆಲದ ಕಾನೂನಿಂದ ತಪ್ಪಿಸಿಕೊಳ್ಳಬಹುದು. ಆದರೆ ನಿಸರ್ಗದ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಜಗತ್ತು ಪ್ರತಿಧ್ವನಿಯಾಗಿ ನೀನು ಏನು ಮಾಡುವೆಯೋ ಅದನ್ನೇ ಪುನಃ ನಿನಗೆ ನೀಡುತ್ತದೆ. ಇದು ಸೃಷ್ಟಿಯ ನಿಯಮ, ಕರ್ಮವನ್ನು ಮಾಡುತ್ತ ಕರ್ಮಯೋಗಿಯಾಗಿ ಜೀವನ ಸಾರ್ಥಕತೆ ಪಡೆಯಬೇಕು ಎಂದರು.

ನಿಸರ್ಗ ಪ್ರಾಣಿ ಮತ್ತು ಮನುಷ್ಯನಲ್ಲಿ ಕಣ್ಣು, ಮೂಗು, ಕಿವಿ, ಇಲ್ಲದವರನ್ನು ಸೃಷ್ಟಿಸಿದೆ. ಆದರೆ ಹೊಟ್ಟೆ ಇಲ್ಲದವರನ್ನು ಸೃಷ್ಟಿಸಿಲ್ಲ. ಎಲ್ಲರಿಗೂ ಹೊಟ್ಟೆ ಇದೆ. ಅಂದರೆ ಎಲ್ಲರೂ ದುಡಿದೇ ಉಣ್ಣಬೇಕು ಎಂಬುದು ಸೃಷ್ಟಿಯ ನಿಯಮವಾಗಿದೆ. ಕಾರಣ ಪುಣ್ಯಕರ್ಮಗಳನ್ನು ಮಾಡಿ ಪುಣ್ಯದ ಫಲ ಹೆಚ್ಚಿಸಿಕೊಳ್ಳಬೇಕು. ಮನಸ್ಸಿನಲ್ಲಿ ಸದ್ಗುಣ, ಸದ್ಭಾವನೆ ಬೆಳೆಸಿಕೊಳ್ಳುವುದು ಅವಶ್ಯವಿದೆ ಎಂದು ಹೇಳಿದರು.

ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮನುಷ್ಯ ಜ್ಞಾನ ಮತ್ತು ಅನ್ನಕ್ಕಾಗಿ ಬದುಕುತ್ತಿದ್ದಾನೆ. ಜ್ಞಾನವನ್ನು ಸಂಪಾದಿಸಿ ಧರ್ಮ ಮಾರ್ಗದಲ್ಲಿ ನಡೆದಾಗ ಉತ್ತಮ ನಡತೆವುಳ್ಳವನಾಗುತ್ತಾನೆ. ಅತಿಯಾದ ದುರಾಸೆಯನ್ನು ಹೊಂದಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಪ್ರೇಮದ ಕೊರತೆಯಿಂದ ಸಂಕುಚಿತ ಮನಸ್ಸು, ವಿಚಾರ ಹೊಂದಿ, ತೊಂದರೆ ಪಡುತ್ತಿದ್ದಾನೆ. ಆದರೆ ವಿಶಾಲ ಮನೋಭಾವ ಮತ್ತು ಪರಸ್ಪರ ಪ್ರೀತಿ ಬೆಳೆಸಿಕೊಂಡು ಉತ್ತಮ ಜೀವನ ನಿರ್ವಹಿಸಬೇಕು ಎಂದರು.

ಸಮ್ಮುಖ ವಹಿಸಿದ ಹೊಸಳ್ಳಿಯ ಬೂದೀಶ್ವರ ಮಠದ ಬೂದೀಶ್ವರ ಸ್ವಾಮಿಗಳು, ಶ್ರೀ ಶಿವಶಾಂತವೀರಶರಣರು ಮಾತನಾಡಿದರು. ಖಜ್ಜಿಡೋಣಿಯ ಶ್ರೀ ಕೃಷ್ಣಾನಂದ ಶಾಸ್ತ್ರೀಗಳು ಉಪದೇಶಾಮೃತ ನೀಡಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮಹಾರಾಷ್ಟ್ರದ ಅಣದೂರಿನ ನೀಲಕಂಠೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಸುಕ್ಷೇತ್ರ ಗುಡದೂರಿನ ನೀಲಕಂಠತಾತನವರು, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಯುವ ಧುರೀಣ ಉಮೇಶಗೌಡ ಪಾಟೀಲ ಇದ್ದರು.

ಗದುಗಿನ ದಿಯಾ ಪೀರಸಾಬ ಕೌತಾಳ ಹಾಗೂ ತಂಡದವರಿಂದ ಸಂಗೀತ ಸೇವೆ ಜರುಗಿತು. ಶಿವಲಿಂಗಶಾಸ್ತ್ರೀ ಸಿದ್ಧಾಪುರ ಸ್ವಾಗತಿಸಿದರು. ಬೆಂಗಳೂರು ಆಕಾಶವಾಣಿ ನಿರೂಪಕಿ ಸವಿತಾ ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಶಿವಶರಣೆಗೌಡ ಯರಡೋಣಿ ವಂದಿಸಿದರು.