ಯುವಕರು ನೆಲದ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಬೇಕು

| Published : Jan 14 2025, 01:02 AM IST

ಸಾರಾಂಶ

ಚಳ್ಳಕೆರೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವಕರ ದಿನಾಚರಣೆ ಕಾರ್ಯಕ್ರಮವನ್ನು ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ನೂರಾರು ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದಿಂದ ಕೂಡಿದೆ. ಯುವಜನಾಂಗ ಜಾಗೃತವಾದಲ್ಲಿ ಮಾತ್ರ ಈ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ. ಯುವಕರು ಈ ನೆಲದ ಸಂಸ್ಕೃತಿ, ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ ಹೇಳಿದರು.

ಸೋಮವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾಲೇಜು ಶಿಕ್ಷಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವಜನಾಂಗ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ, ಯಾವುದೇ ಕೆಲಸ ಕಾರ್ಯವಾದರೂ ಮಾಡುವ ಛಲ ಯುವಕರಲ್ಲಿದೆ. ಸ್ವಾಮಿ ವಿವೇಕಾನಂದರು ಯುವಕರೇ ಎದ್ದೇಳಿ ನಾಡಿನ ಕಲ್ಯಾಣಕ್ಕೆ ಶ್ರಮಿಸಿ ಎಂದು ಈ ಹಿಂದೆಯೇ ಕರೆಕೊಟ್ಟಿದ್ದರು. ಪ್ರತಿವರ್ಷ ಯುವಕರ ದಿನಾಚರಣೆ ಆಚರಣೆ ಮೂಲಕ ಸ್ಪೂರ್ತಿ ಪಡೆಯಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ನ್ಯಾಯಾಂಗ ಇಲಾಖೆ ಇಂದು ಅನೇಕ ಬದಲಾವಣೆಗಳನ್ನು ತರುವ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತಿದೆ. ಯುವಕರು ಈ ನಾಡಿನ ಸಂರಕ್ಷಕರು ಎಂಬುವುದರಲ್ಲಿ ಎರಡು ಮಾತಿಲ್ಲ. ಯಾವುದೇ ಸವಾಲನ್ನು ಎದುರಿಸುವ ಶಕ್ತಿ ಯುವಕರಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ತಿಮ್ಮಯ್ಯ ಮಾತನಾಡಿ, ರಾಷ್ಟ್ರೀಯ ಯುವ ದಿನಾಚರಣೆ ಆಚರಣೆ ಎಲ್ಲಾ ಯುವಕರಿಗೆ ಸ್ಪೂರ್ತಿಯಾಗಲಿ. ಯುವಜನತೆ ಗಟ್ಟಿಯಾಗಿ ನೆಲೆಯೂರಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಮಾಜವನ್ನು ಒಗ್ಗೂಡಿಸುವ, ಸಮಾಜದಲ್ಲಿ ಎಲ್ಲರಲ್ಲೂ ಸಾಮರಸ್ಯ ಮೂಡಿಸುವ ಕೆಲಸವನ್ನು ಯುವಕರು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದರಾಜು, ಖಜಾಂಚಿ ಟಿ.ರುದ್ರಯ್ಯ, ಹಿರಿಯ ವಕೀಲರಾದ ಜಿ.ಎಸ್.ಶರಣಪ್ಪಯ್ಯ, ಟಿ.ತಮ್ಮಣ್ಣ, ಕೆ.ಬಿ.ಪ್ರಭಾಕರ, ಜಯಣ್ಣ, ಎಂ.ಎಸ್.ವಿಶ್ವನಾಥ, ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ, ಉಪನ್ಯಾಸಕ ಎಚ್.ಆರ್.ಹಭಿಬುಲ್ಲಾ ಮುಂತಾದವರು ಉಪಸ್ಥಿತರಿದ್ದರು.