ಸಾರಾಂಶ
ಬಳ್ಳಾರಿ: ರಂಗಭೂಮಿಯು ಹೊಸ ರೂಪಾಂತರದೊಂದಿಗೆ ಸಶಕ್ತವಾಗಿ ಬೆಳೆದಿದ್ದು ಸಮಾಜವನ್ನು ಸಮೃದ್ಧವಾಗಿ ಕಟ್ಟುವಲ್ಲಿ ರಂಗಭೂಮಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಪ್ರಭಾರ ಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ ಹೇಳಿದರು.ನಗರದ ಡಿ.ಆರ್.ಕೆ. ರಂಗಸಿರಿ ಸಭಾಂಗಣದಲ್ಲಿ ರಂಗಜಂಗಮ ಸಂಸ್ಥೆ, ಡಿ.ಕಗ್ಗಲ್ ಹಾಗೂ ಗಾಯತ್ರಿ ಪ್ರಕಾಶನ ಸಹಯೋಗದಲ್ಲಿ ಜರುಗಿದ ಪ್ರೊ.ರಾಮಕೃಷ್ಣಯ್ಯ ನಿರ್ದೇಶನದ ನಾಟಕಗಳ ಅವಲೋಕನ ಹಾಗೂ ವಾಲ್ಮೀಕಿ ಇತರೆ ನಾಟಕಗಳು ಕೃತಿಗಳ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಟಿವಿ, ಸಿನಿಮಾ ಪ್ರಭಾವ ಹೆಚ್ಚಾದ ಬಳಿಕ ನಾಟಕಗಳನ್ನು ನೋಡುವವರು ಯಾರು? ಎಂಬ ಪ್ರಶ್ನೆ ಉದ್ಭವಿಸಿತ್ತು. ರಂಗಭೂಮಿಯ ಕಥೆ ಮುಗಿದೇ ಹೋಯಿತು ಎಂಬ ಮಾತುಗಳು ಸಹ ಕೇಳಿ ಬಂದವು. ಆದರೆ, ರಂಗಭೂಮಿ ನಿಂತ ನೀರಾಗಲೇ ಇಲ್ಲ. ರಂಗಭೂಮಿ ಅನೇಕ ಆಯಾಮಗಳಲ್ಲಿ ತನ್ನನ್ನು ತಾನು ಕಟ್ಟಿಕೊಂಡು, ಹಬ್ಬಿಕೊಂಡು ಬೆಳೆಯುತ್ತಲೇ ರಂಗಪ್ರಯೋಗದ ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡಿತು ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಂಗಭೂಮಿ ಬೆಳವಣಿಗೆ ಕುರಿತು ಮಾತನಾಡಿದ ವೀರಶೈವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶ್ಯಾಮ್ ಮೂರ್ತಿ, ರಂಗಭೂಮಿ ಎಂಬ ಪರಿಕಲ್ಪನೆ ಗ್ರೀಕ್ ನಲ್ಲಿ ಮೊದಲು ಹುಟ್ಟಿತು. ಬಳಿಕ ಅದು ವಿಸ್ತಾರಗೊಂಡಿತು. ಬೀದಿನಾಟಕಗಳು, ಕಂಪನಿ ನಾಟಕಗಳು, ಪೌರಾಣಿಕ ನಾಟಕಗಳು ಹಾಗೂ ಸಾಮಾಜಿಕ ನಾಟಕಗಳು ಇಂದಿಗೂ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಸಮಕಾಲೀನ ತಲ್ಲಣಗಳಿಗೆ ನಾಟಕಗಳು ಸ್ಪಂದಿಸುವ ವಿಶೇಷ ಗುಣ ಹೊಂದಿರುವುದರಿಂದ ನಾನಾ ಆಯಾಮಗಳಲ್ಲಿ ಅದು ಸಮೃದ್ಧವಾಗಿ ಬೆಳೆಯುತ್ತಾ ಸಾಗಿದೆ ಎಂದು ತಿಳಿಸಿದರು.
ರಂಗಭೂಮಿ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮಹತ್ವಪೂರ್ಣವಾದದ್ದು. ರಂಗ ಕೃತಿಗಳು ಸಮಕಾಲಿನ ವಸ್ತು ವಿಷಯಗಳೊಂದಿಗೆ ರಚನೆಗೊಂಡಾಗ ಅವುಗಳ ಮಹತ್ವ ತುಂಬ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣಯ್ಯ ಹೇಳಿದರು.ಗಾಯತ್ರಿ ಪ್ರಕಾಶನದ ಮುಖ್ಯಸ್ಥ ಡಾ.ಬಸಪ್ಪ ಕಟ್ಟಿಮನಿ, ಡಾ.ಅಂಬರೀಶ್ ಸಾರಂಗಿ ಹಾಗೂ ರಂಗಜಂಗಮ ಸಂಸ್ಥೆಯ ಮುಖ್ಯಸ್ಥ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಮಾತನಾಡಿದರು.
ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಸಂಪಾದಕತ್ವದ ವಾಲ್ಮೀಕಿ ಮತ್ತು ಇತರೆ ನಾಟಕಗಳು ಕೃತಿ ಕುರಿತು ಲೇಖಕ ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ದಸ್ತಗೀರ್ ಸಾಬ್ ದಿನ್ನಿ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಘವೇಂದ್ರ ಗುಡದೂರು ವಚನ ಗಾಯನ ಮಾಡಿದರು. ಕೆ.ಉಮೇಶ್ ತಬಲಾ ಸಾಥ್ ನೀಡಿದರು. ವಿಷ್ಣು ಹಡಪದ, ನೇತಿ ರಘುರಾಮ ಹಾಗೂ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.