ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಒಂದು ಕಲೆ ಇನ್ನೊಂದು ಕಲೆಯನ್ನು ನಾಶ ಮಾಡುವುದಿಲ್ಲ. ಚಲನಚಿತ್ರ, ಟಿ.ವಿ. ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿಗೆ ಧಕ್ಕೆಯಾಗುವುದಿಲ್ಲ. ರಂಗಕಲೆ ಈ ಮಣ್ಣಿನ ಕಲೆ, ರಂಗಭೂಮಿಯಲ್ಲಿ ಸದಾ ಜೀವಂತಿಕೆ ಇದ್ದೇ ಇರುತ್ತದೆ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟರು.ನಗರದ ಕನ್ನಡ ಭವನದಲ್ಲಿ ಸಮ್ಮುಖ ರಂಗಸಂಪನ್ಮೂಲ ಕೇಂದ್ರದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಎ.ಎಸ್.ಎ.ಖಾನ್ ಅವರನ್ನು ಅಭಿನಂದಿಸಿ ಮಾತನಾಡಿದರು.ಮಕೂರಿನ ಮಣ್ಣಿನಲ್ಲಿ ರಂಗಭೂಮಿಯ ಕಲೆ ಜೀವಂತವಾಗಿದೆ. ಮಹಾನ್ ಕಲಾವಿದರು ಈ ಮಣ್ಣಿನಲ್ಲಿ ಹುಟ್ಟಿ ಕಲೆಯನ್ನು ಬೆಳಗಿದರು. ವರನಟ ಡಾ.ರಾಜ್‌ಕುಮಾರ್ ಅವರು ತುಮಕೂರು ಮಣ್ಣಿನ ಕಲೆಯ ಗುಣವನ್ನು ಹಾಡಿಹೊಗಳಿದ್ದರು. ಇಂತಹ ತುಮಕೂರಿನಲ್ಲಿ ರಂಗಕಲೆಯ ಮರುಉತ್ಥಾನ ಆಗಬೇಕು ಎಂದು ಆಶಿಸಿದರು.ತಮ್ಮ ಹಲವಾರು ಚಲನಚಿತ್ರಗಳಲ್ಲಿ ಎ.ಎಸ್.ಎ.ಖಾನ್ ಅವರು ಕೆಲಸ ಮಾಡಿದ್ದಾರೆ. ಹಲವು ಪಾತ್ರಗಳಲ್ಲಿ ಅಭಿನಯಿಸಿ ಜೀವ ತುಂಬಿದ್ದಾರೆ. ಎಲೆಮರೆಕಾಯಿಯಂತೆ ತಮ್ಮ ಕೆಲಸ ತಾವು ಮಾಡಿಕೊಂಡಿದ್ದ ಖಾನ್ ಅವರನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಪ್ರೀತಿ ಹೊಂದಿರುವ ಖಾನ್ ಅವರು ಸುಸಂಸ್ಕೃತ, ಸಜ್ಜನ ಕಲಾವಿದ ಎಂದರು.ಯಾವುದೇ ಪ್ರಶಸ್ತಿ ನೀಡುವುದು ಆ ಕಲಾವಿದನ ಜವಾಬ್ದಾರಿ ಹೆಚ್ಚಿಸಲು, ಮತ್ತಷ್ಟು ಕೆಲಸ ಮಾಡಲು. ಖಾನ್ ಅವರು ರಂಗಭೂಮಿಯನ್ನು ಉನ್ನತ ಮಟ್ಟಕ್ಕೆ ತೆಗೆದುಇಕೊಂಡು ಹೋಗಲು ನಾಟಕ ಅಕಾಡೆಮಿ ಪ್ರಶಸ್ತಿ ಎಂಬ ಕಂಕಣ ಕಟ್ಟಿದೆ ಎಂದು ತಿಳಿಯಬೇಕು. ಹೆಚ್.ಎಂ.ಟಿ ಕಾಲದ ರಂಗಕಲಾ ವೈಭವ ತುಮಕೂರಿನಲ್ಲಿ ಮತ್ತೆ ಮೆರೆಯಬೇಕು. ಕಲಾವಿದರಿಗೆ ಹುರುಪು ತುಂಬುವ ಕೆಲಸ ಆಗಬೇಕು ಎಂದು ಪಿ.ಶೇಷಾದ್ರಿ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ರಂಗಭೂಮಿ ಕಲಾವಿದ ಡಾ.ಲಕ್ಷ್ಮಣದಾಸ್ ಮಾತನಾಡಿ, ಎಚ್.ಎಂ.ಟಿ ಕಾರ್ಖಾನೆ ತುಮಕೂರು ಜಿಲ್ಲೆಯಲ್ಲಿ ಕೇವಲ ಆರ್ಥಿಕ ಚಟುವಟಿಕೆಯನ್ನು ಹೆಚ್ಚು ಮಾಡಲಿಲ್ಲ, ಕಲಾಶ್ರೀಮಂತಿಕೆಯನ್ನೂ ತಂದುಕೊಟ್ಟಿತು. ಎಚ್.ಎಂ.ಟಿ.ಯ ಕಲಾವಿದರು ದೇಶಾದ್ಯಂತ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಹೊತ್ತು ತರುತ್ತಿದ್ದರು. ತುಮಕೂರಿಗೆ ಕೀರ್ತಿ ತಂದಿದ್ದರು. ಆ ವೈಭವದ ದಿನ ಮರುಕಳಿಸಬೇಕು ಎಂದರು. ಎ.ಎಸ್.ಎ.ಖಾನ್ ಸೇರಿದಂತೆ ತುಮಕೂರು ಎಚ್.ಎಂ.ಟಿಯಲ್ಲಿದ್ದ ಅನೇಕ ಕಲಾವಿದರು ಚಲನಚಿತ್ರ, ಕಿರುತೆರೆಗಳಲ್ಲಿ ಮಿಂಚುತ್ತಾ ಹೆಸರು ಮಾಡುತ್ತಿರುವುದು ತುಮಕೂರಿನ ಹೆಮ್ಮೆ. ಎಚ್.ಎಂ.ಟಿ ರಂಗಭೂಮಿಯನ್ನು ಸದೃಢವಾಗಿ ಕಟ್ಟಿಕೊಟ್ಟಿತ್ತು. ಈಗಿನ ಕಲಾವಿದರೆಲ್ಲಾ ಸೇರಿ ಆಗಿನ ರಂಗ ವೈಭವವನ್ನು ಪುನರ್ ಪ್ರತಿಷ್ಠಾಪಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ,ಸಾಹಿತ್ಯ, ಸಂಗೀತ, ಕಲೆಯಲ್ಲಿ ತುಮಕೂರು ಜಿಲ್ಲೆ ನಾಡಿಗೆ ದೊಡ್ಡ ಕೊಡುಗೆ ನೀಡಿದೆ. ನಮ್ಮಲ್ಲಿ ಕಲೆ ಶ್ರೀಮಂತವಾಗಿದೆ, ಆದರೆ ಕಲಾವಿದರು ಬಡವಾಗಿದ್ದಾರೆ. ಕಲೆಗೆ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಕಲಾವಿದರಿಗೆ ಜೀವನ ಭದ್ರತೆ ಇಲ್ಲ. ಸರ್ಕಾರಗಳು ಇಂತಹ ಕಲಾವಿದರ ನೆರವಿಗೆ ಬರಬೇಕು. ಆ ಮೂಲಕ ಕಲೆಯ ಬೆಳವಣಿಗೆಗೆ ಸಹಕರಿಸಬೇಕು ಎಂದರು.ತುಮಕೂರು ಜಿಲ್ಲೆಯವರೇ ಆದ ಪಿ.ಶೇಷಾದ್ರಿಯವರು ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳೂ ಪ್ರಶಸ್ತಿ ಪಡೆದಿವೆ. ಇವರು ರಾಷ್ಟ್ರ ಪ್ರಶಸ್ತಿಗಳ ಪುರಸ್ಕೃತ ನಿರ್ದೇಶಕ. ತುಮಕೂರಿನಲ್ಲಿ ಶೇಷಾದ್ರಿಯವರ ಚಲನಚಿತ್ರಗಳ ಉತ್ಸವ ಹಾಗೂ ವಿಚಾರಗೋಷ್ಠಿ ಏರ್ಪಡಿಸೋಣ ಎಂದು ಹೇಳಿದರು.ಸಮ್ಮುಖ ರಂಗಸಂಪನ್ಮೂಲ ಕೇಂದ್ರದ ಅಧ್ಯಕ್ಷ ಕೆ.ಎಸ್.ಸತೀಶ್ ಮಾತನಾಡಿ, ತುಮಕೂರಿನ ಎಚ್.ಎಂ.ಟಿ ಸಾಂಸ್ಕೃತಿಕವಾಗಿ ದೊಡ್ಡ ಕೊಡುಗೆ ನೀಡಿದೆ. ಅಂದಿನ ರಂಗ ಚಟುವಟಿಕೆಗಳು ನಾಡಿನಾದ್ಯಂತ ಹೆಸರಾಗಿದ್ದವು. ಆ ರಂಗಶ್ರೀಮಂತಿಕೆಯ ದಾಖಲಾಗಲಿಲ್ಲ. ನಮ್ಮ ಸುತ್ತಮುತ್ತ ಕೆಟ್ಟ ಕೆಲಸಗಳೇ ದಾಖಲಾಗುತ್ತಿರುತ್ತವೆ. ಒಳ್ಳೆಯ ಕೆಲಸಗಳನ್ನು ದಾಖಲು ಮಾಡದಿದ್ದರೆ ಕೆಟ್ಟ ಕೆಲಸಗಳು ವಿಜೃಂಭಿಸಿಬಿಡುತ್ತವೆ ಎಂದರು.ಎಚ್.ಎಂ.ಟಿಯ ನಿವೃತ್ತ ಅಧಿಕಾರಿ ಡಾ.ಜಿ.ವೆಂಕಟೇಶಲು, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಸಮ್ಮುಖ ರಂಗಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷ ಕರಣಂ ರಮೇಶ್, ಕಾರ್ಯದರ್ಶಿ ಟಿ.ಸಿ.ಜಯಪ್ರಕಾಶ್, ನಿರ್ದೇಶಕರಾದ ಸುಷ್ಮಾ, ರವೀಂದ್ರ ಕೆಂಚಮಾರಯ್ಯ, ಮಂಜುನಾಥ್, ಸಂಜನ್‌ನಾಗರಾಜ್ ಮೊದಲಾದವರು ಭಾಗವಹಿಸಿದ್ದರು.