ಶಿಥಿಲಾವಸ್ಥೆಯಲ್ಲಿ ನಾಡಕಚೇರಿ: ಅಧಿಕಾರಿಗಳದ್ದು ಕೊರತೆ

| Published : Aug 11 2024, 01:31 AM IST

ಸಾರಾಂಶ

ಪರುಶುರಾಂಪುರ ರಾಜ್ಯದ ಅತಿದೊಡ್ಡ ಹೋಬಳಿ ಕೇಂದ್ರ, ಇಲ್ಲಿನ ನಾಡಕಚೇರಿ ವ್ಯಾಪ್ತಿಗೆ 52 ಹಳ್ಳಿಗಳಿದ್ದು, 19 ಕಂದಾಯ ವೃತ್ತಗಳಿವೆ. ಆದರೆ, ಜನರಿಗೆ ಅಗತ್ಯ ದಾಖಲೆ ಪತ್ರ ಕೊಡುವಲ್ಲಿ ಕೆಲ ಗ್ರಾಮ ಲೆಕ್ಕಾಧಿಕಾರಿಗಳು ವಿಫಲರಾಗುತ್ತಿದ್ದಾರೆ

ಕನ್ನಡಪ್ರಭಾ ವಾರ್ತೆ ಪರುಶುರಾಂಪುರ

ಕಂದಾಯ ಇಲಾಖೆ ಅಂದ್ರೆ ಮನುಷ್ಯ ಹುಟ್ಟಿನಿಂದ ಸಾಯುವ ತನಕ ಸೇವೆ ನೀಡುವ ಮಾತೃ ಇಲಾಖೆ ಹಾಗೂ ಗ್ರಾಮ ಮಟ್ಟದ ಸರ್ಕಾರ ಕೂಡ ಹೌದು. ಇಂಥ ಇಲಾಖೆ ಆಡಳಿತದ ಕಟ್ಟಡದಲ್ಲಿ ಇದೀಗ ಕಡತಗಳಿಗೆ ರಕ್ಷಣೆ ಇಲ್ಲ, ಮಳೆ ಬಂದರೆ ಸೋರುತ್ತೆ, ಕುಸಿದು ಬೀಳುತ್ತಿರುವ ಮೇಲ್ಛಾವಣಿ ಹೀಗೆ ಸಮಸ್ಯೆಗಳ ಆಗರವೇ ಆಗಿದೆ.

ಪರುಶುರಾಂಪುರ ರಾಜ್ಯದ ಅತಿದೊಡ್ಡ ಹೋಬಳಿ ಕೇಂದ್ರ, ಇಲ್ಲಿನ ನಾಡಕಚೇರಿ ವ್ಯಾಪ್ತಿಗೆ 52 ಹಳ್ಳಿಗಳಿದ್ದು, 19 ಕಂದಾಯ ವೃತ್ತಗಳಿವೆ. ಆದರೆ, ಜನರಿಗೆ ಅಗತ್ಯ ದಾಖಲೆ ಪತ್ರ ಕೊಡುವಲ್ಲಿ ಕೆಲ ಗ್ರಾಮ ಲೆಕ್ಕಾಧಿಕಾರಿಗಳು ವಿಫಲರಾಗುತ್ತಿದ್ದಾರೆ. ದಾಖಲೆ ಪತ್ರಗಳಿಗೆ ಬರುವ ಜನರನ್ನು ವಾರ ತಿಂಗಳುಗಟ್ಟಲೆ ಕಚೇರಿ ಅಲೆದಾಡುತ್ತಿರುವುದು ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬಾರದೇ ದಿನಗಟ್ಟಲೆ ಕಾಯಿಸಿ ವಿಳಂಬ ಮಾಡುತ್ತಿದ್ದಾರೆ ಎಂಬುದು ಜನರ ಆರೋಪ.

ನಾಡ ಕಚೇರಿಯಲ್ಲಿ ಕೇವಲ 12 ಮಂದಿ ಗ್ರಾಮ ಲೆಕ್ಕಿಗರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಏಳು ಹುದ್ದೆ ಖಾಲಿ ಇವೆ. ಕಚೇರಿಯಲ್ಲಿದ್ದ ಎಸ್‌ಡಿಎ ಕಾಯಂ ನೌಕರರನ್ನು ಚಳ್ಳಕೆರೆ ತಾಲೂಕು ಕಚೇರಿಗೆ ನಿಯೋಜನೆ ಮಾಡಿದ್ದಾರೆ. ಇನ್ನೊಂದೆಡೆ ಕಚೇರಿಗೆ ಬಂದು ಹೋಗುವ ಜನರಿಗೆ ಸರಿಯಾದ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.

ನಾಡಕಚೇರಿ ಕಟ್ಟಡ ಸ್ವಾತಂತ್ರ್ಯ ಪೂರ್ವದ ಹಳೆಯದಾದ ಕಟ್ಟಡವಾಗಿದ್ದು ಕಿಟಕಿ ಬಾಗಿಲುಗಳು ಗೆದ್ದಲು ತಿನ್ನುತ್ತಿವೆ. ಮೇಲ್ಛಾವಣಿ ಉದುರುತ್ತಿದೆ. ಮಳೆ ಬಂದಾಗ ನೀರು ಸೋರಿಕೆಯಾಗುತ್ತಿದೆ. ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದ್ದು ಕುಸಿದು ಬೀಳುತ್ತಿದೆ.

ಕಡತಗಳಿಗೆ ಭದ್ರತೆ ಇಲ್ಲ ಹಳೆಯ ಕೈಬರಹದ ಪಹಣಿ, ಮುಟೇಶನ್, ರೆಕಾರ್ಡ್ ಆಫ್ ರೈಟ್ಸ್ ಇಂಡೆಕ್ಸ್ ಮತ್ತಿತರ ದಾಖಲೆ ಪತ್ರಗಳಿಗೆ ನಿರ್ವಹಣೆ ಹಾಗೂ ಭದ್ರತೆ ಇಲ್ಲದಿರುವುದು ಕೂಡ ಎದ್ದು ಕಾಣುತ್ತಿದೆ, ಕಟ್ಟಡ ಸೋರುತ್ತಿರುವುದರಿಂದ ದಾಖಲೆಗಳನ್ನು ಪ್ಲಾಸ್ಟಿಕ್ ತಾಡಪಲ್‌ನಿಂದ ಮುಚ್ಚಿರುವಂತಹ ಸ್ಥಿತಿ ಇಲ್ಲಿದೆ.

ಕಚೇರಿ ಹಳೆಯ ನಕಲು ದಾಖಲೆ ಪತ್ರ ನೀಡುವುದು ಒಂದು ದಂಧೆಯಾಗಿದೆ. ಜನರಿಂದ ಪಡೆದ ಹಣಕ್ಕೆ ಯಾವುದೇ ರಸೀದಿ ನೀಡುತ್ತಿಲ್ಲ, ಚಲನ್ ನೀಡುತ್ತಿಲ್ಲ ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ದಾಖಲೆ ನೀಡುವ ಕಾರ್ಯ ವಿಳಂಬ ಮಾಡುತ್ತಾರೆ.

ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಹೋರಾಟಗಾರ

ನಾಡಕಚೇರಿ ಈ ಬಾರಿ ಮಳೆಗೆ ಬೀಳುವ ಸ್ಥಿತಿ ಇದೆ. ಇಲಾಖೆ ಮೇಲಾಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಬೇರೆ ಕಡೆ ಕಚೇರಿ ಸ್ಥಳಾಂತರ ಮಾಡದಿದ್ದರೆ ದುರಂತ ಎದುರಿಸಬೇಕಾಗುತ್ತದೆ.

ಈ.ಎನ್.ವೆಂಕಟೇಶ, ತಾಪಂ ಮಾಜಿ ಸದಸ್ಯರು, ಪರಶುರಾಂಪುರ

ಮಕ್ಕಳ ದಾಖಲೆ ಪತ್ರಗಳನ್ನು ನೀಡಲು ಒಂದು ಪುಟಕ್ಕೆ ಹದಿನೈದು ಪಡೆಯುತ್ತಿದ್ದೇವೆ. ಈ ಹಣವನ್ನು ಸರ್ಕಾರಕ್ಕೆ ಜಮೆ ಮಾಡುತ್ತಿದ್ದೇನೆ. ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಅನ್ನಪೂರ್ಣಮ್ಮ, ಉಪ ತಹಸೀಲ್ದಾರ್, ನಾಡಕಚೇರಿ ಪರಶುರಾಂಪುರ