ಸಾರಾಂಶ
ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದ ಹೊರಾಂಗಣದಲ್ಲಿ ಹಮ್ಮಿಕೊಂಡಿರುವ ನಾಟಕೋತ್ಸವಕ್ಕೆ ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಂಗಭೂಮಿ ಅನಿಶ್ಚಿತತೆಯಲ್ಲಿದ್ದರೂ ಸ್ವಾತಂತ್ರ್ಯವಾಗಿ ಸೃಜನಶೀಲತೆ ನಿಶ್ಚಿತವಾಗಿರುತ್ತದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.ನಗರದ ಡಾ.ರಾಜ್‌ಕುಮಾರ್ ರಂಗಮಂದಿರದ ಹೊರಾಂಗಣದಲ್ಲಿ ಶಾಂತಲಾ ಕಲಾವಿದರ ಸಂಘದ ಸುವರ್ಣ ಮಹೋತ್ಸವ ಹಾಗೂ ಬೆಂಗಳೂರಿನ ರಂಗಶಂಕರಕ್ಕೆ 20 ವರ್ಷ ತುಂಬಿದ ಅಂಗವಾಗಿ ಜ.8 ರವರೆಗೆ ಹಮ್ಮಿಕೊಂಡಿರುವ ನಾಟಕೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿಯಲ್ಲಿ ನಿಶ್ಚಲ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಿದೆ. ಇಂದಿನ ಟೆಕ್ನಾಲಜಿ ಬದುಕನ್ನು ಬದಲಾಯಿಸುತ್ತಿದೆ. ಬದುಕಿನ ವಾಸ್ತವ ನಿಜವಾದ ಮಾಧ್ಯಮ ರಂಗಭೂಮಿಯಾಗಿದೆ. ರಂಗಭೂಮಿ ಸಮುದಾಯವನ್ನು ನಿಜ ಜೀವನಕ್ಕೆ ಕರೆದುಕೊಂಡು ಹೋಗುವ ಮಾಧ್ಯಮವಾಗಿದೆ ಎಂದರು.ಶಾಂತಲ ಕಲಾವಿದರ ಟ್ರಸ್ಟಿ ಕೆ.ವೆಂಕಟರಾಜು ಮಾತನಾಡಿ, ಶಾಂತಲ ಕಲಾವಿದರ ತಂಡ 50 ವರ್ಷ ಪೂರೈಸಿದ್ದು, ತಂಡ ರಚಿಸಿದಾಗ 50 ವರ್ಷ ಪೂರೈಸುತ್ತದೆ ಎಂಬ ಕಲ್ಪನೆ ಇರಲಿಲ್ಲ. ಇನ್ನೂ 25 ವರ್ಷ ಶಾಂತಲ ಕಲಾವಿದರ ತಂಡ ಪೂರೈಸಬೇಕು ಅದರ ವಿಶ್ವಾಸ ನಮಗಿದೆ ಎಂದರು.
ಶಾಂತಲ ಕಲಾವಿದರ ತಂಡ ಒಳ್ಳೇಯದನ್ನು ಮಾತನಾಡುವುದು, ಒಳ್ಳೆಯ ಬರವಣಿಗೆ, ಓದುವ ಜಾಣ್ಮೆಯನ್ನು ಕಲಾವಿದರಿಗೆ ಕಲಿಸಿದೆ. 50 ವರ್ಷ ಪೂರೈಸಿದ ಸಂಭ್ರಮಕ್ಕೆ 6 ದಿನಗಳು ನಾಟಕೋತ್ಸವ ಆಯೋಜಿಸಲಾಗಿದ್ದು, ನಾಟಕವನ್ನು ನೋಡುವ ಮೂಲಕ ನಾಟಕೋತ್ಸವ ಯಶಸ್ವಿಗೊಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶಾಂತಲ ಕಲಾವಿದರ ಅಧ್ಯಕ್ಷ ಅಬ್ರಹಾಂ ಡಿ ಸಿಲ್ವಾ ಅವರು ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಿಕಾ ಶಿಬಿರದ ನಿರ್ದೇಶಖ ಕೆ.ಪಿ ಲಕ್ಷ್ಮಣ, ನಾಟಕ ನಿರ್ದೇಶಖ ಎಸ್. ಸುರೇಂದ್ರ ನಾಥ್ ಇದ್ದರು.