ರಂಗ ಕಲೆ ಅತ್ಯಂತ ಪರಿಣಾಮಕಾರಿ ಮಾಧ್ಯಮ

| Published : Mar 29 2024, 12:58 AM IST

ಸಾರಾಂಶ

ಗದಗ ಜಿಲ್ಲೆ ಅದರಲ್ಲೂ ವಿಶೇಷವಾಗಿ ಶಹಪುರಪೇಟೆ ರಂಗಭೂಮಿಗೆ ವೈಶಿಷ್ಠ ಪೂರ್ಣ ಕೊಡುಗೆ ನೀಡಿದೆ.ಇಂತಹ ನಗರದಲ್ಲಿ ರಂಗ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು

ಗದಗ: ಬದುಕಿನ ಮೌಲ್ಯ ತಿಳಿಸಿ ಕೊಡುವಲ್ಲಿ ರಂಗ ಕಲೆ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದ್ದು, ಅದು ಸದಾ ಕ್ರೀಯಶೀಲವಾಗಿರಬೇಕು.ರಂಗಭೂಮಿ ದಿನಾಚರಣೆ ಕೇವಲ ಔಪಚಾರಿಕತೆ ಪಡೆದುಕೊಳ್ಳದಿರಲಿ ಎಂದು ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಜಿ.ಬಿ. ಪಾಟೀಲ ಹೇಳಿದರು.

ಅವರು ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರಂಗ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ನಾವೆಲ್ಲ ತೊಡಗಿಸಿಕೊಂಡಾಗ ಮಾತ್ರ ರಂಗಭೂಮಿ ದಿನಾಚರಣೆಗೆ ನೈಜ ಅರ್ಥ ಬರಲು ಸಾಧ್ಯ ಎಂದರು.

ಕಬ್ಬಿಗರ ಕೂಟದ ಸಂಸ್ಥಾಪಕ, ಹಿರಿಯ ಸಾಹಿತಿ ಡಿ.ವಿ.ಬಡಿಗೇರ ಮಾತನಾಡಿ, ಗದಗ ಜಿಲ್ಲೆ ಅದರಲ್ಲೂ ವಿಶೇಷವಾಗಿ ಶಹಪುರಪೇಟೆ ರಂಗಭೂಮಿಗೆ ವೈಶಿಷ್ಠ ಪೂರ್ಣ ಕೊಡುಗೆ ನೀಡಿದೆ.ಇಂತಹ ನಗರದಲ್ಲಿ ರಂಗ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಅಂತಹ ಕಾರ್ಯಗಳಿಗೆ ಕಬ್ಬಿಗರ ಕೂಟದ ಸಭಾಭವನ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಚಿನ್ಮಯ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿದ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಮಾತನಾಡಿ, ಶ್ರೀರಾಘವೇಂದ್ರ ಸೇವಾ ಸಮಿತಿ ಹಾಗೂ ಆರ್‌ಎನ್‌ಕೆ ಮಿತ್ರ ಮಂಡಳಿಗಳು ಕಳೆದ ಎರಡು ದಶಕಗಳಿಂದ ನನ್ನ ರಂಗ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತದ್ದು ಸ್ಮರಣಾರ್ಹ. ಪರಸ್ಪರರಲ್ಲಿ ವಿಶ್ವಾಸಾರ್ಹತೆ, ಶಾಂತಿ ನೆಮ್ಮದಿ ನೀಡುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪಾತ್ರ ಮಹತ್ವದ್ದು,ಇಂದಿನ ಮಕ್ಕಳು ಮೊಬೈಲ್ ಗೀಳು ಬದಿಗಿಟ್ಟು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡಬೇಕು.ರಂಗಕಲೆ ಮನುಷ್ಯನ ಸರ್ವಾಂಗೀಣ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗೌರವ ಅಧ್ಯಕ್ಷ ಪ್ರೊ. ಎಂ.ಎಸ್.ಕುಲಕರ್ಣಿ ಮಾತನಾಡಿದರು. ಹಿರಿಯ ರಂಗ ಸಾಧಕರಾದ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರಿಗೆ ಚಿನ್ಮಯ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಜಾನಪದ ಅಕಾಡೆಮಿಗೆ ಸದಸ್ಯರಾಗಿ ನೇಮಕ ಹೊಂದಿರುವ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ ಹಾಗೂ ಕರ್ನಾಟಕ ಬಂಜಾರ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ಜಾನಪದ ಕಲಾವಿದೆ ಸಾವಿತ್ರಿಬಾಯಿ ಲಮಾಣಿ ಅವರನ್ನು ಸನ್ಮಾನಿಸಲಾಯಿತು.

ರೋಣ ತಾಲೂಕಿನ ಹುಲ್ಲೂರ ಗ್ರಾಮದ ಕಲಾವಿದ ರಾಮಕೃಷ್ಣ ಪೂಜಾರ ಮತ್ತು ತಂಡದವರು ರಂಗ ಗೀತೆ ಪ್ರಸ್ತುತ ಪಡಿಸಿದರು.

ಗಣ್ಯರಾದ ಸುಶಿಲೇಂದ್ರ ಜೋಷಿ, ಅಂದಾನೆಪ್ಪ ವಿಭೂತಿ, ಕಾವೇಂಶ್ರೀ ಶ್ರೀನಿವಾಸ, ವಾದಿರಾಜ ಸೊರಟೂರ, ಗಾಯತ್ರಿ ಹಿರೇಮಠ, ಸುಮಾ ಪಿಡ್ಡನಗೌಡರ್, ಸೀತಾಬಾಯಿ ದ್ಯಾಮೇನಹಳ್ಳಿ, ಶುಭಾಂಗಿ ದ್ಯಾಮೇನಹಳ್ಳಿ, ಅಶೋಕ ಗಿರಡ್ಡಿ, ವಿಶ್ವನಾಥ ಬೇಂದ್ರೆ,ರಾಚಯ್ಯ ಹೊಸಮಠ, ಡಾ. ಪ್ರಭು ಗಂಜಿಹಾಳ,ಸೋಮು ಚಿಕ್ಕಮಠ, ಧಮೇಂದ್ರ ಇಟಗಿ, ಬಸವರಾಜ ಈರಣ್ಣವರ, ಪರಶುರಾಮ ರಾಮಪೂರ,ಮಂಜುನಾಥ ಒಂಟೆತ್ತಿನ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ರಂಗಾಸಕ್ತರು ಇದ್ದರು. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ. ಸಿ.ಬಡಿಗೇರ(ನರೇಗಲ್ಲ) ಸ್ವಾಗತಿಸಿದರು. ಕಲಾವಿದ ವೀರಯ್ಯ ಹೊಸಮಠ ನಿರೂಪಿಸಿ, ವಂದಿಸಿದರು.