ರಾಜ್ಯದಲ್ಲಿ 6 ಸಾವಿರ ಜಾತಿಯ ಔಷದಿ ಸಸ್ಯಗಳಿವೆ: ಡಾ.ಕೆ.ಎನ್.ಪ್ರಭು ಮಾಹಿತಿ

| Published : Oct 25 2025, 01:00 AM IST

ರಾಜ್ಯದಲ್ಲಿ 6 ಸಾವಿರ ಜಾತಿಯ ಔಷದಿ ಸಸ್ಯಗಳಿವೆ: ಡಾ.ಕೆ.ಎನ್.ಪ್ರಭು ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ರಾಜ್ಯದಲ್ಲಿ 6 ಸಾವಿರ ಔಷಧಿ ಸಸ್ಯಗಳಿವೆ.ಇದರಲ್ಲಿ 2247 ಸಸ್ಯ ಪ್ರಬೇದಗಳನ್ನು ಗುರುತಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕ ಪ್ರಾಧಿಕಾರದ ಸಲಹೆಗಾರ ಡಾ.ಕೆ.ಎನ್.ಪ್ರಭು ತಿಳಿಸಿದರು.

- ಔಷಧಿ ಸಸ್ಯಗಳ ಕೃಷಿ, ಸುಸ್ಥಿರ ಕಟಾವು, ಪ್ರಾಥಮಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಾಜ್ಯದಲ್ಲಿ 6 ಸಾವಿರ ಔಷಧಿ ಸಸ್ಯಗಳಿವೆ.ಇದರಲ್ಲಿ 2247 ಸಸ್ಯ ಪ್ರಬೇದಗಳನ್ನು ಗುರುತಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕ ಪ್ರಾಧಿಕಾರದ ಸಲಹೆಗಾರ ಡಾ.ಕೆ.ಎನ್.ಪ್ರಭು ತಿಳಿಸಿದರು.

ಶುಕ್ರವಾರ ಸೌತಿಕೆರೆಯ ಸುವರ್ಣ ವನದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಕೊಪ್ಪ ಲ್ಯಾಂಪ್ಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಔಷದಿ ಸಸ್ಯಗಳ ಕೃಷಿ, ಸುಸ್ತಿರ ಕಟಾವು, ಪ್ರಾಥಮಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಔಷಧಿ ಸಸ್ಯಗಳು ಶೇ. 25 ರಷ್ಟು ನಮ್ಮ ತೋಟ, ಹಿತ್ತಲಲ್ಲಿ ಸಿಗಲಿದೆ. ಶೇ.75 ರಷ್ಟು ಕಾಡಿನಿಂದಲೇ ತರ ಬೇಕಾಗಿದೆ. ಈಗ ಔಷಧಿ ಸಸ್ಯಗಳಿಗೆ ಬಹಳ ಬೇಡಿಕೆ ಇದೆ. ಒಂದು ಅಂದಾಜಿನ ಪ್ರಕಾರ ಭಾರತ ದೇಶಕ್ಕೆ 100 ಮೆಟ್ರಿಕ್ ಟನ್ ಔಷಧಿ ಸಸ್ಯಗಳು ಪ್ರತಿ ದಿನ ಬೇಕಾಗುತ್ತದೆ. ಮಲೆನಾಡು ಭಾಗದ ಕಾಡಿನಲ್ಲಿ ಸಿಗುವ ಮುರುಗನ ಹುಳಿ, ಪತ್ರೆ, ಧೂಪಕ್ಕೆ ಬಹಳ ಬೇಡಿಕೆ ಇದೆ. ಆದರೆ, ಪಶ್ಚಿಮಘಟ್ಟದಲ್ಲಿ ಸಿಗುವ ಔಷಧಿ ಸಸ್ಯಗಳು ಎಷ್ಟು ಅಮೂಲ್ಯವಾಗಿದೆ ಎಂಬುದು ಇಲ್ಲಿನ ರೈತರಿಗೆ ತಿಳಿದಿಲ್ಲ.

ಆದ್ದರಿಂದ ಔಷದಿ ಸಸ್ಯಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಮಾರುಕಟ್ಟೆ ಬಗ್ಗೆ ಸರಿಯಾಗಿ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಿದ್ದೇವೆ. ರಾಜ್ಯದ 10 ಸ್ಥಳಗಳಲ್ಲಿ ಇಂತಹ ಕಾರ್ಯಾ ಗಾರ ನಡೆಸಿದ್ದು ಇದರಲ್ಲಿ ಕೊಪ್ಪ ಲ್ಯಾಂಪ್ಸ್ ಸೊಸೈಟಿಯೂ ಸೇರಿದೆ. ಸೊಸೈಟಿ ನಿರ್ದೇಶರಿಗೂ ಮಾಹಿತಿ ನೀಡುತ್ತೇವೆ. ಔಷಧಿ ಸಸ್ಯಗಳ ಉಪಯೋಗ, ಮಾರುಕಟ್ಟೆ ಬಗ್ಗೆ ತಿಳಿಸುತ್ತೇವೆ ಎಂದರು.

ಕೊಪ್ಪ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಬಾಬು ಉದ್ಘಾಟಿಸಿ ಮಾತನಾಡಿ, ನಾವು ಪ್ರಕೃತಿ ಮಧ್ಯೆ ಸಹ ಬಾಳ್ವೆ ಮಾಡುತ್ತಿದ್ದೇವೆ. ನಮ್ಮ ಮನೆಗಳ ಸುತ್ತ ಸಿಗುವ ಔಷಧಿ ಗಿಡಗಳನ್ನು ಗುರುತಿಸಿ ಉಪಯೋಗಿಸಿಕೊಳ್ಳಬೇಕಾಗಿದೆ. ಸ್ಥಳೀಯ ಔಷಧಿಗಳನ್ನು ಉಪಯೋಗಿಸಿಕೊಂಡು ಮನೆ ಮದ್ದು ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಕೊಪ್ಪ ಲ್ಯಾಂಪ್ಸ್ ಸೊಸೈಟಿ ಇಂತಹ ಕಾರ್ಯಾಗಾರ ಏರ್ಪಡಿಸಿ ಉತ್ತಮ ಕಾರ್ಯ ಮಾಡುತ್ತಿದೆ. ಕಾರ್ಯಾಗಾರಕ್ಕೆ ಬಂದ ರೈತರು ಇದರ ಉಪಯೋಗ ಪಡೆಯಬೇಕು ಎಂದರು.

ಅತಿಥಿಯಾಗಿದ್ದ ಕೋಣಂದೂರಿನ ಡಾ.ಮುರಳಿಧರ್ ಮಾತನಾಡಿ, ನಾನು 150 ರೀತಿಯ ಗಿಡಮೂಲಿಕೆ ಔಷಧಿಯನ್ನು ನಮ್ಮ ಕ್ಲಿನಿಕ್ ನಲ್ಲೇ ತಯಾರು ಮಾಡುತ್ತಿದ್ದೇನೆ. 25 ವರ್ಷದ ಹಿಂದೆ ಔಷಧಿ ವನ ಪ್ರಾರಂಭಿಸಿ ದ್ದೇನೆ. ಈಗ ಮಾರುಕಟ್ಟೆಯಲ್ಲೇ ಔಷಧಿ ಗಿಡಗಳು ಕಡಿಮೆ ದರದಲ್ಲಿ ಸಿಗುತ್ತಿದೆ. ಮನೆ ಸುತ್ತ ಮುತ್ತ ಔಷದಿ ಸಸ್ಯಗಳನ್ನು ಬೆಳೆಸಿದರೆ ಕಡಿಮೆ ಖರ್ಚಿನಲ್ಲಿ ಔಷಧಿ ಗಿಡ ಸಿಗುತ್ತದೆ ಎಂದರು.

ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಶೆಟ್ಟಿಕೊಪ್ಪ ಮಹೇಶ್ ಮಾತನಾಡಿ, ಗಿರಿಜನರು ಅರಣ್ಯದಂಚಿನಲ್ಲಿದ್ದು ಪ್ರಕೃತಿ ಮದ್ಯೆ ಬೆಳೆದಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಕಾಡಿನಲ್ಲಿ ಸಿಗುವ ಔಷಧಿ ಗಿಡಗಳನ್ನು ಗುರುತು ಹಿಡಿಯುತ್ತಾರೆ. ಈ ಹಿಂದಿನಿಂದಲೂ ಗ್ರಾಮೀಣ ಪ್ರದೇಶದಲ್ಲಿ ಕಾಯಿಲೆಗಳಿಗೆ ಮನೆ ಮದ್ದು ಉಪಯೋಗಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನಾಂಗದವರು, ರೈತರು ಔಷಧಿ ಸಸ್ಯಗಳನ್ನು ಬೆಳೆದು ಮಾರುಕಟ್ಟೆ ಮಾಡಲು ತರಬೇತಿ ಹಮ್ಮಿಕೊಂಡಿದ್ದೇವೆ ಎಂದರು.

ಅತಿಥಿಗಳಾಗಿ ಕೊಪ್ಪ ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷ ಯೋಗೀಶ್, ನಿರ್ದೇಶಕರಾದ ಜಯರಾಂ, ಬಿ.ಡಿ. ಈರಪ್ಪ, ಕೆಂಪಣ್ಣ, ಮರಿಯಪ್ಪಣ್ಣ, ಮಹೇಶ್, ಚಂದ್ರಶೇಖರ್, ಬೆಂಗಳೂರಿನ ಗಿಡಮೂಲಿಕೆ ಔಷಧಿ ಮಾರಾಟಗಾರ ಚಿರಂತ್, ಕೊಪ್ಪ ಲ್ಯಾಪ್ಸ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಇದ್ದರು.

-- ಬಾಕ್ಸ್--

ಔಷಧಿ ಸಸ್ಯಗಳ ಬಗ್ಗೆ ಸ್ಟೈಡ್‌ ಶೋ

ನೆಲ ನೆಲ್ಲಿ ನಮ್ಮ ಮನೆಯ ಹಿತ್ತಲಲ್ಲೇ ಸಿಗುತ್ತದೆ.ಇದನ್ನು ಕಷಾಯ ಮಾಡಿ ಕುಡಿದರೆ ಲಿವರ್ ಗೆ ಒಳ್ಳೆಯದು. ಚಿಕ್ಕ ಮಗುವಿಗೆ ಸಕ್ಕರೆ ಬೆರಸಿ ಕುಡಿಸಿದರೆ ಪಿತ್ತ ಜನಕಾಂಗಕ್ಕೆ ಒಳ್ಳೆಯದು ಎಂದು ಕೊಪ್ಪ ಆರ್ಯವೇದ ಆಸ್ಪತ್ರೆ ವೈದ್ಯ ಡಾ.ಕೃಷ್ಣ ಕಿಶೋರ್ ತಿಳಿಸಿದರು.

ಔಷಧಿ ಸಸ್ಯಗಳಿಂದ ಯಾವ, ಯಾವ ಕಾಯಲೆಗಳು ಗುಣವಾಗುತ್ತದೆ ಎಂಬ ಬಗ್ಗೆ ಸ್ಟೈಡ್‌ ಶೋ ಮೂಲಕ ಮಾಹಿತಿ ನೀಡಿದರು. ಮುತ್ತಗದ ಎಲೆ ಯಿಂದ ಹೊಟ್ಟೆ ಹುಳ ಹೋಗುತ್ತದೆ. ಇದರ ಬೀಜ ಉಪಯೋಗಿಸ ಬಹುದು. ಅಮೃತ ಬಳ್ಳಿಯಿಂದ ವೈರಸ್ ಜ್ವರ, ರೋಗ ನಿರೋಧಕ ಶಕ್ತಿ, ಅಜೀರ್ಣ ಸೇರಿದಂತೆ ಅನೇಕ ಕಾಯಿಲೆ ಗುಣವಾಗುತ್ತದೆ. ಕೊರೋನ ಸಮಯದಲ್ಲಿ ಅಮೃತ ಬಳ್ಳಿಯ ಅಭಾವ ತಲೆದೋರಿತ್ತು. ಇದರ ಎಲೆ ಹೃದಯ ಆಕಾರದಲ್ಲಿದೆ. ಅಮೃತ ಬಳ್ಳಿಯಲ್ಲಿ ಮುಳ್ಳು ಇರುವುದಿಲ್ಲ. ಬೀಜಗಳು ಅರ್ಧ ಚಂದ್ರಾಕಾರ ದಲ್ಲಿದೆ. ಸುಗಂದಿ ಬೇರು ದೇಹದ ರಕ್ತ ಕೆಟ್ಟಾಗ, ಚರ್ಮದ ಕಾಯಿಲೆ ಬಂದಾಗ, ಪಿತ್ತ, ಜ್ವರ ಕಾಣಿಸಿದಾಗ ಇದರ ಕಷಾಯ ಮಾಡಿ ಕುಡಿಯಬಹುದು. ನೆಗ್ಗಲ ಮುಳ್ಳು ಹೆಚ್ಚಾಗಿ ಬಯಲು ಸೀಮೆಯಲ್ಲಿ ಸಿಗುತ್ತದೆ. ಇದರ ಕಷಾಯದಿಂದ ಮೂತ್ರ ನಾಳ, ಮೂತ್ರ ಪಿಂಡದ ಕಾಯಿಲೆ ಗುಣವಾಗುತ್ತದೆ. ನೆಗ್ಗಲ ಮುಳ್ಳಿನ ಕಷಾಯ ಮಾಡಬಹುದು ಅಥವಾ ಪುಡಿ ಮಾಡಿ ನೀರಿಗೆ ಹಾಕಿ ಕುಡಿಯಬಹುದು ಎಂದರು.