ತುಂಗಭದ್ರಾ ನದಿಯಲ್ಲಿ ಮೊಸಳೆಗಳಿವೆ; ಎಚ್ಚರಿಕೆ

| Published : Jul 30 2024, 12:32 AM IST

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ 33 ಗೇಟ್‌ಗಳಿಂದ 1ಲಕ್ಷ 6 ಸಾವಿರ ಕ್ಯುಸೆಕ್‌ ನೀರು ಸೋಮವಾರ ಹರಿಬಿಡಲಾಗಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನದಿಗೆ 33 ಗೇಟ್‌ಗಳಿಂದ 1ಲಕ್ಷ 6 ಸಾವಿರ ಕ್ಯುಸೆಕ್‌ ನೀರು ಸೋಮವಾರ ಹರಿಬಿಡಲಾಗಿದ್ದು, ನದಿ ತೀರದಲ್ಲಿ ಮೊಸಳೆಗಳು ತಿರುಗಾಡುವುದರಿಂದ ಎಚ್ಚರ ವಹಿಸಲು ವನ್ಯಜೀವಿ ಪ್ರೇಮಿಗಳು ಮನವಿ ಮಾಡಿದ್ದಾರೆ.

ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗ ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಸಂಪೂರ್ಣ ಮುಳುಗಡೆಯಾಗಿವೆ. ಕೋದಂಡರಾಮಸ್ವಾಮಿ ದೇವಾಲಯದ ಬಳಿಯ ಮಂಟಪಗಳು ಜಲಾವೃತವಾಗಿವೆ.

ತುಂಗಭದ್ರಾ ನದಿಯಲ್ಲಿ ಮೊಸಳೆ, ನೀರು ನಾಯಿ ಮತ್ತಿತರ ಪ್ರಾಣಿಗಳ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಮೊಸಳೆ ಹಾಗೂ ನೀರು ನಾಯಿಗಳು ತಮ್ಮ ಮೂಲ ಆಶ್ರಯವನ್ನು ತ್ಯಜಿಸಿ ನದಿಯ ಅಂಚಿನಲ್ಲಿ ಹಾಗೂ ಸುತ್ತಮುತ್ತಲ ಗದ್ದೆಗಳಲ್ಲಿ ಕಾಣಿಸುತ್ತವೆ. ಪ್ರವಾಹ ಸಂದರ್ಭದಲ್ಲಿ ಅವು ಕೊಚ್ಚಿಕೊಂಡು ಹೋಗುವುದನ್ನು ತಪ್ಪಿಸಿಕೊಳ್ಳಲು ನಡುಗಡ್ಡೆಗಳನ್ನು ಆಶ್ರಯಿಸುತ್ತವೆ ಎಂದಿದ್ದಾರೆ.

ಪ್ರವಾಹದಲ್ಲಿ ಅವುಗಳ ಆಹಾರವಾದ ಮೀನು ಮುಂತಾದ ಆಹಾರದ ಲಭ್ಯತೆ ಇರುವುದಿಲ್ಲ. ನೀರುನಾಯಿಗಳು ಕಾಲುವೆಗಳಲ್ಲಿ ಹಾಗೂ ಸುತ್ತಮುತ್ತಲಿನ ಗದ್ದೆಗಳಲ್ಲಿ ಕಂಡು ಬರುತ್ತವೆ. ಕೆಲವೊಮ್ಮೆ ಕಾಲುವೆಗಳ ಮೂಲಕ ಸಾಗಿ ಸಮೀಪದ ಕೆರೆ ಕಟ್ಟೆಗಳಲ್ಲಿ ಮೀನು, ಏಡಿ, ಕಪ್ಪೆ ಮುಂತಾದ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ತಮ್ಮ ಹೊಲಗದ್ದೆಗಳಲ್ಲಿ ಅಥವಾ ಕಿರು ಕಾಲುವೆಗಳಲ್ಲಿ ಮೊಸಳೆ ಮತ್ತು ನೀರುನಾಯಿಗಳು ಕಂಡು ಬಂದಲ್ಲಿ ಹುಯಿಲೆಬ್ಬಿಸದೆ, ಜಾಗ್ರತೆಯಿಂದ ದೂರ ಹೋಗಬೇಕು. ನದಿ ತೀರದ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವವರು ಮೊಸಳೆಗಳ ಇರುವಿಕೆಯನ್ನು ಗಮನಿಸಿ ಎಚ್ಚರಿಕೆ ವಹಿಸಬೇಕು. ಮೊಸಳೆಗಳು ಜನವಸತಿ ಪ್ರದೇಶದಲ್ಲಿ ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಸಂಪರ್ಕಿಸಿ ಅವುಗಳನ್ನು ಸಂರಕ್ಷಿಸಿ ಸೂಕ್ತ ಆವಾಸಸ್ಥಾನಕ್ಕೆ ಬಿಡಲು ನೆರವಾಗಬೇಕೆಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ತಿಳಿಸಿದ್ದಾರೆ.