ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ಚೆಕ್ ಪೋಸ್ಟ್‌ಗಳಂತೆ ನಗರದಾದ್ಯಂತ ನೂರಕ್ಕೂ ಅಧಿಕ ಚೆಕ್ ಪೋಸ್ಟ್ ತೆರೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚೆಕ್ ಪೋಸ್ಟ್‌ಗಳು ದಿನದ 24 ತಾಸು ಕಾರ್ಯ ನಿರ್ವಹಿಸಲಿವೆ. ಪಾಳಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಪ್ರತಿ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು, ಬಿಬಿಎಂಪಿ, ಆರ್‌ಟಿಒ, ಅಬಕಾರಿ, ವಾಣಿಜ್ಯ ತೆರಿಗೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡ ಇರಲಿದೆ. ರಸ್ತೆಗಳಲ್ಲಿ ಬರುವ ಪ್ರತಿ ವಾಹನದ ಮೇಲೆ ನಿಗಾವಹಿಸಿ ತಪಾಸಣೆ ನಡೆಸಲಿದ್ದಾರೆ ಎಂದು ಹೇಳಿದರು.
ತಪಾಸಣೆ ವೇಳೆ ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಜಪ್ತಿ ಮಾಡಿ ಪ್ರಕರಣ ದಾಖಲಿಸಲಿದ್ದಾರೆ. ಸೂಕ್ತ ದಾಖಲೆ ಹಾಜರುಪಡಿಸಿ ಜಪ್ತಿ ಮಾಲುಗಳನ್ನು ಮರಳಿ ಪಡೆಯಬಹುದಾಗಿದೆ ಎಂದು ತಿಳಿಸಿದರು.