ಸಂಗೀತಕ್ಕೆ ಸೋಲದ ಮನಸ್ಸುಗಳಿಲ್ಲ: ಮೀರಾ

| Published : Mar 19 2025, 12:36 AM IST

ಸಾರಾಂಶ

ಭೂಮಿ ಮೇಲೆ ಸಂಗೀತಕ್ಕೆ ಮನಸೋಲದ ಮನಸುಗಳಿಲ್ಲ. ಹಾಗಾಗಿ ಸಂಗೀತಕ್ಕೆ ತನ್ನದೇ ಆದ ಶಕ್ತಿ ಅಡಗಿದೆ ಎಂದು ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಭೂಮಿ ಮೇಲೆ ಸಂಗೀತಕ್ಕೆ ಮನಸೋಲದ ಮನಸುಗಳಿಲ್ಲ. ಹಾಗಾಗಿ ಸಂಗೀತಕ್ಕೆ ತನ್ನದೇ ಆದ ಶಕ್ತಿ ಅಡಗಿದೆ ಎಂದು ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕೆ.ಆರ್.ಪೇಟೆ ತಾಲೂಕಿನ ದೊಡ್ಡಕ್ಯಾತನಹಳ್ಳಿ ಭಾವಾಂತರಂಗ ಕಲಾವೃಂದದಿಂದ ರಂಗಕಲಾವಿದ, ಅಂಗವಿಕಲ ಜಿ.ಕೆ.ಶಂಕರ್ ಅವರ ವೈದ್ಯಕೀಯ ಚಿಕಿತ್ಸಾ ನೆರವಿಗಾಗಿ ಭಾನುವಾರ ಆಯೋಜಿಸಿದ್ದ ಭಾವತರಂಗ ಹಳೆಯ ಮಧುರ ಗೀತೆಗಳ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತ್ತೊಬ್ಬರಿಗೆ ತೊಂದರೆ ಕೊಡುವುದು ಸರಿಯಲ್ಲ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡುವ ಜನರಿಗೆ ದುಃಖವಿರುವುದಿಲ್ಲ ಎಂಬುದನ್ನು ವ್ಯಾಸರಾಯರು ಹೇಳಿದ್ದಾರೆ, ಅವರು ಹೇಳಿದ ದಾರಿಯಲ್ಲಿ ನಡೆಯೋಣ, ಸಂಗೀತಗಾರ ಅದ್ಭುತವಾಗಿ ಹಾಡುತ್ತಿರುವಾಗ ದೇವಿಯೇ ಪ್ರತ್ಯಕ್ಷವಾಗಿ ಬೇಕಾದ ವರವನ್ನು ಕೇಳು ಎಂದಾಗ ಅದಕ್ಕೆ ಸಂಗೀತಗಾರ ಹೇಳುತ್ತಾನೆ ತಾಯಿ, ನನಗೆ ನಿಮಗಿಂತಲೂ ಸಂಗೀತವೇ ದೊಡ್ಡದಿದೆಯಾ ಎನ್ನುವ ಪ್ರಶ್ನೆ ಮೂಡಿದೆ ಎಂದಾಗ ದೇವಿ ಒಂದು ಕ್ಷಣ ಮೌನವಾದಳಂತೆ ಎಂದು ವಿವರಿಸಿದರು.

ಉದ್ಘಾಟಿಸಿ ಮಾತನಾಡಿದ ಸಹಪ್ರಾಧ್ಯಾಪಕಿ ಎಂ.ಬಿ.ಪ್ರಮೀಳಾ ಶಂಕರೇಗೌಡ, ಭಾವತರಂಗ ಕಾರ್ಯಕ್ರಮಕ್ಕೆ ತಕ್ಕಂತೆ ಇಲ್ಲಿ ಹಾಡುಗಾರರಿಂದ ಸಂಗೀತ ಕೇಳಿ ಬರುತ್ತಿದೆ, ೧೯೭೦- ೮೦ರ ದಶಕದಲ್ಲಿ ಭಾವನೆಗಳಿಗೆ ಸ್ಪಂದಿಸುವ ಸಂಗೀತ ಕೇಳುತ್ತಿದ್ದೆವು. ಅದನ್ನು ನೆನಪಿಸುವ ಮಾದರಿಯಲ್ಲಿ ರಂಗಕಲಾವಿದ ಜಿ.ಕೆ.ಶಂಕರ್ ಅವರು ತಮ್ಮ ಅಂಗವಿಕಲತೆಯನ್ನು ಮರೆತು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿರುವ ಇವರ ಕೆಲಸ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಮಾತನಾಡಿ, ನಮ್ಮ ಜಿಲ್ಲೆಯವರೇ ಆಗಿರುವ ಎಷ್ಟೋ ಕಲಾವಿದರು ದೊಡ್ಡ ಹುದ್ದೆಯಲ್ಲಿದ್ದರೂ ಬಿಡುವು ಮಾಡಿಕೊಂಡು ಹಳೆಯ ಚಲನಚಿತ್ರಗೀತೆಗಳನ್ನು ಹಾಡುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಎಷ್ಟೇ ನೋವಿದ್ದರೂ ಈ ಗೀತೆಗಳನ್ನು ಕೇಳುತ್ತಿದ್ದರೆ ಮನಸು ಹಗುರವಾಗುತ್ತದೆ. ಜಿ.ಕೆ.ಶಂಕರ್ ಅವರ ಆರೋಗ್ಯ ಸುಧಾರಿಸಲು ಹಾಗೂ ಅವರು ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಕೀಬೋರ್ಡ್ ವಾದಕರಾದ ಮೈಸೂರಿನ ಅಪ್ಪಾಜಿ, ಎಚ್.ರಾಜೇಶ್, ರಿಧಂ ಪ್ಯಾಡ್ ಎನ್.ಅರುಣ್‌ಕುಮಾರ್, ತಬಲ ಎಂ.ಸಿ.ಜಗದೀಶ್ ಅವರ ಸ್ವಯಂ ನುಡಿಸುವಿಕೆಯಲ್ಲಿ ಗಾಯಕರಾದ ಅಶ್ವಿನಿ ಶಾಸ್ತ್ರಿ, ಸಿಂಚನಾ ಗೋಪಾಲ್, ದಿಶಾ ಎಸ್.ಜೈನ್, ಆರ್.ಶಂಕರ, ಡಿ.ಜಿ.ಪುಟ್ಟರಾಜು, ಮೋಹನ್ ರಾಗಿಮುದ್ದನಹಳ್ಳಿ, ಎಸ್.ಆನಂದ್, ಎನ್.ಪ್ರಸನ್ನ, ಮೋಹನ್ ಬಾಬು ಅವರು ಹಳೆಯ ಚಲನಚಿತ್ರಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕುಂದಾಪುರ ಪ್ರಭು ಅವರ ಜೂನಿಯರ್ ಪ್ರಭಾಕರ್ ನಟನೆಯೂ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ಜಿಲ್ಲಾ ಗೌವರ್ನರ್ ಕೆ.ಟಿ.ಹನುಮಂತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಸಿ.ಶಿವಲಿಂಗೇಗೌಡ, ಕಲಾವೃಂದದ ಜಿ.ಕೆ.ಶಂಕರ್ ಭಾಗವಹಿಸಿದ್ದರು.