ಬ್ರಾಹ್ಮಣ್ಯದ ಮುಷ್ಟಿಯಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ: ಚಿಂತಕ ಶಿವಸುಂದರ

| Published : Feb 02 2025, 11:45 PM IST

ಸಾರಾಂಶ

ಬಿಜೆಪಿಯವರು ಶೇ. 25ರಷ್ಟು ಸತ್ಯ, ಶೇ. 75ರಷ್ಟು ಸುಳ್ಳುಗಳ ಕಾಕ್‌ಟೇಲ್‌ ಮಾಡಿ ಸಂವಿಧಾನ ಸನ್ಮಾನ ಕಾರ್ಯಕ್ರಮ ಮಾಡುತ್ತಿದ್ದಾರೆ. ನಮಗೆ ಮಾಹಿತಿಯ ಕೊರತೆ ಏನಿಲ್ಲ. ಆ ಮಾಹಿತಿಯ ಮೂಲ ಹಿಂಡಿ ಸತ್ಯದ ಸಾರ ತೆಗೆಯಬೇಕು

ಗದಗ: ಹಿಂದೂ ರಾಷ್ಟ್ರ ನಿರ್ಮಾಣ, ಮೀಸಲಾತಿ ರದ್ದು, ಸಂವಿಧಾನದ ಮೂಲ ರಚನೆ ಯಾಕೆ ತಿದ್ದುಪಡಿ ಮಾಡಬಾರದು ಎಂಬ ಮಾತುಗಳು ಕೇಳಿಬರುತ್ತಿವೆ. ಜತೆಗೆ ಪ್ರಜಾಪ್ರಭುತ್ವದ ಅಡಿಯಲ್ಲಿ ಎಚ್ಚೆತ್ತ ದಲಿತ ಪ್ರಜ್ಞೆ, ಮಹಿಳಾ ಪ್ರಜ್ಞೆ ಬ್ರಾಹ್ಮಣ್ಯದ ಮುಷ್ಟಿಯಲ್ಲಿಟ್ಟುಕೊಳ್ಳುವ ಪ್ರಯತ್ನಗಳು ಕೂಡ ನಡೆದಿದೆ ಎಂದು ಚಿಂತಕ ಶಿವಸುಂದರ ಹೇಳಿದರು.

ನಗರದ ಲಯನ್ಸ್‌ ಭವನದಲ್ಲಿ ಭಾನುವಾರ ನಡೆದ ಲಡಾಯಿ ಪ್ರಕಾಶನದ 299ನೇ ಪುಸ್ತಕ, ಶಿವಸುಂದರ ಅವರ ಸಂವಿಧಾನ ವರ್ಸಸ್‌ ಸನಾತನ ವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಎಂಬುದು ನಮ್ಮ ದೇಶದ ಮಟ್ಟಿಗೆ ಕ್ರಾಂತಿ. ನಾವೆಲ್ಲರೂ ಸಮಾನರು, ಈ ದೇಶದಲ್ಲಿರುವ ಎಲ್ಲರಿಗೂ ಒಂದೇ ಕಾನೂನು. ಆದರೆ ಈಗ, ಸಾಮಾನ್ಯ ಜ್ಞಾನ ಎಂಬುದರ ಪರಿಕಲ್ಪನೆ ಬದಲಾಗುತ್ತಿದೆ. ಚರ್ಚೆಗೆ ವಿಷಯವೇ ಅಲ್ಲದವುಗಳ ಬಗ್ಗೆ ಈಗ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ ಎಂದರು.

ಬಿಜೆಪಿಯವರು ಶೇ. 25ರಷ್ಟು ಸತ್ಯ, ಶೇ. 75ರಷ್ಟು ಸುಳ್ಳುಗಳ ಕಾಕ್‌ಟೇಲ್‌ ಮಾಡಿ ಸಂವಿಧಾನ ಸನ್ಮಾನ ಕಾರ್ಯಕ್ರಮ ಮಾಡುತ್ತಿದ್ದಾರೆ. ನಮಗೆ ಮಾಹಿತಿಯ ಕೊರತೆ ಏನಿಲ್ಲ. ಆ ಮಾಹಿತಿಯ ಮೂಲ ಹಿಂಡಿ ಸತ್ಯದ ಸಾರ ತೆಗೆಯಬೇಕು. 2001ರಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಯಾವುದೇ ಸರ್ಕಾರಿ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರ ಇರಿಸಿಲ್ಲ. ಗುಜರಾತ್‌ನವರಿಗೆ ಅಂಬೇಡ್ಕರ್‌ ರಾಷ್ಟ್ರೀಯ ನಾಯಕನೇ ಅಲ್ಲ. ಕಾಂಗ್ರೆಸ್‌ ನಾಯಕರು ಅಂಬೇಡ್ಕರ್ ಅವರನ್ನು ಅಪಮಾನಿಸಿತು, ಸಂಸತ್‌ ಪ್ರವೇಶಿಸದಂತೆ ತಡೆಯೊಡ್ಡಿತು, ಸಂವಿಧಾನ ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿತು ಎಂಬ ಸತ್ಯ ಬಿಜೆಪಿ ಹೇಳುತ್ತಿದೆ. ಆದರೆ, ಹಿಂದೂ ಮಹಾಸಭಾ, ಕಾಂಗ್ರೆಸ್‌ಗಿಂತ ಎರಡು ಹೆಜ್ಜೆ ಮುಂದಿತ್ತು. ಅಂಬೇಡ್ಕರ್‌ ಅವರಿಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರದಂತೆ ಎಂಬ ಮನಸ್ಥಿತಿ ಹಿಂದೂ ಮಹಾಸಭಾ ಹೊಂದಿತ್ತು ಎಂದು ಆರೋಪಿಸಿದರು.