ಸಾರಾಂಶ
ಎಲ್ಲಾ ಜೀವಿಗಳಿಗಿಂತ ಮಾನವ ಜನ್ಮ ಸರ್ವ ಶ್ರೇಷ್ಠವಾದುದು. ಆಧುನಿಕ ಸಮಾಜದಲ್ಲಿ ಮಾನವೀಯತೆ, ಹೃದಯವಂತಿಕೆಯ ಕೊರತೆ ಇದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೊನ್ನಕೇರಿ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಎಲ್ಲಾ ಜೀವಿಗಳಿಗಿಂತ ಮಾನವ ಜನ್ಮ ಸರ್ವ ಶ್ರೇಷ್ಠವಾದುದು. ಆಧುನಿಕ ಸಮಾಜದಲ್ಲಿ ಮಾನವೀಯತೆ, ಹೃದಯವಂತಿಕೆಯ ಕೊರತೆ ಇದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೊನ್ನಕೇರಿ ಕಳವಳ ವ್ಯಕ್ತಪಡಿಸಿದರು.ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ 177ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಹೂಗಾರ ಮಾದಯ್ಯನವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲೆಡೆ ದ್ವೇಷ, ಅಸೂಯೆ, ಕೊಲೆ, ದರೋಡೆ ಹೆಚ್ಚುತ್ತಲಿವೆ ಇದಕ್ಕೆಲ್ಲಾ ಶರಣರ, ಸಂತರ ಸತ್ಸಂಗದ ಕೊರೆತೆ ಇದೆ. ಮಕ್ಕಳಲ್ಲಿ ಬಸವ ಸಂಸ್ಕೃತಿಯಾದ ಇಷ್ಠಲಿಂಗ ಪೂಜೆ, ದಯಾಪರತೆ, ಗೌರವ ಮಾನವಿಯ ಗುಣಗಳನ್ನು ಕಲಿಸಿಕೊಟ್ಟಾಗ ಮಾತ್ರ ಮಕ್ಕಳು ಸಮಾಜದ ಉತ್ತಮ ಪ್ರಜೆಯಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಲ್ಕಿ ಹೀರೆಮಠ ಸಂಸ್ಥಾನದ ಮಹಾಲಿಂಗ ಸ್ವಾಮಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಪರಿಸರವನ್ನು ಸ್ವಚ್ಛ ಮತ್ತು ಸುಂದರಗೊಳಿಸುವ ಮಹಾಶಕ್ತಿ ಹೂವಿನಲ್ಲಿದೆ. ಹೂವಿನ ಸುಗಂಧ ಸರ್ವರೂ ಸ್ವೀಕರಿಸು ವಂತಾಗಿದೆ. ಭಕ್ತಿ ಹುಟ್ಟಿಸುವ ಶಕ್ತಿ ಹೂವಿನಲ್ಲಿದೆ. 12ನೇ ಶತಮಾನದಲ್ಲಿ ವಿವಿಧ ವೃತ್ತಿಯನ್ನು ಕೈಗೊಳ್ಳುತ್ತಿರುವ ಶರಣರು ಕಾಯಕ ದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅದರಲ್ಲಿ ಹೂವಿನ ಕಾಯಕ ಮಾಡುತ್ತಿರುವ ಹೂಗಾರ ಮಾದಯ್ಯನವರು ಒಬ್ಬರು ಸರ್ವಶ್ರೇಷ್ಠ ಶರಣರಾಗಿದ್ದರು ಎಂದರು.ಕರ್ನಾಟಕ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಸುನಿತಾ ಕೂಡ್ಲಿಕರ್ ಅವರು ‘ಹೂಗಾರ ಮಾದಯ್ಯ’ ನವರ ಕುರಿತು ಅನುಭಾವ ನುಡಿಗಳನ್ನು ಮಂಡಿಸಿದರು.
ಹೂಗಾರ ಸಮಾಜದ ಅಧ್ಯಕ್ಷ ಚಂದ್ರಕಾಂತ ಹೂಗಾರ ಮಾತನಾಡಿ, ನಮ್ಮ ಸಮಾಜದ ಜನಾಂಗದವರು ಬಸವತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಸಮಾಜದ ಎಲ್ಲಾ ಜನರ ಜೊತೆ ಸೌಹಾರ್ದತೆಯಿಂದ ಬಾಳು ಸಾಗಿಸುತ್ತಿದ್ದಾರೆ ಎಂದರು.ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ನೇಹಾ ವೀರಶೆಟ್ಟಿ ‘ಬಸವ ಸಂಸ್ಕೃತಿ’ ಕುರಿತು ಮಾತನಾಡಿದರು.
ಉದ್ಯಮಿಗಳಾದ ಜೈರಾಜ ಖಂಡ್ರೆ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕರಾದ ಸುವರ್ಣ ಚಿಮಕೋಡೆ, ಕಲ್ಯಾಣಪರ್ವ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕಂಟೆಪ್ಪಾ ಗಂದಿಗುಡಿ, ವಿಜಯಕುಮಾರ ಪಾಟೀಲ್ ಯರನಳ್ಳಿ ವೇದಿಕೆಯಲ್ಲಿದ್ದರು.ದಾಸೋಹಿಗಳಾದ ವಿಜಯಕುಮಾರ ಬಾಬಣೆ ಗುರುಬಸವ ಪೂಜೆ ನೆರವೇರಿಸಿದರು. ವಿಜಯಕುಮಾರ ಬಾಬಣೆ ಸ್ವಾಗತಿಸಿದರು. ಪ್ರೊ.ಉಮಾಕಾಂತ ಮೀಸೆ ನಿರೂಪಿಸಿದರೆ, ರಾಜಾಬಾಯಿ ವಂದಿಸಿದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿಗಳು, ಶರಣ-ಶರಣಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಸವಕಲ್ಯಾಣದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಕಲ್ಯಾಣ ಪರ್ವದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.