ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುನಗರಸಭೆಯಾಗಿದ್ದಾಗ ನಿವಾಸಿಗಳಿಗೆ ಕನಿಷ್ಠ ಸವಲತ್ತುಗಳನ್ನು ಕಲ್ಪಿಸದ ಆಡಳಿತವು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ ಬಳಿಕ ಅವುಗಳನ್ನು ಪೂರೈಸಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಿರುವ ಸಮಯದಲ್ಲಿ ಮೊದಲ ಬಾರಿಗೆ ಕರೆದ ಸಾಮಾನ್ಯ ಮಹಾಸಭೆ ಒಳಗಡೆ-ಹೊರಗಡೆ ಗಲಾಟೆ, ಗದ್ದಲ, ವಾಗ್ವಾದಗಳಲ್ಲಿಯೇ ಸುದ್ದು ಮಾಡಿದ್ದರಿಂದ ನಿಜವಾದ ಅಭಿವೃದ್ಧಿ ವಿಚಾರಗಳ ಚರ್ಚೆಗೆ ಗುದ್ದು ಬಿದ್ದಂತಾಯಿತು.ಸ್ಥಳೀಯ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಮೊದಲ ಸಭೆಯಲ್ಲಿ ನಗರಕ್ಕೆ ಅಗತ್ಯ ಸವಲತ್ತುಗಳು ಒದಗಿಸಿ ಕೊಡುವ ವಿಚಾರಕ್ಕಿಂತಲೂ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬಸ್ಥರ ಆಸ್ಪತ್ರೆಯ ಬಿಲ್ಮಂಜೂರು, ಗುತ್ತಿಗೆ ಕಾರ್ಮಿಕರು, ಸಿಬ್ಬಂದಿಯನ್ನು ನಿಯುಕ್ತಿಗೊಳಿಸುವುದು, ಯಂತ್ರಗಳು, ಟೆಂಡರಿಂಗ್ ಕರೆಯುವುದು, ವಿವಿಧ ಯೋಜನೆಗಳಿಗೆ ಅನುದಾನ ಮೀಸಲಿಡುವುದು, ವೃತ್ತಗಳಿಗೆ ಗಣ್ಯರ ಹೆಸರು, ಪುತ್ಥಳಿಗಳ ಸ್ಥಾಪನೆ, ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಪೀಠೋಪಕರಣ ಖರೀದಿ ಸೇರಿದಂತೆ ಆಡಳಿತ ವರ್ಗ, ಸಿಬ್ಬಂದಿ, ಕಚೇರಿಗೆ ಸಂಬಂಧಿಸಿ ದಂತೆ ತಮಗೆ ಅಗತ್ಯವಾದ ವಿಷಯಗಳನ್ನೇ ಹೆಚ್ಚಾಗಿ ಅಜೆಂಡಾದಲ್ಲಿ ಸೇರಿಸಲಾಗಿತ್ತೇ ಹೊರತು, ನಿವಾಸಿಗಳು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಶುದ್ಧ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ಅಳವಡಿಕೆ, ಒಳಚರಂಡಿ ಸಮಸ್ಯೆ, ರಸ್ತೆಗಳ ಸುಧಾರಣೆಯ ವಿಷಯಗಳು ಅಜೆಂಡಾದಲ್ಲಿ ಅಷ್ಟಾಗಿ ಕಾಣಲಿಲ್ಲ.ಗೊಂದಲದ ವಾತಾವರಣ: ಆರಂಭದಿಂದಲೂ ಸಭೆಯ ಸಭಾಂಗಣದಲ್ಲಿ ಹಾಗೂ ಕಚೇರಿ ಹೊರಗಡೆಯಲ್ಲಿ ಗದ್ದಲ, ಗಲಾಟೆ, ಹೋರಾಟಗಳಿಂದಾಗಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ನಗರದ ಆಕಾಶವಾಣಿ ರಸ್ತೆಯಲ್ಲಿನ ತಾತ್ಕಾಲಿಕ ಕಾಯಿಪಲ್ಲೆ ಮಾರುಕಟ್ಟೆಯನ್ನು ಉಸ್ಮಾನಿಯಾ ತರಕಾಯಿ ಮಾರುಕಟ್ಟೆಗೆ ಸ್ಥಳಾಂತರಿಸುವ ವಿಚಾರವಾಗಿ ಎದ್ದಿರುವ ಪರ-ವಿರೋಧ ಚರ್ಚೆಗಳು ಇಡೀ ಸಭೆಯನ್ನೇ ತಿಂದು ಹಾಕಿತು. ಮಾರುಕಟ್ಟೆಯನ್ನು ಸ್ಥಳಾಂತರಿಸ ಬಾರದು ಎಂದು ಒತ್ತಾಯಿಸಿ ಅಲ್ಲಿನ ವ್ಯಾಪಾರಸ್ಥರು, ರೈತರು ಪ್ರತಿಭಟನಾ ರ್‍ಯಾಲಿ ಮುಖಾಂತರ ಮಹಾನಗರ ಪಾಲಿಕೆ ಕಚೇರಿಗೆ ಬಂದು ಅಧ್ಯಕ್ಷೆ ನರಸಮ್ಮ ಮಾಡಗಿರಿ ಅವರಿಗೆ ಮನವಿ ಸಲ್ಲಿಸುತ್ತಿದ್ದ ಸಮಯದಲ್ಲಿ ಅಧ್ಯಕ್ಷೆ ಪತಿ ನರಸಿಂಹಲು ಮಾಡಗಿರಿ ಹಾಗೂ ನಗರಸಭೆ ಮಾಜಿ ಸದಸ್ಯ ಎಂ.ಕೆ.ಬಾಬರ್ ಅವರ ನಡುವೆ ವಾಗ್ವಾದ ನಡೆಯಿತು. ಮತ್ತೊಮ್ಮೆ ಮನವಿ ಪತ್ರ ಓದುವ ವಿಚಾರವಾಗಿ ಆರಂಭಗೊಂಡ ಗಲಾಟೆಯಿಂದಾಗಿ ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. ಇದಾದ ಕೆಲವು ಗಂಟೆಗಳ ನಂತರ ಮನವಿ ಸ್ವೀಕರಿಸಲು ವಿಳಂಬ ಧೋರಣೆ ಅನುಸರಿಸಿದ ಅಧ್ಯಕ್ಷರ, ಪೌರಾಯುಕ್ತರ ನಡೆಯನ್ನು ಖಂಡಿಸಿ ಪಾಲಿಕೆ ಸದಸ್ಯರಲ್ಲದ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಅವರು ಸಭೆಯೊಳಗೆ ನುಗ್ಗಿ ಗಲಾಟೆ ಮಾಡಿದರು. ಈ ಸಮಯದಲ್ಲಿ ಸಭೆಯಲ್ಲಿ ಜೋರಾಗಿ ಅರಚುವುದು, ಚೀರುವುದು ನಡೆಯಿತು. ತಕ್ಷಣ ಪೊಲೀಸರು ಮುಖಂಡರನ್ನು ಕೆಳಕಡೆ ಕರೆದುಕೊಂಡು ಹೋದರು. ಹೀಗೆ ನಿರಂತರವಾಗಿ ಸಭೆಗೆ ಅಡಚಣೆಯಾಗುತ್ತಿದ್ದರಿಂದ ಸಂಬಂಧವಿಲ್ಲದವರನ್ನು ಸಭೆಯಿಂದ ಹೊರಗಡೆ ಕಳುಹಿಸಲಾಯಿತು.ಸಭೆಯಲ್ಲಿ ಉಪಾಧ್ಯಕ್ಷ ಸಾಜೀದ್ಸ ಮೀರ್, ಪೌರಾಯುಕ್ತ ಗುರುಸಿದ್ದಯ್ಯ,ಹಿರಿಯ ಸದಸ್ಯರಾದ ಜಯಣ್ಣ, ಎನ್.ಶ್ರೀನಿವಾಸರೆಡ್ಡಿ, ಜಿಂದಪಪ್,ರಮೇಶ,ಎಂ.ಪವನಕುಮಾರ,ಶಶಿರಾಜ್,ನಾಗರಾಜ,ಲಲಿತಾ ಕಡಗೋಲು, ಸಮೀನಾ ಮುಕ್ರಂ ಸೇರಿ ನಾಮನಿರ್ದೇಶಿತ ಸದಸ್ಯರು, ಅಧಿಕಾರಿ,ಸಿಬ್ಬಂದಿ ವರ್ಗದವರು ಇದ್ದರು.--------------08ಕೆಪಿಆರ್‌ಸಿಆರ್ 03: ರಾಯಚೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಮೊದಲ ಸಾಮಾನ್ಯ ಮಹಾಸಭೆಯಲ್ಲಿ ಸದಸ್ಯರಲ್ಲದ ರವೀಂದ್ರ ಜಲ್ದಾರ್ ಅವರು ಸಭೆ ನಡುವೆ ನುಗ್ಗಿ ಗಲಾಟೆ ಮಾಡಿದರು.