ಜೀವನದ ಮೌಲ್ಯ ತಿಳಿಸುವ, ಬದುಕು ಹಸನುಗೊಳಿಸುವ ಜಾನಪದ ಇಂದು ಮರೆಯಾಗಿ ಅಶ್ಲೀಲ ಪದಗಳನ್ನೇ ಜಾನಪದ ಎಂದು ಹಾಡುತ್ತಿರುವುದು ವಿಷಾದನೀಯ.
ಧಾರವಾಡ:
ಶಿಕ್ಷಣದಲ್ಲಿ ಜಾನಪದ ವಿಷಯದ ಅವಶ್ಯಕತೆ ಇದ್ದು ಮಕ್ಕಳಿಗೆ ಮೂಲ ಜಾನಪದ ಹಾಡುಗಳ ಕಲೆ, ಆಟ ಹಾಗೂ ಬಯಲಾಟಗಳ ಪರಿಚಯ ಆಗಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ. ಬಂಡು ಕುಲಕರ್ಣಿ ಹೇಳಿದರು.ಜಾನಪದ ಸಂಶೋಧನಾ ಕೇಂದ್ರ ಹಾಗೂ ಲ್ಯಾಮಿಂಗ್ಟನ್ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಹಯೋಗದಲ್ಲಿ ಒಂದು ತಿಂಗಳು ಕಾಲ ನಡೆದ ಜಾನಪದ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿ, ಅನಕ್ಷರಸ್ಥರ ಅನುಭವದ ಆಳದಿಂದ ಅಭಿವ್ಯಕ್ತಗೊಂಡ ಜಾನಪದ ಹಾಡು, ಕಲೆಗಳನ್ನು ಮಕ್ಕಳು ಸುಂದರವಾಗಿ ಪ್ರಸ್ತುತ ಪಡಿಸಿದರು. ಜೀವನದ ಮೌಲ್ಯ ತಿಳಿಸುವ, ಬದುಕು ಹಸನುಗೊಳಿಸುವ ಜಾನಪದ ಇಂದು ಮರೆಯಾಗಿ ಅಶ್ಲೀಲ ಪದಗಳನ್ನೇ ಜಾನಪದ ಎಂದು ಹಾಡುತ್ತಿರುವುದು ವಿಷಾದನೀಯ ಎಂದರು.
ಲ್ಯಾಮಿಂಗ್ಟನ್ ಶಾಲೆ ಕಾರ್ಯಾಧ್ಯಕ್ಷ ಸುರೇಶ ಕಿಣಿ ಮಾತನಾಡಿ, ಜಾನಪದದಲ್ಲಿ ಇರುವ ಸತ್ವ ಅದ್ಭುತ. ಇದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ವಿಷಯ ಕಡ್ಡಾಯವಾಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಲ್ಯಾಮಿಂಗ್ಟನ್ ಶಾಲೆಯ ಕಾರ್ಯದರ್ಶಿ, ಹಿರಿಯ ಕಲಾವಿದ ಶಶಿಧರ ಸಾಲಿ ಮಾತನಾಡಿ, ಜಾನಪದ ಸಂಶೋಧನ ಕೇಂದ್ರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಜನಪದ ಶಿಬಿರದ ಮೂಲಕ ಈ ರೀತಿಯ ಕಾರ್ಯ ಮಾಡುತ್ತಿರುವುದು ಜಾನಪದ ಕಲೆಗಳ ಉಳಿವಿಗಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಲ್ಯಾಮಿಂಗ್ಟನ್ ಪ್ರಾಥಮಿಕ ಶಾಲೆಯ ಮಕ್ಕಳು ಬಿಸುಕಲ್ಲು ಪದ, ಸೋಬಾನ ಪದ, ಜೋಗುಳ ಪದ ಮತ್ತು ಜಾನಪದ ಆಟಗಳನ್ನು ಪ್ರದರ್ಶಿಸಿದರು. ಬಾಲಕ ಹಾಗೂ ಬಾಲಿಕೆಯರ ಪ್ರೌಢಶಾಲೆಯ ಮಕ್ಕಳು ಹೆಜ್ಜೆ ಮೇಳ, ಗೀಗಿ ಪದ, ಲಾವಣಿ ಪದ, ಹಬ್ಬದ ಹಾಡು, ಜಾನಪದ ನೃತ್ಯ ಸುಗ್ಗಿ ಹಾಡು, ಜೋಕುಮಾರನ ಹಾಡು ಮುಂತಾದವುಗಳನ್ನು ಪ್ರದರ್ಶಿಸಿ ಎಲ್ಲರ ಮನ ಸೆಳೆದರು. ವೇದಿಕೆ ಮೇಲೆ ಪ್ರಾಚಾರ್ಯ ಸುನಿತಾ ಮುಲ್ಕಿಪಾಟೀಲ, ಸೌಮ್ಯ ಪ್ರಭು, ಸುಮಂಗಲ ವರ್ಣೇಕರ ಹಾಗೂ ಶಿಬಿರದ ಸಹ ನಿರ್ದೇಶಕಿ ಮೈನಾ ದೇಸಾಯಿ ಇದ್ದರು. ಗುರು ಕಲ್ಮಠ ಸ್ವಾಗತಿಸಿದರು, ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ನಾಗಭೂಷಣ ಹಿರೇಮಠ ವಂದಿಸಿದರು, ಶಿಕ್ಷಕಿ ಶ್ವೇತಾ ಮುಲ್ಕಿಪಾಟೀಲ್ ನಿರೂಪಿಸಿದರು.