ಪ್ರತಿ ಮನೆಗಳು ಹೃದ್ಯವಾದ ಪುಸ್ತಕ ಪ್ರೀತಿಯನ್ನು ಒಳಗೊಂಡು ಹದವಾದ ಓದಿಗೆ ಉತ್ತೇಜಿಸುವ ಸಂಸ್ಕೃತಿಯನ್ನು ಹೊಂದುವುದು ಈಗಿನ ಕಾಲದ ತೀರ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಮೊಬೈಲ್ ಬಿಡಿಸಿ, ಕೈಯಲ್ಲಿ ಪುಸ್ತಕ ಹಿಡಿಯುವ ಹವ್ಯಾಸಕ್ಕೆ ಬೆಂಬಲಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.
ಹಾನಗಲ್ಲ: ಪ್ರತಿ ಮನೆಗಳು ಹೃದ್ಯವಾದ ಪುಸ್ತಕ ಪ್ರೀತಿಯನ್ನು ಒಳಗೊಂಡು ಹದವಾದ ಓದಿಗೆ ಉತ್ತೇಜಿಸುವ ಸಂಸ್ಕೃತಿಯನ್ನು ಹೊಂದುವುದು ಈಗಿನ ಕಾಲದ ತೀರ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಮೊಬೈಲ್ ಬಿಡಿಸಿ, ಕೈಯಲ್ಲಿ ಪುಸ್ತಕ ಹಿಡಿಯುವ ಹವ್ಯಾಸಕ್ಕೆ ಬೆಂಬಲಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.ಹಾನಗಲ್ಲಿನ ಕುವೆಂಪು ನಗರದ ದೀಪಾ ಪ್ರವೀಣ ಸುಲಾಖೆ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ ಸಂಯುಕ್ತವಾಗಿ ಆಯೋಜಿಸಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪುಸ್ತಕೋದ್ಯಮವನ್ನೂ ಬೆಂಬಲಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಬರಹಗಾರರು, ಪ್ರಕಾಶಕರನ್ನು ಬೆಂಬಲಿಸುವಲ್ಲಿ ಪುಸ್ತಕವನ್ನು ಕೊಂಡು ಓದುವ, ಓದಿ ರಸಗ್ರಹಣ ಮಾಡುವ ಮನಸ್ಸು ನಮ್ಮದಾಗಬೇಕು ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ನಾವು ಜಡತ್ವದಿಂದ ಹೊರಬರಲು ಪುಸ್ತಕ ಸಂಸ್ಕೃತಿ ಬಹುಮುಖ್ಯ. ನಮ್ಮ ಮನೆಗಳು ಒಳ್ಳೆಯ ಸಾಹಿತ್ಯ ಪುಸ್ತಕಗಳಿಂದ ಕಂಗೊಳಿಸಬೇಕು. ಅವನ್ನು ಆಸ್ವಾಧಿಸುವ ಕಡೆ ನಮ್ಮ ಒಲವು ಮೂಡಬೇಕು. ಅದಕ್ಕಾಗಿಹೇ ಇಂತಹ ಕಾರ್ಯಕ್ರಮಗಳಿಗೆ ಹೇಚ್ಚು ಅರ್ಥ ಬರಲು ಸಾಧ್ಯ ಎಂದರು.ಅಶಯ ಮಾತುಗಳನ್ನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ. ನಮ್ಮ ಕಷ್ಟ ನೋವು ಸುಖ ದುಃಖಗಳಲ್ಲಿ ಉತ್ತಮ ಮಾರ್ಗದರ್ಶನ ಮಾಡುವ ಎಲ್ಲ ಸಂಗತಿಗಳು ಸಾಹಿತ್ಯದಲ್ಲಿ ಲಭ್ಯ. ಪುಸ್ತಕದ ಓದು ನಮ್ಮ ಬೌದ್ಧಿಕತೆಯನ್ನು ಹೆಚ್ಚುಸುವುದರ ಜೊತೆಗೆ ಮನೋ ದೌರ್ಬಲ್ಯಗಳನ್ನು ದೂರ ಮಾಡಿ, ಉತ್ಸಾಹಭರಿತ ಜೀವನಕ್ಕೆ ಪ್ರೇರಣೆ ಮಾಡುವ ಶಕ್ತಿ ಸಾಹಿತ್ಯವೂ ಹೌದು ಎಂದರು.ಪೌರ ಕಾರ್ಮಿಕ ಸುಬ್ರಮಣಿ ಮುಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಲಲಿತಾ ಡೂಗೂರಮಠ ಅಧ್ಯಕ್ಷತೆವಹಿಸಿದ್ದರು. ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಿತಿ ಸಂಚಾಲಕ ಎಸ್.ಆರ್. ಹಿರೇಮಠ, ನ್ಯಾಯವಾದಿ ರವಿಬಾಬು ಪೂಜಾರ, ಪುರಸಭೆ ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಪ್ರದೀಪ ಸುಲಾಖೆ, ಪ್ರಾಚಾರ್ಯ ಎಸ್.ಬಿ. ಕಲ್ಲೇರ, ಉಪನ್ಯಾಸಕ ಸುರೇಶ ಹೀರೂರ, ಶಕುಂತಲಾ ಗಣೇಶಗುಡಿ, ಭಾನುಮತಿ ಅರವಿಂದರಾವ ಸುಲಾಖೆ, ಸಂತೋಷ ದೊಡ್ಡಮನಿ, ಅಶೋಕ ದಾಸರ್, ಕಾವೇರಿ ಕಲ್ಲೇರ, ಸಾಗರ ಗಣೇಶಗುಡಿ, ಮಧುಮತಿ ಗೋದೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶೀತಲ್ ಸುಲಾಖೆ, ಸುಜಾತಾ ಕುಂಠೆ ಪ್ರಾರ್ಥನೆ ಹಾಡಿದರು. ದೀಪಾ ಗೋನಾಳ ಸ್ವಾಗತಿಸಿದರು. ಸುರೇಶ ಹೀರೂರ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಸುಲಾಖೆ ವಂದಿಸಿದರು.