ಮೈಸೂರು-ಕೊಡಗಿನ ಪೂರ್ತಿ ಇತಿಹಾಸವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸುವ ಪುಸ್ತಕಗಳ ಕೊರತೆಯಿದೆ. ಅದನ್ನು ಲೇಖಕರು ಬರೆಯಬೇಕು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರು-ಕೊಡಗಿನ ಪೂರ್ತಿ ಇತಿಹಾಸವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸುವ ಪುಸ್ತಕಗಳ ಕೊರತೆಯಿದೆ. ಅದನ್ನು ಲೇಖಕರು ಬರೆಯಬೇಕು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ನಗರದ ಕೊಡವ ಸಮಾಜದಲ್ಲಿ ಶನಿವಾರ ಲೇಖಕ ಮೋಟನಾಳಿರ ಸೊಮಯ್ಯ ಅವರ ‘ದಿವ್ಯ ಜೀವನ ಭವ್ಯ ಮಾನವ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮೈಸೂರು-ಕೊಡಗಿನ ಅದ್ಭುತ ಇತಿಹಾಸ, ಸತ್ಯ ಸಂಗತಿಗಳು ಪುರಾತತ್ವ ಇಲಾಖೆಯ ದಾಖಲೆಗಳಲ್ಲಿವೆ. ಅವುಗಳನ್ನು ಓದಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಷ್ಟವಾಗುತ್ತದೆ. ಹೀಗಾಗಿ, ಅವುಗಳನ್ನು ಸರಳವಾಗಿ ಅರ್ಥೈಸಬೇಕಿದೆ ಎಂದರು.

ಸ್ಕಂದ ಪುರಾಣದ ಕಾವೇರಿ ಮಹಿಮೆಯಿಂದ ಹಿಡಿದು ಮತ್ಸ್ಯದೇಶವಾಗಿ ಸಾಂಸ್ಕೃತಿಕ ಇತಿಹಾಸ, ಚಂದ್ರವರ್ಮ, ಕದಂಬರು, ಚಂಗಾಳ್ವರು, ಕೊಂಗಾಳ್ವರು ಆಳುತ್ತಿರುವ ಸಂದರ್ಭದಲ್ಲಿ ಕರಾವಳಿ ಭಾಗದ ನಾಯಕರ ಜೊತೆ ಉತ್ತಮ ಸಂಬಂಧ ಮತ್ತು ಹೊಂದಾಣಿಕೆ ಹೊಂದಿದ್ದರು. ತಮ್ಮದೇ ಆದ ಸ್ವಾಯತ್ತತೆ ಇಟ್ಟುಕೊಂಡು, ರಾಜ್ಯದ ಮುಖ್ಯ ಭಾಗವನ್ನು ಆಳುತ್ತಿದ್ದ ರಾಜರ ಜೊತೆ ರಾಜತಾಂತ್ರಿಕ ಸಂಬಂಧ ಮತ್ತು ಪರಸ್ಪರರ ರಕ್ಷಣೆ ಮಾಡಿಕೊಳ್ಳಲು ಅನುಸರಿಸುತ್ತಿದ್ದ ಕ್ರಮಗಳ ಕುರಿತಾದ ಇತಿಹಾಸದ ಪುಸ್ತಕದ ಅಗತ್ಯವಿದೆ ಎಂದು ಯದುವೀರ್ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಎ. ಎಸ್. ಪೊನ್ನಣ್ಣ, ನಿವೃತ್ತ ಲೆಫ್ಟಿನೆಂಟ್ ಜನರಲ್ ಪುತ್ತಿಚಂಡ ಗಣಪತಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.