ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ, ಹಣ್ಣು ಖರೀದಿ ಜೋರು.

| Published : Aug 05 2025, 11:45 PM IST

ಸಾರಾಂಶ

ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆ ನಡುವೆಯೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹಬ್ಬ ಇನ್ನೂ ಮೂರು ದಿನ ಇರುವಾಗಲೇ ಹೂವಿನ ಬೆಲೆ ವಿಪರೀತ ಏರಿಕೆಯಾಗಿದೆ. ಹೂವಿನ ದರ ಜತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಈಗಾಗಲೇ ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೂವಿನ ಬೆಲೆ ಗಗನ ಮುಟ್ಟಿದೆ. ಹಣ್ಣುಗಳು ಹಾಗೂ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಈಗಲೇ ಖರೀದಿ ಜೋರಾಗಿದ್ದು, ನಗರದ ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು. ಮಂಗಳವಾರ ಸೇವಂತಿಗೆ ಹೂವು ಒಂದು ಕೆಜಿಗೆ 300 ರಿಂದ 400ರ ವರೆಗೆ ಮಾರಾಟವಾಗಿದೆ. ಗುರುವಾರದ ವೇಳೆಗೆ ಇನ್ನೂ ದುಬಾರಿಯಾಗಲಿದೆ.

ವಿವಿಧ ಹೂ ದರ ಗಗನಕ್ಕೆ

ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 150-200 ರೂ.ಗಳೊಳಗಿದ್ದುದು ಮಂಗಳವಾರದಂದು ಕೆ.ಜಿ. ಮಲ್ಲಿಗೆ ಹೂವು ರೂ 1000 ರೂ. ದಾಟಿತ್ತು. 400-500 ರೂ. ಇದ್ದ ಕನಕಾಂಬರ ಹೂವು 1400-2000ರೂ, ಮಳ್ಳೆ ಹೂ ಕೆಜಿಗೆ 1000-1200 ರೂ.ಗೆ ತಲುಪಿದೆ. ಕಳೆದ ವರ್ಷ ಮಳೆ ಹೆಚ್ಚಾಗಿ ಬಿದ್ದಿರುವುದರಿಂದ ತಾವರೆ ಹೂವಿಗೆ ಕೊರತೆಯಿಲ್ಲ, ಬೆಲೆಯೂ ಕಡಿಮೆಯಾಗಬೇಕಿತ್ತು. ಆದರೆ, ಅದೂ ಕಡಿಮೆ ಇಲ್ಲ. ಯಾಕಂದರೆ ಲಕ್ಷ್ಮೀ ಹಬ್ಬಕ್ಕೆ ತಾವರೆ ಹಾಗೂ ಕೇದಗೆ ಬಹುಮುಖ್ಯವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ತಾವರೆ ಹೂವಿನ ಬೆಲೆ 30-50 ರೂ. ಹಾಗೂ ಕೇದಗೆ 70-120 ರೂ. ಮೀರಿದೆ.ಹಬ್ಬಕ್ಕೆ ಮುನ್ನವೆ ಬೆಲೆ ಏರಿಕೆ

ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆ ನಡುವೆಯೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹಬ್ಬ ಇನ್ನೂ ಮೂರು ದಿನ ಇರುವಾಗಲೇ ಹೂವಿನ ಬೆಲೆ ವಿಪರೀತ ಏರಿಕೆಯಾಗಿದೆ. ಹೂವಿನ ದರ ಜತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.ಸೇಬು ಕೆ.ಜಿ ರೂ200ರಿಂದ 250, ಮರಸೇಬು 150-180,ಸಪೋಟ 160, ಪೈನಾಪಲ್ 20ರಿಂದ 70ಕ್ಕೆ, ಸೀಬೆ 60-80ಕ್ಕೆ ,ಮೂಸಂಬಿಯ ಬೆಲೆ 70-150 ರೂ. ದಾಟಿದೆ.

ಹಬ್ಬ ಸಮೀಪಿಸುತ್ತಿದ್ದಂತೆ ಬೆಲೆ ಏರಿಕೆಯಾಗಬಹುದು ಎಂಬ ಆತಂಕದಿಂದ ಮುಂಚಿತವಾಗಿ ಅಗತ್ಯ ಸಾಮಗ್ರಿ ಖರೀದಿಗೆ ಜನರು ಮುಂದಾಗಿದ್ದಾರೆ.