ದಾವಣಗೆರೆ ಕ್ಷೇತ್ರದಲ್ಲಿ ಈಗ ಬದಲಾವಣೆ ಗಾಳಿ: ವಿನಯಕುಮಾರ್

| Published : Apr 25 2024, 01:06 AM IST

ಸಾರಾಂಶ

ಪಕ್ಷೇತರ ಅಭ್ಯರ್ಥಿ ಗೆಲ್ಲಲು ಅಸಾಧ್ಯ, ಚುನಾವಣೆಗೆ ನಿಲ್ಲಬೇಡ ಎಂದು ಕೆಲವರು ಹೇಳಿದ್ದು ನಿಜ. ಆದರೂ, ಇದೀಗ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ನನ್ನ ಪರ ಮತದಾರರ ಒಲವು ವ್ಯಕ್ತವಾಗುತ್ತಿದ್ದು, ಇದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸೋಲಲಿ, ಗೆಲ್ಲಲಿ ನಿಮ್ಮ ಜೊತೆ ಇರುತ್ತೇನೆ ಎಂದ ಪಕ್ಷೇತರ ಅಭ್ಯರ್ಥಿ । ಗೃಹ ಕಚೇರಿಯಲ್ಲಿ ಸಭೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪಕ್ಷೇತರ ಅಭ್ಯರ್ಥಿ ಗೆಲ್ಲಲು ಅಸಾಧ್ಯ, ಚುನಾವಣೆಗೆ ನಿಲ್ಲಬೇಡ ಎಂದು ಕೆಲವರು ಹೇಳಿದ್ದು ನಿಜ. ಆದರೂ, ಇದೀಗ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ನನ್ನ ಪರ ಮತದಾರರ ಒಲವು ವ್ಯಕ್ತವಾಗುತ್ತಿದ್ದು, ಇದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದರು.

ನಗರದ ಎಸ್‌.ಎಸ್‌. ಬಡಾವಣೆಯ ಗೃಹ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರದ ವಿವಿಧ ತಾಲೂಕುಗಳ ಮುಖಂಡರು, ಬೆಂಬಲಿಗರು, ಕಾರ್ಯಕರ್ತರ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾಸ್‌ ಸಿಲಿಂಡರ್ ಚಿಹ್ನೆ ಸಿಕ್ಕಿದ್ದು, ಅಂತಿಮ ಕಣದಲ್ಲಿ ಉಳಿದ ಬಳಿಕ ಬಿಡುವಿಲ್ಲದಂತೆ ಕರೆಗಳು ಬರುತ್ತಿವೆ. ಕಚೇರಿಗೆ ಬಂದು ಬೆಂಬಲಿಸುತ್ತಿರುವರು, ನಮ್ಮೊಂದಿಗೆ ಇರುವುದಾಗಿ ಕರೆ ಮಾಡಿ, ಮೌಖಿಕವಾಗಿ ಭರವಸೆ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ದೊಡ್ಡ ಮುಖಂಡರು ಯಾರ ಮನೆಗೆ ಹೋಗಿ ಸೇರುತ್ತಾರೆಂಬುದು ಮುಖ್ಯವಲ್ಲ. ಜನರ ಒಲವು ಯಾರ ಪರ ಇದೆಯೆಂಬುದು ಮುಖ್ಯ. ನೀವೆಲ್ಲರೂ ಬಹಿರಂಗವಾಗಿ ಬಂದು, ಬೆಂಬಲ ಸೂಚಿಸುತ್ತಿದ್ದೀರಿ. ಇಲ್ಲಿಗೆ ಬಾರದೇ, ಕೆಲಸ ಮಾಡುವ ಮುಖಂಡರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಶಾಲು ಹಾಕಿಸಿಕೊಂದು, ಹೋದವರೂ ನನ್ನ ಪರವಾಗಿಯೇ ಇದ್ದಾರೆ. ಟಿಕೆಟ್ ತಂದಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಶೇ.99ರಷ್ಟು ಜನರಿಗೆ ಇಷ್ಟವಿಲ್ಲ. ತತ್ವ, ಸಿದ್ಧಾಂತಕ್ಕೆ ಒಪ್ಪಿದವರು ಅನಿವಾರ್ಯವಾಗಿ ಕೆಲಸ ಮಾಡಿದ್ದಾರೆ. ಆದರೆ, ಅಂಥವರ ಮನವೂ ಬದಲಾವಣೆ ಬಯಸುತ್ತಿದೆ ಎಂದರು.

ಚನ್ನಗಿರಿ, ಹೊನ್ನಾಳಿ, ಜಗಳೂರು, ಮಾಯಕೊಂಡ, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ- ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಂದ ಬಂದಿರುವ ಎಲ್ಲ ಮುಖಂಡರು, ಹಿತೈಷಿಗಳು, ಬೆಂಬಲಿಗರ ಪ್ರೋತ್ಸಾಹದ ಮಾತುಗಳು ಉತ್ಸಾಹ ಹೆಚ್ಚಿಸಿವೆ. ಸಿಲಿಂಡರ್ ಗುರುತು ಸಿಕ್ಕ ಹಿನ್ನೆಲೆ ಮತದಾರರ ಮನವೊಲಿಸಲು ಯಾವೆಲ್ಲಾ ಯೋಜನೆ ಹಾಕಿಕೊಳ್ಳಬೇಕು, ಪ್ರಚಾರದ ವೈಖರಿ ಹೇಗಿರಬೇಕು, ಚಿಹ್ನೆ ಕುರಿತಂತೆ ಹೇಗೆ ಜಾಗೃತಿ ಮೂಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಯಾವ ರೀತಿ ಶ್ರಮಿಸಬೇಕು, ಮನಮುಟ್ಟುವ ಚರ್ಚಿಸಿದ್ದು, ಈಗಿನಿಂದಲೇ ನಾವೆಲ್ಲರೂ ಕಾರ್ಯೋನ್ಮುಖರಾಗೋಣ ಎಂದು ತಿಳಿಸಿದರು.

- - -

ಕೋಟ್‌ ನೀವು ಇಷ್ಟಪಡುವ ಅಭ್ಯರ್ಥಿ ಟಿಕೆಟ್ ಪಡೆದು, ರಾಜಕಾರಣದಲ್ಲಿ ದುಡ್ಡು ಕೊಟ್ಟು ಮತ ಪಡೆಯುವ ಪದ್ಧತಿ ನಿರ್ಮೂಲನೆ ಆಗಬೇಕು. ಆಗ ಅಭಿವೃದ್ಧಿ ಸಾಧ್ಯ. ಸೋಲಲಿ, ಗೆಲ್ಲಲಿ ನಿಮ್ಮ ಜೊತೆ ಇರುತ್ತೇನೆ. ಎರಡೂ ಹಾದಿಯ ಮೂಲಕ ಹಾದುಹೋದಾಗ ಮಾತ್ರ ನಿಜವಾದ ಬೆಳವಣಿಗೆ ಸಾಧ್ಯ. ಆಗ ಪಕ್ವತೆ ಬರುತ್ತದೆ

- ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ

- - - -23ಕಡಿವಿಜಿ4:

ದಾವಣಗೆರೆ ಗೃಹ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಲೋಕಸಭಾ ಕ್ಷೇತ್ರದ ಮುಖಂಡರು, ಬೆಂಬಲಿಗರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.