ಎತ್ತಿನಹೊಳೆ ಯೋಜನೆಗೆ ಜೆಡಿಎಸ್‌ ಬಿಜೆಪಿ ಕೊಡುಗೆಯೂ ಇದೆ : ಮಾಜಿ ಶಾಸಕ ಕೆ.ಎಸ್. ಲಿಂಗೇಶ್

| Published : Sep 06 2024, 01:02 AM IST / Updated: Sep 06 2024, 07:05 AM IST

ಎತ್ತಿನಹೊಳೆ ಯೋಜನೆಗೆ ಜೆಡಿಎಸ್‌ ಬಿಜೆಪಿ ಕೊಡುಗೆಯೂ ಇದೆ : ಮಾಜಿ ಶಾಸಕ ಕೆ.ಎಸ್. ಲಿಂಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

: ಎತ್ತಿನಹೊಳೆ ಯೋಜನೆಯು ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ ಎನ್ನುವಂತೆ ಹಾಲಿ ಕಾಂಗ್ರೆಸ್‌ ಸರ್ಕಾರ ತೋರಿಸಿಕೊಳ್ಳುತ್ತಿದೆ. ಆದರೆ, ಈ ಯೋಜನೆಗೆ ಜೆಡಿಎಸ್‌ ಹಾಗೂ ಬಿಜೆಪಿ ಸರ್ಕಾರಗಳ ಕೊಡುಗೆಯೂ ಇದೆ

  ಹಾಸನ : ಎತ್ತಿನಹೊಳೆ ಯೋಜನೆಯು ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ ಎನ್ನುವಂತೆ ಹಾಲಿ ಕಾಂಗ್ರೆಸ್‌ ಸರ್ಕಾರ ತೋರಿಸಿಕೊಳ್ಳುತ್ತಿದೆ. ಆದರೆ, ಈ ಯೋಜನೆಗೆ ಜೆಡಿಎಸ್‌ ಹಾಗೂ ಬಿಜೆಪಿ ಸರ್ಕಾರಗಳ ಕೊಡುಗೆಯೂ ಇದೆ. ಹಾಗೆಯೇ ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಜೆಡಿಎಸ್‌ ನಾಯಕರನ್ನು ಕರೆಯದೆ ಔಪಚಾರಿಕತೆ ಮರೆತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾದ ಕೆ.ಎಸ್. ಲಿಂಗೇಶ್ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಈ ಯೋಜನೆಗೆ ಕಾಂಗ್ರೆಸ್ ಪಕ್ಷದಿಂದ ಶಂಕುಸ್ಥಾಪನೆ ಮಾಡಿರುವುದು ನಿಜ. ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಇದಾದ ಮೇಲೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವೇಳೆ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲೂ ಈ ಕಾಮಗಾರಿಗೆ ಹಣ ಬಿಡುಗಡೆ, ಜಮೀನು ಸ್ವಾಧೀನ ಇರಬಹುದು, ಪ್ರತಿ ಹಂತದಲ್ಲೂ ಸಹ ಎಲ್ಲಾ ಸರ್ಕಾರಗಳು ತಮ್ಮದೆ ಆದ ಕಾಣಿಕೆ ನೀಡಿವೆ. ಆದರೆ ಈ ಸರ್ಕಾರ ಇಡೀ ಯೋಜನೆ ತಮ್ಮಿಂದಲೇ ಆಗಿರುವುದು ಎನ್ನುವಂತೆ ಬಿಂಬಿಸಲು ಹೊರಟಿದೆ ಎಂದು ಆಕ್ಷೇಪಿಸಿದರು.

ಅಪೂರ್ಣ ಕಾಮಗಾರಿ: ಈ ಯೋಜನೆಯ ಒಟ್ಟಾರೆ 261 ಕಿ. ಮೀ.ನಾಲೆಯಲ್ಲಿ 161 ಕಿ. ಮೀ. ಪೂರ್ಣಗೊಳಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆರೆ, ಇದು ಸುಳ್ಳು. ಇನ್ನು ಆಲೂರು, ಐದಳ್ಳ ಬಳಿಯೇ ನಾಲೆ ಪೂರ್ಣಗೊಂಡಿಲ್ಲ. 

ಅರಸೀಕೆರೆ ತಾಲೂಕಿಗೇ ನೀರು ಹರಿಯಲಾಗುವುದಿಲ್ಲ. ಹೀಗಿರುವಾಗ ಹಿರಿಯೂ ತಾಲೂಕಿನ ವಾಣಿವಿಲಾಸ ಸಾಗರಕ್ಕೆ ನೀರು ತುಂಬಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇದು ಶುದ್ಧ ಸುಳ್ಳು. ಬೇಲೂರು ಹಳೇಬೀಡು ಭಾಗದಲ್ಲಿ ಈ ವರ್ಷ ನೈಸರ್ಗಿಕವಾಗಿಯೇ ಸಾಕಷ್ಟು ಮಳೆಯಾಗಿದೆ. ಈ ಭಾಗದ ನೀರು ವೇದಾ ಕಣಿವೆ ಹಾಗೂ ಮಾರಿ ಕಣಿವೆ ಮೂಲಕ ವಿವಿ ಸಾಗರಕ್ಕೆ ಹೋಗುತ್ತಿದೆ. ಇದು ಎತ್ತಿನಹೊಳೆ ಯೋಜನೆಯಿಂದಾಗಿ ತುಂಬಿರುವುದಲ್ಲ ಎಂದು ಹೇಳಿದರು.

ಮಾಜಿ ಶಾಸಕ ಎಚ್ಕೆಕೆ ಆಕ್ಷೇಪ

ಕಾರ್ಯಕ್ರಮಕ್ಕೆ ಇಡೀ ಸಚಿವ ಸಂಪುಟವೇ ಹಾಸನಕ್ಕೆ ಬರುತ್ತಿದ್ದು ಕೇವಲ ತಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಲು ಹೊರಟಿರುವುದು ಖಂಡನೀಯ. ತಾನು ಶಾಸಕರಾಗಿದ್ದ ವೇಳೆ ಎತ್ತಿನಹೊಳೆ ಯೋಜನೆಗೆ ಜಾಗ ಬಿಟ್ಟುಕೊಡಲು ರೈತರ ವಿರೋಧ ಇದ್ದ ವೇಳೆ ಅವರ ಮನವೊಲಿಸಿ ಜಾಗ ಬಿಡಿಸಿ ಕೊಟ್ಟಿದ್ದೇವೆ. ಜೊತೆಗೆ ಕಾಮಗಾರಿಗೆ ಕೂಡ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ಆದರೆ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನ ಮಾಡುವುದಾಗಲಿ ಅಥವಾ ಗೌರವಿಸುವುದಾಗಲಿ ಮಾಡಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಕೂಡ ರಾಜಕಾರಣ ಮಾಡಲಾಗುತ್ತಿದೆ. 

ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಆದರೆ ಜನರ ಕಣ್ಣಿಗೆ ಮಣ್ಣೆರಚಿ ಕಾಮಗಾರಿ ಮುಕ್ತಾಯವಾಗಿದೆ ಎಂಬ ಭಾವನೆಯನ್ನು ಮೂಡಿಸುವ ಹುನ್ನಾರ ಮಾಡಿದೆ ಎಂದು ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಚ್‌.ಕೆ.ಕುಮಾರಸ್ವಾಮಿ ದೂರಿದರು. ನಾನು ಎಂದು ಕೂಡ ಈ ರೀತಿಯ ಆಹ್ವಾನ ಪತ್ರಿಕೆಯನ್ನು ನೋಡಿರಲಿಲ್ಲ. ಇದರಲ್ಲಿ ೩೩ ಜನ ಮಂತ್ರಿಗಳ ಹೆಸರು ಇದೆ. ಒಂದು ಆಹ್ವಾನ ಪತ್ರಿಕೆಯಲ್ಲಿ ಯಾರ್ಯಾರ ಹೆಸರು ಎಲ್ಲೆಲ್ಲಿ ಹಾಕಬೇಕು ಎನ್ನುವ ನಿಯಮವಿದ್ದು, ಆಯಾ ಜಿಲ್ಲೆ ಕಾರ್ಯಕ್ರಮವಾದಾಗ ಅಲ್ಲಿನ ಸಂಸದರ ಹೆಸರನ್ನು ಮೇಲೆ ಹಾಕಬೇಕು. ಆದರೇ ೫೮ನೇ ಹೆಸರಲ್ಲಿ ಜಿಲ್ಲೆಯ ಸಂಸದ ಶ್ರೇಯಸ್‌ ಅವರ ಹೆಸರನ್ನು ಹಾಕಲಾಗಿದೆ. ಸಂಬಂಧ ಇಲ್ಲದವರ ಹೆಸರು ಕೂಡ ಇಲ್ಲಿ ಹಾಕಲಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಾಸನ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಬೇಲೂರು ತಾಲೂಕು ಯುವ ಮುಖಂಡ ಸಿದ್ದೇಶ್ ಇದ್ದರು.