ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ಒತ್ತಾಯವೂ ಇದೆ

| Published : Aug 22 2024, 12:59 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಾಮರಾಜನಗರಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ಒತ್ತಾಯವೂ ಇದೆ, ಪ್ರಾಧಿಕಾರ ರಚನೆಗೆ ಬಹಳ ಹಿಂದಿನಿಂದಲೂ ಪ್ರಸ್ತಾವನೆ ಕೂಡ ಇದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ಒತ್ತಾಯವೂ ಇದೆ, ಪ್ರಾಧಿಕಾರ ರಚನೆಗೆ ಬಹಳ ಹಿಂದಿನಿಂದಲೂ ಪ್ರಸ್ತಾವನೆ ಕೂಡ ಇದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರ ರಚನೆಗೆ ಬಹಳ ಹಿಂದಿನಿಂದಲೂ ಪ್ರಸ್ತಾವನೆ ಇದೆ. ಜನರಿಂದಲೂ ಒತ್ತಾಯ ಇದ್ದಿದ್ದರಿಂದ ಪ್ರಾಧಿಕಾರ ರಚನೆ ಮಾಡಿದ್ದೇವೆ. ಆದರೆ, ರಾಜಮನೆತನದವರು ಕೋರ್ಟ್‌ಗೆ ಹೋಗಿದ್ದು, ಈಗ ಯಥಾಸ್ಥಿತಿ ಇದ್ದು ಹೆಚ್ಚು ಮಾತನಾಡಲ್ಲ ಎಂದರು.

ಕಾಂಗ್ರೆಸ್ ಪ್ರತಿಭಟನೆ ವೇಳೆ ಸಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ದಹನ ಮಾಡಿ ಅವಮಾನ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಕಿಡಿಕಾರಿದ ಅವರು, ಬಿಜೆಪಿಯವರೇ ಮಾಡಿ ನಮ್ಮ ಮೇಲೆ ಎತ್ತಿ ಹಾಕಿರಬಹುದು, ಆರೋಪ ಮಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲಾ. ನಮ್ಮವರು ಯಾರೂ ಸಹ ಅವ್ಯಾಚ ಶಬ್ದ ಬಳಸಿಲ್ಲ ಎಂದು ಹೇಳಿದರು.

ರಾಜ್ಯಪಾಲರಿಗೆ ಅವಮಾನ ಮಾಡುವ ಕೆಲಸ ನಮ್ಮ ಮಂತ್ರಿಗಳಾಗಲಿ, ಕಾರ್ಯಕರ್ತರಾಗಲಿ ಮಾಡಿಲ್ಲ. ಬಿಜೆಪಿಯವರೇ ಮಾಡಿ ನಮ್ಮ ಮೇಲೆ ಹಾಕ್ತಿದ್ದಾರೆ, ರಾಜ್ಯಪಾಲರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ತಿಲ್ಲ, ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ ಎಂದು ನಮ್ಮವರು ಹೇಳಿದ್ದಾರೆ ಅಷ್ಟೇ, ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದರೆ ಅದು ತಪ್ಪು, ಈ ಕೆಲಸ ಯಾರೇ ಮಾಡಿದ್ದರೂ ತಪ್ಪು. ಭೂತ ದಹ‌ನ ಸಹಜ ಪ್ರಧಾನಮಂತ್ರಿ, ಮುಖ್ಯಮಂತ್ರಿ ರಾಜ್ಯಪಾಲರು ಹೀಗೆ ಎಲ್ಲರ ಭೂತದಹನ ಮಾಡುವುದು ಸಾಮಾನ್ಯ ರಾಜ್ಯಪಾಲರು ಮಾಡಿದ ತಪ್ಪನ್ನು ಎತ್ತಿತೋರಿಸುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿಕೆ ಕೊಟ್ಟರು‌.