ಔಷಧಿ, ಲಸಿಕೆಯಿದೆ, ಕೋವಿಡ್‌ ಆತಂಕ ಬೇಡ

| Published : Dec 27 2023, 01:31 AM IST / Updated: Dec 27 2023, 01:32 AM IST

ಸಾರಾಂಶ

ಈ ವರ್ಷದ ಕೊನೆಯಲ್ಲಿ ಕೇರಳದ 65 ವೃದ್ಧೆಯರಲ್ಲಿ ಕೋವಿಡ್ ರೂಪಾಂತರ ತಳಿ ಪತ್ತೆಯಾಗಿದ್ದು, ಮತ್ತೆ ಈ ಭಯಾನಕ ರೋಗ ಎಲ್ಲಿ ಜನರಿಗೆ ಬಾಧಿಸುತ್ತದೆ ಎಂಬ ಆತಂಕ ಎಲ್ಲರಲ್ಲೂ ಎದುರಾಗಿದೆ.

- ಕೊರೋನಾ ಮೂರು ಅಲೆಯಿಂದ ಎಚ್ಚೆತ್ತಿರುವ ಕೇಂದ್ರ, ರಾಜ್ಯ ಸರ್ಕಾರ

- ಆಕ್ಸಿಜನ್, ವೆಂಟಿಲೇಟರ್‌ಗೂ ಸಮಸ್ಯೆ ಇಲ್ಲ

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಇನ್ನೇನು ಕೋವಿಡ್ ಕಾಣೆಯಾಯ್ತು ಎನ್ನುವಷ್ಟರಲ್ಲಿ ಮತ್ತೆ ಕೋವಿಡ್ ರೂಪಾಂತರಿ ತಳಿಯ ಸುದ್ದಿಯಾಗುತ್ತಿದೆ. ಈ ತಳಿಯ ಸೋಂಕು ಜಿಲ್ಲೆಯಲ್ಲಿ ಇನ್ನೂ ಪತ್ತೆಯಾಗದೇ ಇದ್ದರೂ ಸರ್ಕಾರದ ಮುನ್ಸೂಚನೆಯಂತೆ ಜಿಲ್ಲಾಡಳಿತ ಎಚ್ಚರಿಕೆ ಕ್ರಮಗಳತ್ತ ಕಾರ್ಯೋನ್ಮುಖವಾಗಿದೆ.

2022ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಮುಕ್ತ ಜಗತ್ತು ಎಂದು ಘೋಷಣೆ ಮಾಡಿದರೂ ಮತ್ತೆ ತನ್ನ ವ್ಯಾಪ್ತಿಯನ್ನು ಕೋವಿಡ್‌ ಸೋಂಕು ಹರಡುತ್ತಿರುವುದು ಸೋಜಿಗದ ಸಂಗತಿ. ಈ ವರ್ಷದ ಕೊನೆಯಲ್ಲಿ ಕೇರಳದ 65 ವೃದ್ಧೆಯರಲ್ಲಿ ಕೋವಿಡ್ ರೂಪಾಂತರ ತಳಿ ಪತ್ತೆಯಾಗಿದ್ದು, ಮತ್ತೆ ಈ ಭಯಾನಕ ರೋಗ ಎಲ್ಲಿ ಜನರಿಗೆ ಬಾಧಿಸುತ್ತದೆ ಎಂಬ ಆತಂಕ ಎಲ್ಲರಲ್ಲೂ ಎದುರಾಗಿದೆ. ಆದರೆ, ಸಾಂಕ್ರಾಮಿಕ ರೋಗ ತಜ್ಞರು ಇದನ್ನು ಅಲ್ಲಗಳೆದು, ಈ ರೋಪಾಂತರ ಜೆಎನ್.1 ತಳಿಯು ತೀವ್ರತರ ಪರಿಣಾಮ ಮುಟ್ಟುವುದಿಲ್ಲ ಎಂಬ ಆಶಾದಾಯಕ ಹೇಳಿಕೆ ನೀಡಿದ್ದಾರೆ ಎನ್ನುವುದು ಸಮಾಧಾನದ ಸಂಗತಿ.

ಈಗಾಗಲೇ ಕೋವಿಡ್‌-19 ಮೂರು ಅಲೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಎರಡು ಅಲೆಗಳಲ್ಲಿ ಧಾರವಾಡ ಜಿಲ್ಲೆಯ ಸಾಕಷ್ಟು ವೈದ್ಯರು, ನರ್ಸ್‌ಗಳು ಕೋವಿಡ್‌ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದ ರೂಪಾಂತರ ತಳಿಯ ಆಗಮನ ವಿಷಯವಾಗಿ ಅವರು ಮುಕ್ತವಾಗಿ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.

2020ರ ಮಾರ್ಚ್ 23ರಂದು ಕೋವಿಡ್‌ ಸೋಂಕು ಧಾರವಾಡ ಪ್ರವೇಶ ಮಾಡಿದಾಗ ಎಲ್ಲರಲ್ಲೂ ಆತಂಕ. ಆದರೆ, ಹೆಚ್ಚಿನ ಆತಂಕ ಇದಿದ್ದು ವೈದ್ಯಕೀಯ ಲೋಕಕ್ಕೆ. ಸೋಂಕಿಗೆ ಚಿಕಿತ್ಸೆ ನೀಡಿದರೆ ಅದು ನಮ್ಮ ಜೀವಕ್ಕೂ ಅಪಾಯ ಎನ್ನುವ ಸಾಮಾನ್ಯ ಜ್ಞಾನ ಇತ್ತಾದರೂ ಸಾಮಾಜಿಕ ಚಿಂತನೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್‌ ಹಾಗೂ ಇತರರು ಕೋವಿಡ್‌ ವಿರುದ್ಧ ಹೋರಾಡಿ ಗೆದ್ದೆವು. ಕೋವಿಡ್‌ ಮೊದಲ ಅಲೆಯಲ್ಲಿಯೇ ತಮ್ಮ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿದ್ದರು. ನಮ್ಮದು ಮಕ್ಕಳ ಆಸ್ಪತ್ರೆಯಾದರೂ ಅನಿವಾರ್ಯವಾಗಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿವಾರ್ಯತೆ ಉಂಟಾಗಿತ್ತು. ಕೋವಿಡ್‌ ಸೋಂಕಿಗೆ ಯಾವ ಚಿಕಿತ್ಸೆಯೂ ಇರಲಿಲ್ಲ. ಆರೋಗ್ಯ ಕವಚ ಇರಲಿಲ್ಲ. ಮಾಸ್ಕ್‌, ಸ್ಯಾನಿಟೈಜರ್‌, ಸೋಂಕಿಗೆ ಏನು ಚಿಕಿತ್ಸೆ ಏನೆಂಬುದೇ ಗೊತ್ತಿರಲಿಲ್ಲ. ಸಾವು-ನೋವು ನಮ್ಮ ಮನಸ್ಸಿಗೂ ತೀವ್ರ ಆತಂಕ ಸೃಷ್ಟಿಸಿತ್ತು ಎನ್ನುತ್ತಾರೆ ವಿಠ್ಠಲ್‌ ಮಕ್ಕಳ ಆಸ್ಪತ್ರೆಯ ವೈದ್ಯ ಡಾ. ಕವನ ದೇಶಪಾಂಡೆ.

ಎರಡು ತಿಂಗಳ ನಂತರ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಹಾಗೂ ಏಮ್ಸ್ ವೈದ್ಯರ ತಂಡ ಕೋವಿಡ್ -19 ಚಿಕಿತ್ಸೆಯ ಪ್ರೋಟೋಕಾಲ್ ಪ್ರಕಟಣೆ ಮಾಡಿತು. ಆಗ ತುಸು ಸಮಾಧಾನ. ನಂತರದಲ್ಲಿ ಒಂದೊಂದಾಗಿ ಮಾರ್ಗಸೂಚಿಗಳ ಅನ್ವಯ ಸೋಂಕಿತರು ಗುಣಮುಖರದರು. 2ನೇ ಅಲೆಯಲ್ಲಿ ವೆಂಟಿಲೇಟರ್‌ ಸಮಸ್ಯೆ ಉಂಟಾದರೂ ದೀರ್ಘ ಸಮಸ್ಯೆಯಾಗಿ ಉಳಿಯಲಿಲ್ಲ. ಇನ್ನು, ಮೂರು ಮತ್ತು 4ನೇ ಅಲೆಯ ಹೊತ್ತಿಗೆ ಶೇ. 100ರಷ್ಟು ಜನರು ಎರಡು ಡೋಸ್‌ ಚುಚ್ಚುಮದ್ದು ಪಡೆದಿದ್ದರು. ಜೊತೆಗೆ ರೋಗಕ್ಕೆ ಏನು ಚಿಕಿತ್ಸೆ ನೀಡಬೇಕೆಂಬ ಮಾರ್ಗಸೂಚಿ ಇತ್ತು. ಔಷಧಿ ವ್ಯವಸ್ಥೆಯೂ ಇದೆ. ಹೀಗಾಗಿ, ಈ ಅಲೆಯಲ್ಲಿ ಜನರು ಪರದಾಡುವ ಸ್ಥಿತಿ ಏನಿಲ್ಲ ಎಂದರು.

ಕೋವಿಡ್‌ನಿಂದ ಪಾಠ ಕಲಿತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿವೆ. ಗರಿಷ್ಠ ಸಂಖ್ಯೆಯಲ್ಲಿ ವೆಂಟಿಲೇಡೆಟ್‌ ಬೆಡ್‌ಗಳು, ಆಕ್ಸಿಜನ್ ಮಾಸ್ಕಗಳ ಕೊರತೆಯನ್ನು ನೀಗಿಸಿವೆ. ಪ್ರತಿ ಸರ್ಕಾರಿ ಆಸ್ಪತ್ರೆ ಕೋವಿಡ್ ರೋಗಿಗಳಾಗಿಯೇ ಪ್ರತ್ಯೇಕ ವಾರ್ಡಗಳನ್ನು ಸ್ಥಾಪಿಸಿವೆ. ಆದರೂ ಜನರು ಚಳಿಗಾಲದ ಹಿನ್ನೆಲೆಯಲ್ಲಿ ಹೃದಯರೋಗ, ಕ್ಯಾನ್ಸರ್ ರೋಗಿಗಳು, ಬಾಣಂತಿಯರು, ತಾಯಂದಿರು ಹಾಗೂ ಹಿರಿಯ ನಾಯಕರು ತುಸು ಎಚ್ಚರಿಕೆಯಿಂದ ಇದ್ದರೆ ಈ ರೋಗವನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ಡಾ. ಹಳ್ಳಿಕೇರಿ ಹೇಳುತ್ತಾರೆ.

ಕೋವಿಡ್ ರೂಪಾಂತರ ತಳಿ ಹಿನ್ನೆಲೆಯಲ್ಲಿ ಪ್ರತಿ ದಿನ 70 ಜನರ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಯಾವುದೇ ಪಾಸಿಟಿವ್‌ ಪ್ರಕರಣಗಳಿಲ್ಲ. ಹುಬ್ಬಳ್ಳಿಯ ಕಿಮ್ಸ್‌ ಮತ್ತು ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‌ ಸಹಿತ ಕೋವಿಡ್‌ ವಾರ್ಡ್‌ ಸಿದ್ಧವಿದ್ದು ಎಚ್ಚರಿಕೆಯಿಂದ ಇದ್ದೇವೆ. ಯಾವುದೇ ಕಾರಣಕ್ಕೂ ಕೋವಿಡ್‌ ಭಯದ ಸಂದರ್ಭವೇ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ತಿಳಿಸಿದ್ದಾರೆ.