ರಾಜ್ಯದಲ್ಲಿ ದಲಿತ ಸಿಎಂ ಕೂಗು ಇಲ್ಲ: ಸಚಿವ ಕೆ.ಎನ್.ರಾಜಣ್ಣ

| Published : Oct 06 2024, 01:15 AM IST

ರಾಜ್ಯದಲ್ಲಿ ದಲಿತ ಸಿಎಂ ಕೂಗು ಇಲ್ಲ: ಸಚಿವ ಕೆ.ಎನ್.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರು ಸಿಎಂ ಆಗಬೇಕು ಎನ್ನುವವರಲ್ಲಿ ನಾನೂ ಕೂಡ ಒಬ್ಬ.

ಹೊಸಪೇಟೆ: ದಲಿತ ಸಿಎಂ ಆಗಬೇಕು ಎನ್ನುವುದರಲ್ಲಿ ನಾನು ಸಹ ಒಬ್ಬ. ರಾಜ್ಯದಲ್ಲಿ ದಲಿತ ಸಿಎಂ ಕೂಗು ಇಲ್ಲ, ಅದು ಮಾಧ್ಯಮದವರ ಕೂಗು ಅಷ್ಟೇ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಸಿಎಂ ಆಗಬೇಕು ಎನ್ನುವವರಲ್ಲಿ ನಾನೂ ಕೂಡ ಒಬ್ಬ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ನಾನಂತೂ ಸಿಎಂ ರೇಸ್‌ನಲ್ಲಿ ಇಲ್ಲ. ಚುನಾವಣೆ ರಾಜಕಾರಣದಿಂದ ದೂರ ಉಳಿದು, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳೆ ಭೇಟಿಗೆ ಯಾವುದೇ ಪುಷ್ಟಿ ನೀಡುವ ಅಗತ್ಯವಿಲ್ಲ. ಖರ್ಗೆಯವರ ಆರೋಗ್ಯ ವಿಚಾರಿಸಲು ಜಾರಕಿಹೊಳಿ ಹೋಗಿದ್ದಾರೆ. ಆ ಬಗ್ಗೆ ಚರ್ಚೆಯ ಅಗತ್ಯವಿಲ್ಲ ಎಂದರು.

ಮುಡಾ ಕೇಸಲ್ಲಿ ರಾಜಕಾರಣ:

ಮುಡಾ ಹಗರಣದ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಯಾವುದೇ ಪಾತ್ರವಿಲ್ಲ. ಪ್ರಕರಣದಲ್ಲಿ ಅವರು ಎಲ್ಲಿಯಾದರೂ ಒಂದೇ ಒಂದು ಮಾತನಾಡಿರುವ ಅಥವಾ ದಾಖಲೆಗಳು ಸಾಕ್ಷಿಗಳು ಇದ್ದರೆ ತೋರಿಸಲಿ. ತನಿಖೆಗೆ ಆದೇಶ ಮಾಡಿದ್ದಾರೆ. ಎಲ್ಲ ಪ್ರಕರಣದಲ್ಲಿ ಎಫ್‌ಐಆರ್ ಆಗಿಯೇ ತನಿಖೆ ನಡೆಯುತ್ತವೆ. ಅದರಂತೆ ಈ ಪ್ರಕರಣದಲ್ಲಿ ಎಫ್‌ಐಆರ್ ಆಗಿದೆ ಎಂದರು.

ಮುಡಾ ಪ್ರಕರಣದಲ್ಲಿ ಸಿಎಂ ಪರ ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿದ್ದಾರೆ. ವೈಯಕ್ತಿಕ ವಿಚಾರ ಎಂದು ಕೆಲ ಶಾಸಕರು ಹೇಳಿದ್ದಾರೆ. ಜೆಡಿಎಸ್‌ನಲ್ಲಿದ್ದು ಸಿಎಂ ಪರ ಮಾತನಾಡಿದ್ದರೆ, ಅವರು ಪಕ್ಷದ ಜವಾಬ್ದಾರಿ ಹೊತ್ತು ಮಾತನಾಡಿದ್ದಾರೆ. ಅವರ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕ್ರಮ ಕೈಗೊಳ್ಳಲಿ. ಜಿಟಿಡಿ ಕೋರ್‌ ಕಮಿಟಿ ಅಧ್ಯಕ್ಷ. ನಿಜಕ್ಕೂ ಜೆಡಿಎಸ್ ಶಿಸ್ತಿನ ಪಕ್ಷವಾಗಿದ್ದರೆ, ಜಿಟಿಡಿಯರನ್ನು ಉಚ್ಚಾಟನೆ ಮಾಡಬೇಕು ಎಂದರು.