3 ವರ್ಷವಾದ್ರೂ ಸ್ಥಳೀಯ ಸಂಸ್ಥೆಗಳಿಗಿಲ್ಲ ಚುನಾವಣೆ

| Published : May 20 2024, 01:31 AM IST

ಸಾರಾಂಶ

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಾಗದ ಕಾರಣ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಕಳೆದ 3 ವರ್ಷದಿಂದ ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿಳದ್ದೇ ದರ್ಬಾರ್ ಆಗಿದ್ದು ಪ್ರಜಾ ಪ್ರಭುತ್ವದ ಮೌಲ್ಯಗಳು ಕುಸಿತಗೊಳ್ಳುತ್ತಿರುವುದು ಕಳವಳಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯ ಹಿನ್ನಲೆಯಲ್ಲಿ ಅಧಿಕಾರದ ವಿಕೇಂದ್ರೀಕರಣಗೊಳಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ದಿ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಕನಸು ನುಚ್ಚುನೂರಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಾಗದ ಕಾರಣ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಕಳೆದ 3 ವರ್ಷದಿಂದ ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿಳದ್ದೇ ದರ್ಬಾರ್ ಆಗಿದ್ದು ಪ್ರಜಾ ಪ್ರಭುತ್ವದ ಮೌಲ್ಯಗಳು ಕುಸಿತಗೊಳ್ಳುತ್ತಿರುವುದು ಕಳವಳಕಾರಿಯಾಗಿದೆ.

ಮುಖ್ಯಾಧಿಕಾರಿಗಳದ್ದೇ ಸರ್ವಾಧಿಕಾರ: ಜಿಪಂ ಹಾಗೂ ತಾಪಂ ಮೀಸಲಾತಿ ನಿಗಧಿಗೆ ಸರ್ಕಾರವು ಮೀನಮೇಷ ಎಣಿಸುತ್ತಿದೆ, ಆಡಳಿತಾಧಿಕಾರಿಗಳ ಆಡಳಿತದಲ್ಲೇ ನಡೆಸಲಾಗುತ್ತಿದೆ, ಇದೇ ರೀತಿ ನಗರಸಭೆ, ಪುರಸಭೆ, ಎಪಿಎಂಸಿಗಳಲ್ಲೂ ಸಹ ಅಧ್ಯಕ್ಷ, ಉಪಾಧ್ಯಕರ ಚುನಾವಣೆ ಇಲ್ಲದೆ ಪೌರಾಯುಕ್ತರು, ಮುಖ್ಯಾಧಿಕಾರಿಗಳದ್ದೇ ಸರ್ವಾಧಿಕಾರವಾಗಿದೆ.

ಇದೇ ರೀತಿ ಸಹಕಾರ ಇಲಾಖೆಯ ಡಿಸಿಸಿ ಬ್ಯಾಂಕ್‌ಗೂ ಜಾಡ್ಯ ಅಂಟಿದೆ, ಹೀಗಾಗಿ ಎಲ್ಲೆಡೆ ಅಧಿಕಾರಿಗಳದ್ದೇ ದರ್ಬಾರ್ ಆಗಿದ್ದು ತೆರೆ ಮರೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಎಂಬುವುದು ಇಂದು ಅಧಿಕಾರಿಗಳ ಹಕ್ಕು ಆಗಿದೆ.ವಿವಿಧ ಕಾರಣಗಳಿಂದ ಚುನಾವಣೆಗಳನ್ನು ಮುಂದೂಡುತ್ತಾ ಬರುತ್ತಿದ್ದ ಪರಿಣಾಮವಾಗಿ ಜಿಲ್ಲಾ ಮತ್ತು ತಾಪಂ ಸದಸ್ಯರ 5 ವರ್ಷಗಳ ಅಧಿಕಾರದ ಅವಧಿಯು ಮುಗಿದ ಬಳಿಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸುಮಾರು ೩ ವರ್ಷಗಳಿಗೂ ಹೆಚ್ಚು ಕಾಲವಾಗಿದ್ದು, ರಾಜ್ಯದ ಇತಿಹಾಸದಲ್ಲೇ ದಾಖಲಾರ್ಹವಾಗಿದೆ.

ಚುನಾವಣೆ ಆಕಾಂಕ್ಷಿಗಳ ನಿರಾಸೆ:

ಈ ಹಿಂದೆ ಅವಧಿ ಮುಗಿದ ೬ ತಿಂಗಳ ಒಳಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಗಳು ನಡೆಸುತ್ತಿದ್ದವು, ಆದರೆ ಈಗಾ ನಿರಾಂತರವಾಗಿ ಮುಂದೂಡುತ್ತಲೇ ಬರಲಾಗುತ್ತಿರುವುದು ವಿಪರ್ಯಾಸವಾಗಿದೆ. ಚುನಾವಣೆಗಳಿಗೆ ಸ್ಪರ್ಧಿಸಬೇಕೆಂಬ ಆಕಾಂಕ್ಷಿಗಳು ಭಾರಿ ನಿರಾಸೆ ಹೊತ್ತಿದ್ದಾರೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಮತ್ತು ತಾಪಂ ಸದಸ್ಯರ ೫ ವರ್ಷಗಳ ಅವಧಿ ಮುಗಿದ ಬಳಿಕ ಚುನಾವಣೆ ನಡೆಸಬೇಕಾಗಿದ್ದ ಬಿಜೆಪಿ ಸರ್ಕಾರವು ಕ್ಷೇತ್ರಗಳ ಮರುವಿಂಗಡಣೆ ಮಾಡಿ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂಬ ಉದ್ದೇಶದಿಂದ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆ ಮಾಡಿತ್ತು, ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಕ್ಷೇತ್ರಗಳ ವಿಂಗಡಣೆಯ ಮೀಸಲಾತಿ ನಿಗಧಿಯ ಅಧಿಕಾರ ವಾಪಸ್ಸು ಪಡೆದುಕೊಂಡ ಸರ್ಕಾರವು ಆಯೋಗಕ್ಕೆ ನೀಡಿತ್ತು, ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮೊರೆ ಹೋಗಿದ್ದರಿಂದಾಗಿ ವಿಳಂಬವಾಗಿತ್ತು. ನಂತರದಲ್ಲಿ ರಾಜ್ಯ ಸರ್ಕಾರ ಕ್ಷೇತ್ರಗಳ ಪುನರ್‌ವಿಂಗಡಣೆ, ಮೀಸಲಾತಿ ನಿಗಧಿಪಡಿಸುವ ಹೊಣೆ ಆಯೋಗಕ್ಕೆ ನೀಡಿ ಅಧಿಸೂಚನೆ ಹೊರಡಿಸಿದ್ದರಿಂದ ಆಯೋಗವು ತಟಸ್ಥವಾಗಿದೆ. ಇದಾದ ಮೇಲೆ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಿಸಬೇಕೆಂದು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರಿಂದಾಗಿ ಸರ್ಕಾರ 3 ತಿಂಗಳ ಕಾಲವಕಾಶ ಪಡೆದುಕೊಂಡಿತ್ತು. ಆದರೆ ಈ ಹೊತ್ತಿಗೆ ರಾಜ್ಯ ವಿಧಾನಸಭೆ ಚುನಾವಣೆ ಬಂದಿದ್ದರಿಂದ ನೆನಗುದಿಗೆ ಬಿದ್ದಿತು. ನಂತರ ೨೦೨೩ರಲ್ಲಿ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆ ನಡೆಸುವ ನಿರೀಕ್ಷೆ ಹೊಂದಲಾಗಿತ್ತು.

ಆರು ತಿಂಗಳಾದ್ರೂ ಮೀಸಲಾತಿ ಪ್ರಕಟಿಸಿಲ್ಲ:

ಆದರೆ ಸರ್ಕಾರ ಕ್ಷೇತ್ರಗಳ ಗಡಿ ನಿಗಧಿಪಡಿಸಿದ ಸ್ಥಾನಗಳನ್ನು ಹಂಚಿಕೆ ಮಾಡಲು ೬ ತಿಂಗಳ ಕಾಲಾವಕಾಶ ಪಡೆಯಿತು. ಬಳಿಕ ಆಯಾಯಾ ಜಿಲ್ಲೆಗಳ ಸದಸ್ಯ ಸ್ಥಾನಗಳಿಗೆ ತಕ್ಕಂತೆ ಮೀಸಲಾತಿ ಹಂಚಿಕೆ ಮಾಡಿತೇ ಹೊರತಾಗಿ ಮೀಸಲಾತಿ ಹಂಚಿಕೆ ಈವರೆಗೆ ಪ್ರಕಟಿಸಿಲ್ಲ. ಹೀಗಾಗಿ ಚುನಾವಣಾ ಆಯೋಗವು ಮತ್ತೆ ಮೀಸಲಾತಿ ನಿಗಧಿಪಡಿಸಲು ಸರ್ಕಾರವು ವಿಳಂಬ ಧೋರಣೆ ಪಾಲನೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರಿಂದ 3 ತಿಂಗಳ ಸಮಯ ಪಡೆದುಕೊಂಡಿತ್ತು, ಆದರೆ ೬ ತಿಂಗಳು ಕಳೆದರೂ ಸಹ ಇನ್ನು ಮೀಸಲಾತಿ ಪ್ರಕಟಿಸಿಲ್ಲ. ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಂತೆ ಚುನಾವಣೆ ನಡೆಸಲು ಮುಂದಾಗಬೇಕಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಬರುವ ಅನುದಾನ ಹಂಚಿಕೆಯು ನಮ್ಮಿಂದ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ಒಳಗೊಳಗೆ ವಿರೋಧ ಮಾಡುವ ಮೂಲಕ ವಿಳಂಭ ಮಾಡಲಾಗುತ್ತಿದೆ ಕಳೆದ ೩ ವರ್ಷದಿಂದ ಜನಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. ಮಿನರಲ್‌ ಡಾಲರ್‌ ಪ್ರಶ್ನೆಯಾದ ಚುನಾವಣೆ:

ಈ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಕದತಟ್ಟಲು ಸಜ್ಜಾಗುತ್ತಿದೆ ಎಂಬ ಮಾಹಿತಿ ಇದೆ ಜಿಪಂಗೆ ಐಎಎಎಸ್‌ ಅಧಿಕಾರಿಗಳನ್ನು, ತಾಪಂಗೆ ಕೆಎಎಸ್. ಅಧಿಕಾರಿಗಳನ್ನು ನೇಮಕ ಮಾಡಿ ಈಗಾಗಲೇ ೩ ವರ್ಷಗಳು ಕಳೆದಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ರಾಜ್ಯ ಸರ್ಕಾರ ಯಾವಾಗ ಚುನಾವಣೆ ನಡೆಸಲಿದೆ ಎಂಬುವುದು ಪ್ರಸ್ತುತ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.