ಜನಪ್ರತಿನಿಧಿ, ಸಮಾಜದ ಮಧ್ಯೆ ಕಂದಕ ಸಲ್ಲದು

| Published : Jan 30 2025, 01:46 AM IST

ಸಾರಾಂಶ

ಜನಪ್ರತಿನಿಧಿಗಳು, ಸಮಾಜದ ಮಧ್ಯೆ ದೊಡ್ಡ ಕಂದಕಗಳು ಉಂಟಾಗಿದ್ದರಿಂದಲೇ ಮತ ನೀಡಿದ ಜನರಿಗೆ ಯಾವುದೇ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದರು.

- ಮಲೆಬೆನ್ನೂರು ಸಾರ್ವಜನಿಕ ಜನತಾ ಅದಾಲತ್‌ನಲ್ಲಿ ಜಿ.ಬಿ.ವಿನಯಕುಮಾರ ಅಭಿಮತ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜನಪ್ರತಿನಿಧಿಗಳು, ಸಮಾಜದ ಮಧ್ಯೆ ದೊಡ್ಡ ಕಂದಕಗಳು ಉಂಟಾಗಿದ್ದರಿಂದಲೇ ಮತ ನೀಡಿದ ಜನರಿಗೆ ಯಾವುದೇ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಹೇಳಿದರು.

ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ಸ್ವಾಭಿಮಾನಿ ಬಳಗ ಆಯೋಜಿಸಿದ್ದ ಸಾರ್ವಜನಿಕ ಜನತಾ ಅದಾಲತ್‌ನಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ-25ರಲ್ಲಿ ಪದೇಪದೇ ಅಪಘಾತವಾಗುತ್ತಿವೆ. ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ವಾಹನ ಸವಾರರು ಗಾಯಗೊಂಡಿದ್ದಾರೆ ಎಂದರು.

ಹೊನ್ನಾಳಿ, ಹರಿಹರ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆಯಾದವರು ಈವರೆಗೂ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿಯ ಅಗಲೀಕರಣಕ್ಕೆ ಕಾಳಜಿ ತೋರಿಸಿಲ್ಲ. ಒಂದೂವರೆ ವರ್ಷದಿಂದ ನಾನೂ ಓಡಾಡುತ್ತಿದ್ದೇನೆ. ಹರಿಹರದಿಂದ ಹೊನ್ನಾಳಿಗೆ ಹೋಗುವ ರಸ್ತೆಯಲ್ಲಿ ಅಪಘಾತಗಳಾಗಿವೆ. ಈ ಭಾಗದ ಜನರಿಗೆ ಅನ್ಯಾಯವಾಗುತ್ತಲೇ ಇದೆ. ವ್ಯಾಪಾರಿಗಳು, ಆಟೋ ಚಾಲಕರು, ಲಘು ವಾಹನ, ಭಾರಿ ವಾಹನಗಳ ಚಾಲಕರು, ಜನರು ತಮ್ಮ ಪಾಡಿಗೆ ತಾವಿದ್ದಾರೆ. ಹಾಗಾಗಿ, ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ಸಮಸ್ಯೆಗೆ ಸ್ಪಂದಿಸಬೇಕಾದ, ಪರಿಹರಿಸಬೇಕಾದವರೆ ಸುಮ್ಮನಿದ್ದರೆ ಹೆದ್ದಾರಿ ಅಗಲೀಕರಣ ಆಗುವುದಾದರೂ ಯಾವಾಗ ಎಂದು ಪ್ರಶ್ನಿಸಿದರು.

2011ರಲ್ಲಿ ಭೈರನಪಾದ ಯೋಜನೆಗೆ ಅನುಮೋದನೆ ಸಿಕ್ಕಿದ್ದರೂ ಈವರೆಗೆ ಒಂದು ಹನಿ ನೀರು ಬಂದಿಲ್ಲ. 4 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುವ ಯೋಜನೆ ಇನ್ನೂ ಜಾರಿಗೊಂಡಿಲ್ಲ. ರೈತರ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ನಾವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರಾಗಿ ಬಂದಿಲ್ಲ. ರಾಜಕೀಯಕ್ಕೆ ಹಾಗೂ ಹರಿಹರ ಶಾಸಕನಾಗಬೇಕೆಂಬ ಬಯಕೆ ಇಟ್ಟುಕೊಂಡು ಸಾರ್ವಜನಿಕ ಜನತಾ ಅದಾಲತ್ ನಡೆಸುತ್ತಿಲ್ಲ. ಕೇವಲ ಇಲ್ಲಿ ಮಾತ್ರವಲ್ಲ, ಯಾದಗಿರಿ ಸೇರಿದಂತೆ ರಾಜ್ಯದ ಎಲ್ಲೆಡೆಯೂ ಇಂಥ ಅದಾಲತ್ ನಡೆಸುತ್ತೇವೆ ಎಂದರು.

ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಶೆಟ್ಟರ, ರಾಜು ಮೌರ್ಯ, ರಾಜು ಕಣಗಣ್ಣನವರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ರಾಜ್ಯ ಸಂಚಾಲಕರಾದ ಮೊಹಮ್ಮದ್ ಸಾಧಿಕ್, ಎಸ್. ಚಂದ್ರಶೇಖರ್, ಅಜ್ಜಯ್ಯ ಮತ್ತಿತರರು ಹಾಜರಿದ್ದರು.

- - -

ಬಾಕ್ಸ್‌ಭಾಷಣಕ್ಕೆ ಪುರಸಭೆ ಅಧಿಕಾರಿಗಳ ಅಡ್ಡಿ! ಸಾರ್ವಜನಿಕ ಜನತಾ ಅದಾಲತ್‌ನಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಮಾತನಾಡುವಾಗ ಮಲೇಬೆನ್ನೂರು ಪುರಸಭೆ ಅಧಿಕಾರಿಗಳು ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಮೈಕ್ ಆಫ್ ಮಾಡಿ ಎಂದು ಪದೇ ಪದೇ ಅಧಿಕಾರಿಗಳು ಒತ್ತಡ ಹೇರಲು ಪ್ರಯತ್ನಿಸಿದರು.

ಇದರಿಂದ ಒಂದು ಹಂತದಲ್ಲಿ ಬೇಸರಗೊಂಡ ವಿನಯಕುಮಾರ, ಯಾಕೆ ಒತ್ತಡ ಹಾಕುತ್ತೀರಾ? ಜನರ ಸಮಸ್ಯೆಗೆ ಸ್ಪಂದಿಸಲು ಬಂದಿದ್ದೇವೆ ಎಂದು ಹೇಳಿದರು. ಆದರೂ, ಪುರಸಭೆಯ ಸಿಬ್ಬಂದಿ ಮೈಕ್‌ನಲ್ಲಿ ಮಾತನಾಡಬೇಡಿ, ನಿಲ್ಲಿಸಿ ಎಂದು ಪದೇಪದೇ ಕಿರಿಕಿರಿ ಮಾಡಿದರು. ಆಗ ಯಾರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದೀರಾ ಎಂದು ವಿನಯಕುಮಾರ ಒಂದುಕ್ಷಣ ತರಾಟೆಗೆ ತೆಗೆದುಕೊಂಡ ನಂತರವಷ್ಟೇ ಅಧಿಕಾರಿಗಳು ಸುಮ್ಮನಾದರು.

- - - -27ಕೆಡಿವಿಜಿ7, 8:

ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಸಾರ್ವಜನಿಕ ಜನತಾ ಅದಾಲತ್ ನಲ್ಲಿ ಮಾತನಾಡಿದರು.