ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಟಿ, ಉದ್ಯಮಿ ರನ್ಯಾಗೆ ಕೈಗಾರಿಕೆ ಜಮೀನು ಮಂಜೂರಾತಿಯಲ್ಲಿ ಕಾನೂನು ಲೋಪದೋಪವಾಗಿಲ್ಲ. ಇದರಲ್ಲಿ ಕೈಗಾರಿಕೆ ಸಚಿವರದ್ದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಪಾತ್ರವಿಲ್ಲ ಎಂದು ಮಾಜಿ ಕೈಗಾರಿಕೆ ಸಚಿವ, ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ.ಸೋಮವಾರ ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉದ್ಯಮಿ, ನಟಿ ರನ್ಯಾ ಕೈಗಾರಿಕೆ ಸ್ಥಾಪನೆಗೆ 2022ರಲ್ಲಿ 12 ಎಕರೆ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. 2023ರ ಜನವರಿಯಲ್ಲಿ ಅದು ಕ್ಲಿಯರ್ ಆಗಿತ್ತು. ನಾನು ಅಂದು ಕೈಗಾರಿಕೆ ಸಚಿವನಾಗಿ ಚೇರ್ ಪರ್ಸನ್ ಆಗಿದ್ದೆ. ಆದರೆ, ಭೂ ಮಂಜೂರಾತಿ ಅರ್ಜಿಗಳ ಪರಿಶೀಲನೆಗೆ ಲ್ಯಾಂಡ್ ಅಡಿಟೆಡ್ ಕಮಿಟಿ ಮತ್ತು ಇಂಡಸ್ಟ್ರಿಯಲ್ ಸೆಕ್ರೆಟರಿ ಇರುತ್ತಾರೆ. ಕಮಿಟಿ ಅರ್ಜಿಯನ್ನು ಸಿಂಗಲ್ ವಿಂಡೋಗೆ ತರುತ್ತದೆ. ಸಿಂಗಲ್ ವಿಂಡೋದಲ್ಲಿ 30 ಜನ ಹಿರಿಯ ಅಧಿಕಾರಿಗಳು ಸಾಧಕ-ಬಾಧಕ ಚರ್ಚಿಸಿ, ನಟಿ ರನ್ಯಾಗೆ ಜಾಗ ಅಲಾಟಮೆಂಟ್ (ಮಂಜೂರು) ಮಾಡಿದ್ದಾರೆ. ಇದರಲ್ಲಿ ಕೈಗಾರಿಕೆ ಸಚಿವರದ್ದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಪಾತ್ರ ಅಥವಾ ಕಾನೂನು ಲೋಪದೋಷ ಇಲ್ಲ. ಯಾವುದೇ ರೀತಿ ನಾವು ಫೇವರ್ ಆಗಿ ಮಾಡಿಲ್ಲ ಎಂದಿದ್ದಾರೆ.
ಈ ಬಗ್ಗೆ ಏನೇ ಅನುಮಾನ ಇದ್ದರೂ ನನ್ನ ಸಂಪರ್ಕಿಸಬಹುದು. ನಾನು ಸ್ಪಷ್ಟೀಕರಣ ಕೊಡಲು ಸದಾ ಸಿದ್ಧನಿದ್ದೇನೆ ಎಂದ ಮಾಜಿ ಸಚಿವರು ತಿಳಿಸಿದ್ದಾರೆ.ಭೂಮಿ ರನ್ಯಾಗೆ ಹಸ್ತಾಂತರವಾಗಿಲ್ಲ:
ನಟಿ ರನ್ಯಾ ಹರ್ಷವರ್ಧಿನಿ ರನ್ಯಾ ಹೆಸರಿನಲ್ಲಿ ಕ್ಷಿರೋದಾ ಇಂಡಿಯಾ ಪ್ರೈ.ಲಿ.ಗೆ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರಾತಿಗೆ 2023ರಲ್ಲಿ ಅರ್ಜಿ ಸಲ್ಲಿಸಿದ್ದರು.ಕೆಐಎಡಿಬಿಯಿಂದ ರನ್ಯಾಗೆ ಲ್ಯಾಂಡ್ ಅಲಾಟ್‌ಮೆಂಟ್ ಆಗಿತ್ತು. ₹138 ಕೋಟಿ ವೆಚ್ಚದಲ್ಲಿ ಕಬ್ಬಿಣದ ಟಿಎಂಟಿ ಬಾರ್ ಹಾಗೂ ಕಬ್ಬಿಣ ಉತ್ಪನ್ನಗಳ ತಯಾರಿಕೆ ಕಾರ್ಖಾನೆ ಆರಂಭಿಸಿ 160 ಜನರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದ್ದರು. ತುಮಕೂರು ಶಿರಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಜಾಗ ಅಲಾಟ್‌ಮೆಂಟ್ ಆಗಿತ್ತು. ಆದರೆ ರನ್ಯಾ ಕೆಐಎಡಿಬಿಗೆ ಹಣ ಕಟ್ಟಿಲ್ಲ. ಅಲಾಟ್‌ಮೆಂಟ್ ಆದ ಭೂಮಿಯನ್ನು ರನ್ಯಾ ಪಡೆದಿಲ್ಲ. ಇದರಿಂದ ಭೂಮಿ ರನ್ಯಾಗೆ ಹಸ್ತಾಂತರವಾಗಿಲ್ಲ. ಭೂಮಿ ಕೆಐಎಡಿಬಿ ಸುಪರ್ದಿಯಲ್ಲಿದೆ ಎಂದು ಮಾಜಿ ನಿರಾಣಿ ಅವರ ಆಪ್ತರು ಮಾಹಿತಿ ನೀಡಿದ್ದಾರೆ.