ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಪ್ರತಿಯೊಬ್ಬರೂ ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ ಮಾತ್ರ ಅಮೂಲ್ಯವಾದ ನೀರನ್ನು ಜೋಪಾನವಾಗಿ ಕಾಪಾಡಲು ಸಾಧ್ಯ ಎಂದು ಚಿತ್ರದುರ್ಗ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಎಂ.ರೇಣುಕ ಪ್ರಕಾಶ್ ತಿಳಿಸಿದರು.
ಜಿಯೋ ರೈನ್ ವಾಟರ್ ಬೋರ್ಡ್ ಮತ್ತು ಆಕಾಶವಾಣಿ ಚಿತ್ರದುರ್ಗ ವತಿಯಿಂದ ನಡೆದ ಜಿಯೋ ರೈನ್ ವಾಟರ್ ಬೋರ್ಡ್ ಜಲರಕ್ಷಕರು ಪ್ರಾಯೋಜಿತ ಸರಣಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನೀರಿಲ್ಲದೆ ಜೀವನವಿಲ್ಲ. ಆದರೂ ಸಂರಕ್ಷಣೆ ಕಡೆ ಗಮನ ಕೊಡುತ್ತಿಲ್ಲ. ಜಲತಜ್ಞ ಎನ್.ಜೆ.ದೇವರಾಜರೆಡ್ಡಿ ರಾಜ್ಯಾದ್ಯಂತ ನೀರಿನ ಮಹತ್ವ ಕುರಿತು ಅರಿವು ಮೂಡಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ. ನೀರಿನ ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ಅಸಮರ್ಪಕ ಬಳಕೆಯೇ ಕಾರಣ. ಶಾಂತಿಸಾಗರ, ಕಾವೇರಿಯಲ್ಲಿಯೂ ನೀರು ಕಡಿಮೆಯಾಗಿದೆ. ಹತ್ತು ಎಪಿಸೋಡ್ ಸರಣಿ ಕಾರ್ಯಕ್ರಮದ ಮೂಲಕ ಜನತೆಯಲ್ಲಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.ವಾರ್ತಾಧಿಕಾರಿ ಬಿ.ವಿ.ತುಕಾರಾಂ ಮಾತನಾಡಿ, ನೀರಿಲ್ಲದ ಬದುಕು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನೀರಿಗಾಗಿ ದೇಶ ದೇಶಗಳ ನಡುವೆ ಯುದ್ಧವಾದರೂ ಆಶ್ಚರ್ಯವಿಲ್ಲ. ಜಾನುವಾರು ಜನಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದು ಜಿಲ್ಲಾಡಳಿತದಿಂದ ಕ್ರಿಯಾ ಯೋಜನೆ ಸಿದ್ಧವಾಗಿದೆ. ಪರಿಸರ ಕಾಡುಗಳ ನಾಶ. ಜಾಗತೀಕರಣದಿಂದ ನಗರೀಕರಣದೆಡೆಗೆ ಸಾಗುತ್ತಿರುವುದು ಕೂಡ ನೀರಿನ ಕೊರತೆಗೆ ಕಾರಣವಾಗಿದೆ. ಸರ್ಕಾರದ ಎಲ್ಲಾ ಪ್ರಯತ್ನಗಳಿಗೆ ಜನಸಾಮಾನ್ಯರು ಕೈಜೋಡಿಸ ಬೇಕು. ಭೂಮಿಯಿಂದ ನೀರನ್ನು ಮೇಲಕ್ಕೆತ್ತುವ ಕೆಲಸವಾಗುತ್ತಿದೆಯೇ ವಿನಾ ನೀರನ್ನು ಇಂಗಿಸುವ ಕಡೆ ಯಾರೂ ಗಮನ ಕೊಡುತ್ತಿಲ್ಲದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಅಂರ್ತಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡುತ್ತ, ಆಕಾಶವಾಣಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಂದಲೇ ಮಾತನಾಡಿಸುವ ಮೂಲಕ ನೀರಿನ ಮಿತ ಬಳಕೆ ಹಾಗೂ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮಗಳನ್ನು ನೀಡಬೇಕಾದರೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಚಿತ್ರದುರ್ಗ ಆಕಾಶವಾಣಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ನೀಡಿದ ಮೂರು ಕಾರ್ಯಕ್ರಮಗಳಿಂದ ವಿಭಿನ್ನವಾದ ಪಾಠ ಕಲಿತಿದ್ದೇನೆ ಎಂದರು.ಎಂ.ಎಸ್.ದ್ಯಾಮಲಾಂಭ ವೇದಿಕೆಯಲ್ಲಿದ್ದರು. ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನ ಸಂಗಪ್ಪ ತೇರದಾಳ್, ಚಿತ್ರದುರ್ಗ ಜಿಲ್ಲೆ ಚಳ್ಳೆಕೆರೆ ತಾಲ್ಲೂಕಿನ ಜುಂಜರಗುಂಟೆ
ಗ್ರಾಮದ ಬಿ.ಶ್ರೇಯಸ್, ನರಸಿಂಹಸ್ವಾಮಿ, ಚಿತ್ರದುರ್ಗ ನಗರದ ಚಿಕ್ಕಪೇಟೆಯ ರೂಪ ಪಾಂಡುರಂಗರಾವ್, ಗೋನೂರು ಗ್ರಾಮದ ಉಷ ಎಂ.ಮಂಜಣ್ಣ, ಬಚ್ಚಬೋರನಹಟ್ಟಿಯ ಸಣ್ಣಬೋರಯ್ಯ, ನಗರದ ಕೆ.ಮೂಗಬಸಪ್ಪ, ಮೊಳಕಾಲ್ಮುರು ತಾಲ್ಲೂಕಿನ ಓಬಣ್ಣ ಪಾಪಣ್ಣ, ಹಿರಿಯೂರು ತಾಲ್ಲೂಕಿನ ಗಿರೀಶ್, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಗ್ರಾಮದ ಸುಬ್ರಾಯ ಎಲ್.ಹೆಗ್ಡೆ ಇವರುಗಳಿಗೆ ಬಹುಮಾನ ವಿತರಿಸಲಾಯಿತು.50 ವರ್ಷದಲ್ಲಿ 6 ಕೋಟಿ ಕೊಳವೆಬಾವಿ !ಇನ್ನು, ಕೆರೆ, ನದಿ, ಬಾವಿ, ಡ್ಯಾಂ ಹೀಗೆ ಎಲ್ಲಾ ನೀರು ಕಲುಷಿತಗೊಂಡಿದೆ. ಹಣ ನೀಡಿ ಬಾಟಲ್ ನೀರು ಕುಡಿಯುತ್ತಿರುವುದು ಸೇವನೆಗೆ ಯೋಗ್ಯವಲ್ಲ. ಐವತ್ತು ವರ್ಷದಲ್ಲಿ ಆರು ಕೋಟಿ ಕೊಳವೆಬಾವಿಗಳನ್ನು ದೇಶದಲ್ಲಿ ಕೊರೆಯಲಾಗಿದೆ. ಚಿತ್ರದುರ್ಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಮಳೆ ನೀರು ಕುಡಿಯಲು ಬಳಸಲಾಗುತ್ತಿದೆ. ಮಳೆ ನೀರು ಕೊಯ್ಲು ಕುರಿತು ಮನೆ ಮನೆಗಳಲ್ಲಿ ಜಾಗೃತಿ ಮೂಡಬೇಕಿದೆ ಎಂದು ಅಂರ್ತಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಹೇಳಿದರು.