ಕನಕಪುರ: ಅಧಿಕಾರ ಪಡೆದು ವಲಸೆ ಹೋಗುವ ಮಂದಿಯಿಂದ‌ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ‌ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಮರಸಪ್ಪ ರವಿ, ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ‌ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಅಲ್ಲಿನ‌ ಒತ್ತಡ ಕಡಿಮೆ ಮಾಡಲು ಬೆಂಗಳೂರನ್ನು ವಿಸ್ತರಣೆ ಮಾಡಬೇಕೆಂದು ಹೇಳುತ್ತಿದ್ದ ಕುಮಾರಸ್ವಾಮಿ, ಈಗ ಬಿಡದಿ ಸ್ಮಾರ್ಟ್ ಸಿಟಿಯ ಬಗ್ಗೆ ತಗಾದೆ ತೆಗೆದು ಜನರನ್ನು ಎತ್ತಿಕಟ್ಟುವ ಕುಯುಕ್ತಿ ರಾಜಕಾರಣ ಮಾಡುತ್ತಿದ್ದಾರೆ. 2006ರಲ್ಲಿ ಬಿಡದಿ ಬಳಿ ಸ್ಮಾರ್ಟ್ ಸಿಟಿ ಮಾಡಲು ಅನುಮೋದನೆ ಮಾಡಿ ಕಾರ್ಯಗತ ಮಾಡಿರಲಿಲ್ಲ. ಅದನ್ನು ಡಿ.ಕೆ. ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಒತ್ತಾಸೆಯಂತೆ ಬಿಡದಿ ಟೌನಶಿಪ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

ವಲಸೆ ಬಂದವರು ಈ ನೆಲದಲ್ಲಿ ಅಧಿಕಾರ ಸವಿದು ಅಭಿವೃದ್ಧಿ ಕೆಲಸಗಳನ್ನು ಗೌಣವಾಗಿಸಿ, ಈಗ ಬೇರೊಂದು ಜಿಲ್ಲೆಗೆ ಪಲಾಯನ ಮಾಡಿ, ಅಲ್ಲಿ ಅಧಿಕಾರದ ಸಿಹಿ ಅನುಭವಿಸುತ್ತಿದ್ದಾರೆ. ಮುಂದೆ ಮತ್ತೆಲ್ಲಿಗೆ ಹೋಗುತ್ತಾರೋ ಯಾರಿಗೆ ಗೊತ್ತು. ವಲಸಿಗ ಕುಮಾರಸ್ವಾಮಿ ಅವರು ಎಚ್‌ಡಿ ಇನ್ಸಿಯಲ್ ತೆಗೆದು, ರಾಮನಗರಕ್ಕೆ ಬಂದಾಗ ಆರ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣಕ್ಕೆ ಹೋದಾಗ ಸಿ.ಡಿ.ಕುಮಾರಸ್ವಾಮಿ ಎಂದು ತಮ್ಮ ಇನ್ಸಿಯಲ್ ಬದಲಿಸಿಕೊಳ್ಳಬೇಕಿತ್ತು. ಈಗ ಮಂಡ್ಯಕ್ಕೆ ಹೋಗಿದ್ದಾರೆ. ಅಲ್ಲಿಯಾದರೂ ಎಂ.ಡಿ.ಕುಮಾರಸ್ವಾಮಿ ಎಂದು ಬದಲಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ನಿಖಿಲ್ ರಾಜಕೀಯದಲ್ಲಿನ್ನು ಎಳಸು. ನಿಖಿಲ್ ವಯಸ್ಸಿನಲ್ಲಿ ಡಿ.ಕೆ.‌ಶಿವಕುಮಾರ್ ಅವರು ಜಿಲ್ಲಾ ಪರಿಷತ್ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿದ್ದರು. ಇಂತಹವರಿಂದ ಪಾಠ ಕಲಿಯವ ಅಗತ್ಯವಿಲ್ಲ. ಅಧಿಕಾರದ ಹಪಾಹಪಿಯಿಂದ ಮಾಧ್ಯಮದಲ್ಲಿ ಅವರ ತಂದೆ ಹೇಳಿಕೊಟ್ಟ ಸುಳ್ಳಿನ ಪುಂಗಿಯನ್ನು ಊದುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಂತ ಚುನಾವಣೆಗಳಲ್ಲಿ‌ ಸೋಲಿನ‌ ರುಚಿ ಅನುಭವಿಸಿರುವ ನಿಖಿಲ್ ಅವರು, ಡಿ.ಕೆ.‌ಶಿವಕುಮಾರ್ ಅವರ ಬಗ್ಗೆ ಮಾತನಾಡಿ ದೊಡ್ಡವರಾಗಲು ಹೊರಟಿದ್ದಾರೆ. ಸ್ಮಾರ್ಟ್ ಸಿಟಿ ಪರವಾಗಿರುವ ರೈತರು ಮತ್ತು ರೈತ ಮುಖಂಡರನ್ನು ಏಜೆಂಟರು, ದಳ್ಳಾಲಿಗಳು ಎಂದು ಕರೆಯುವ ಇವರು ಮಣ್ಣಿನ ಮೊಮ್ಮಗನ ಎಂದು ಟಾಂಗ್ ನೀಡಿದ್ದಾರೆ.


ಇವರ ಇಂತಹ ವರ್ತನೆಗಳಿಂದ ಇವರ ಪಕ್ಷ ಮೂಲೆ ಗುಂಪಾಗಿ, ಈಗ ಕೇಸರಿಮಯವಾಗುತ್ತಿದೆ. ಕೇಸರಿ ಪಡೆ ಹೇಳಿಕೊಟ್ಟಿದ್ದನ್ನು ಪುಂಗಿ ಊದುತ್ತಾ ಪುಂಗಿ ದಾಸರಂತೆ ಅಪ್ಪ-ಮಗ ವರ್ತಿಸುತ್ತಿದ್ದಾರೆ. ಇಂತಹ ಬಾಲಿಷ ಹೇಳಿಕೆಗೆ ಡಿಕೆ‌ ಸಹೋದರರು ಎದುರುವ ಜಾಯಮಾನದವರಲ್ಲ. ಇವರು ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೇ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು‌ ಎಚ್ಚರಿಸಿದ್ದಾರೆ.

ಕೆ ಕೆ ಪಿ ಸುದ್ದಿ 03: ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಮರಸಪ್ಪ ರವಿ