ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ
ನೀಲನಕ್ಷೆ ರೂಪಿಸಿ ಕಾಮಗಾರಿ ಆರಂಭಿಸಿ ಅದು ಪೂರ್ಣಗೊಳ್ಳುವ ಮೊದಲೇ ಇಲ್ಲಿನ ಟುಪಲೇವ್ ಯುದ್ಧ ವಿಮಾನ ಮ್ಯೂಸಿಯಂ ಉದ್ಘಾಟನೆ ಮಾಡಿದ ಕೆಲ ಸಮಯದಲ್ಲೇ ವಿಮಾನದ ಒಳ ಪ್ರವೇಶ ನಿರ್ಬಂಧಿಸಲಾಗಿದೆ.ಕಳೆದ ಆಗಸ್ಟ್ ತಿಂಗಳಲ್ಲಿ ಟುಪಲೇವ್ ಯುದ್ಧ ವಿಮಾನದ ಬಿಡಿಭಾಗಗಳನ್ನು ೯ ಟ್ರಕ್‌ಗಳಲ್ಲಿ ಚೆನೈನಿಂದ ಕಾರವಾರಕ್ಕೆ ತರಲಾಗಿತ್ತು. ಬಳಿಕ ಜೋಡಣಾ ಕೆಲಸ, ಸುತ್ತಮುತ್ತ ಇತರೆ ಕಾಮಗಾರಿ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ಚಾಪೆಲ್ ಯುದ್ಧನೌಕೆ ದುರಸ್ತಿ ಮಾಡಬೇಕಿದ್ದ ಕಾರಣ ಸಂಗ್ರಹಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು.
ಸಾರ್ವಜನಿಕರಿಂದ ಒತ್ತಡ ಬರುತ್ತಿದ್ದಂತೆ ಶನಿವಾರ ಉದ್ಘಾಟನೆ ಮಾಡಲಾಗಿದೆ. ಆದರೆ, ವಿಪರ್ಯಾಸವೆಂದರೆ ಟುಪಲೇವ್ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ತರಾತುರಿಯಲ್ಲಿ ಉದ್ಘಾಟನೆ ಮಾಡಿ ಹಾಗೆಯೇ ಬಾಗಿಲು ಹಾಕಲಾಗಿದೆ. ಈ ವಿಮಾನದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಎ.ಸಿ ವ್ಯವಸ್ಥೆ ಕಲ್ಪಿಸಿಲ್ಲ. ಆದರೂ ಆತುರದಲ್ಲಿ ಉದ್ಘಾಟನೆ ಮಾಡಲಾಗಿದ್ದು, ಪ್ರವಾಸಿಗರು ಹೊರಗಿನಿಂದಲೇ ವಿಮಾನ ನೋಡುವ ಪರಿಸ್ಥಿತಿ ಎದುರಾಗಿದೆ.ಶನಿವಾರ ಕಾರವಾರ ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಟುಪಲೇವ್ ವಿಮಾನ, ನವೀಕರಣಗೊಂಡ ಚಾಪೆಲ್ ಯುದ್ಧ ನೌಕೆಯನ್ನು ಉದ್ಘಾಟನೆ ಮಾಡಿದರು.
ಆದರೆ ಟುಪಲೇವ್ ವಿಮಾನದ ಕಾಮಗಾರಿ ಬಾಕಿ ಇರುವ ಕಾರಣ ಒಳ ಪ್ರವೆಶ ನಿರ್ಬಂಧಿಸಲಾಗಿದೆಕೆಲ ದಿನಗಳಲ್ಲಿ ಅವಕಾಶಚಾಪೆಲ್ ಯುದ್ಧ ನೌಕೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ₹68 ಲಕ್ಷ ವೆಚ್ಚದಲ್ಲಿ ನಡೆದ ದುರಸ್ತಿ ಕಾರ್ಯದಲ್ಲಿ ನೌಕೆಯ ತುಕ್ಕು ಹಿಡಿದ ಭಾಗಗಳನ್ನು ಸರಿಪಡಿಸಿ ಸುಣ್ಣ ಬಣ್ಣ ಹೊಡೊಯಲಾಗಿದೆ. ಟುಪಲೇವ್ ಯುದ್ಧ ವಿಮಾನದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಹವಾ ನಿಯಂತ್ರಿತ ವ್ಯವಸ್ಥೆಯನ್ನು ಕಲ್ಪಿಸಿ ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಅವಕಾಶ ನೀಡುತ್ತೇವೆ. ವಾಣಿಜ್ಯ ಮಳಿಗೆ, ಕಾಂಪೌಂಡ್ ಹಾಗೂ ಯುದ್ಧ ವಿಮಾನದ ಬಗ್ಗೆ ಪ್ರವಾಸಿಗರಿಗೆ ತಿಳಿಸಲು ಎಲ್‌ಇಡಿ ವ್ಯವಸ್ಥೆ ಮಾಡಬೇಕಿದೆ.
ಎಚ್.ವಿ. ಜಯಂತ, ಪ್ರಭಾರ ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ