ಸಾರಾಂಶ
ಚಾಮರಾಜನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಶಿವರಾಜ್ ಸಿದ್ದಯ್ಯನಪುರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ನಮ್ಮ ಸಮಾಜದ ವಿರೋಧವಿಲ್ಲ ಎಂದು ದಲಿತ ಮುಖಂಡ ಶಿವರಾಜ್ ಸಿದ್ದಯ್ಯನಪುರ ಸ್ಪಷ್ಟಪಡಿಸಿದ್ದಾರೆ.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಒಂದೇ ಆಗಿದ್ದು, ಬಸವೇಶ್ವರರಿಗೆ ಎಲ್ಲಾ ಸಮಾಜದಲ್ಲೂ ಅನುಯಾಯಿಗಳಿದ್ದಾರೆ. ಅವರ ಪುತ್ಥಳಿ ಸ್ಥಾಪನೆಗೆ ದಲಿತ ಸಮುದಾಯದ ವಿರೋಧವಿಲ್ಲ ಎಂದರು.
ಇತ್ತೀಚಿಗೆ ಮಂಡ್ಯ ಮೂಲದ ಸಿ.ಎಂ.ಕೃಷ್ಣ ಎನ್ನುವ ವ್ಯಕ್ತಿ ಪತ್ರಿಕಾಗೋಷ್ಠಿ ನಡೆಸಿ ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಿದರೆ ಸಂಘರ್ಷಕ್ಕೆ ಎಡೆಮಾಡಿ ಕೊಡುತ್ತದೆ. ರಾಜಪ್ರಭುತ್ವ ಸಂಕೇತವಾಗಿರುವ ಕತ್ತಿ, ಗುರಾಣಿ ಹಿಡಿದು ಕುದುರೆ ಮೇಲೆ ಹೋಗುತ್ತಿರುವ ವಿನ್ಯಾಸದ ಬಸವೇಶ್ವರ ಪುತ್ಥಳಿಯನ್ನು ಜಿಲ್ಲಾಡಳಿತ ಪ್ರತಿಸ್ಥಾಪನೆ ಮಾಡುತ್ತಿದೆ ಎಂದು ಹೇಳಿದ್ದರು. ಅವರ ಹೇಳಿಕೆಗೆ ನಮ್ಮ ಸಹಮತವಿಲ್ಲ ಎಂದು ಹೇಳಿದ್ದಾರೆ.ಆಶೀರ್ವಾದ ವಿನ್ಯಾಸದ ಪ್ರತಿಮೆ:
ಜಿಲ್ಲಾಡಳಿತ ಸ್ಥಾಪನೆ ಮಾಡುತ್ತಿರುವುದು ಕತ್ತಿ, ಗುರಾಣಿ ವಿನ್ಯಾಸದ ಪ್ರತಿಮೆಯಲ್ಲ. ಬದಲಾಗಿ ಅಶ್ವಾರೂಢ ಆಶೀರ್ವಾದ ಮಾಡುತ್ತಿರುವ ವಿನ್ಯಾಸದ ಬಸವೇಶ್ವರ ಪ್ರತಿಮೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಕೋರ್ಟ್ ಆದೇಶಕ್ಕೂ ಇದಕ್ಕೂ ಸಂಬಂಧವಿಲ್ಲ. ಕೋರ್ಟ್ ಆದೇಶ 2012ರಲ್ಲಿ ಆಗಿರುವುದು 2011ರ ಬಸವೇಶ್ವರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮೇ 5 ರಂದು ಅಂದಿನ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲು ಅಂದಾಜು ಪಟ್ಟಿ ಆಹ್ವಾನಿಸಿದ್ದು, 15 ಅಡಿ ಎತ್ತರದ ಕಂಚಿನ ಮೂರ್ತಿ ಮಾಡಿಕೊಡಲು ಮೈಸೂರಿನ ಪ್ರಮೋದಿನಿ ದೇಶಪಾಂಡೆ ಅವರು ₹28ಲಕ್ಷ ಅಂದಾಜು ಪಟ್ಟಿ ನೀಡಿದ್ದಾರೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ ಕಲರ್, ನಮ್ಮನೆ ಪ್ರಶಾಂತ್, ಮಹೇಶ್ ಕೂಡ್ಲೂರು, ಸಿದ್ದಯ್ಯನಪುರ ಮೋಹನ್, ಚಿಗುರು ಬಂಗಾರು ಇದ್ದರು.